• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಲಮುರಿಯಲ್ಲೂ ಸೊರಗಿದ್ದಾಳೆ ಕಾವೇರಿ!

By ಬಿ.ಎಂ.ಲವಕುಮಾರ್
|

ಮೈಸೂರು: ಬೇಸಿಗೆಯ ದಿನಗಳಲ್ಲಿ ನದಿ, ಕೆರೆ, ಜಲಪಾತ ಎನ್ನುತ್ತಾ ಪ್ರವಾಸ ಮಾಡಿ, ಬೇಸಿಗೆ ರಜೆಯ ಮಜಾ ಅನುಭವಿಸುತ್ತಿದ್ದವರೆಲ್ಲ ಈ ವರ್ಷ ಕಂಗಾಲಾಗಿ ಕೂತಿದ್ದಾರೆ. ಪ್ರವಾಸಕ್ಕೆ ಹೋಗಿ ನೀರಿನಲ್ಲಿ ಬಿದ್ದು, ಕುಣಿದು, ಕುಪ್ಪಳಿಸಿ ಸಂಭ್ರಮಿಸುವುದಿರಲಿ, ಬಾಯಾರಿಕೆಯಾದರೆ ಕುಡಿಯುವುದಕ್ಕೂ ನೀರಿಲ್ಲದ ಪರಿಸ್ಥಿತಿ ಇಂದು ಹಲವು ಕಡೆಗಳಲ್ಲಿ ತಲೆದೂರಿದೆ.

ಬೇಸಿಗೆಯ ಝಳಕ್ಕೆ ಒಂದಷ್ಟು ಮೈತಂಪು ಮಾಡಿಕೊಂಡು ಬರಲು ಕೊಡಗಿನ ಜಲಪಾತ, ಶ್ರೀರಂಗಪಟ್ಟಣದ ಬಲಮುರಿ, ಚಾಮರಾಜನಗರದ ಶಿವನಸಮುದ್ರಕ್ಕೆ ತೆರಳೋಣ ಎಂದರೆ ಈ ಬಾರಿ ಎಲ್ಲಿಯೂ ನೀರಿಲ್ಲ.[ರಾಜಕೀಯ ನಾಯಕರ ಸ್ವಾಗತಕ್ಕೆ ಖಾಲಿ ಕೊಡಗಳು!]

ವೀಕೆಂಡ್ ಸ್ಪಾಟ್, ನಿಸರ್ಗ ಪ್ರೇಮಿಗಳ ನೆಚ್ಚಿನ ತಾಣವಾಗಿರುವ ಶ್ರೀರಂಗಪಟ್ಟಣದ ಬಳಿಯಿರುವ ಬಲಮುರಿಯಂತೂ ನೀರಿಲ್ಲದೆ ತನ್ನ ನೈಜ ಸೌಂದರ್ಯವನ್ನೇ ಕಳೆದುಕೊಂಡಿದೆ. ಬಂಡೆಗಳ ನಡುವಲ್ಲಿ ಅಲ್ಲೋ, ಇಲ್ಲೋ ಒಂದಷ್ಟು ನೀರು ಕಾಣಿಸುವುದು ಬಿಟ್ಟರೆ ಕಾವೇರಿ ಎಲ್ಲಿದ್ದಾಳೆಂದು ಹುಡುಕಬೇಕು! ಹೀಗಾಗಿ ಇತ್ತ ತೆರಳುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

ಬಿಸಿಲಿನ ಧಗೆಗೆ ಹರಿಯುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಬಲಮುರಿಯ ನದಿಯಲ್ಲಿ ಕೃತಕವಾಗಿ ನಿರ್ಮಿಸಿರುವ ಕಟ್ಟೆಯನ್ನು ದಾಟಿ ನೀರು ಹರಿಯದಂತಾಗಿದೆ. ಇಲ್ಲಿಯ ಪ್ರಮುಖ ಆಕರ್ಷಣೆಯೇ ಝರಿಝರಿಯಾಗಿ ಧುಮುಕುವ ನೀರು. ಈಗ ನೀರೇ ಇಲ್ಲದ ಮೇಲೆ ಕೇವಲ ಕಲ್ಲು ಬಂಡೆ ನೋಡೋಕೆ ಅಲ್ಲಿಗೆ ತೆರಳಬೇಕಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಒಂದು ಅಂದಾಜಿನ ಪ್ರಕಾರ ವಾರದ ಕೊನೆಗೆ ಸುಮಾರು ಮೂರು ಸಾವಿರಕ್ಕೂ ಅಧಿಕ ಪ್ರವಾಸಿಗರು ಬಲಮುರಿಗೆ ಭೇಟಿ ನೀಡಿ, ನೀರಲ್ಲಿ ಆಟವಾಡುವುದರೊಂದಿಗೆ ಪ್ರಕೃತಿಯ ರಮಣೀಯ ದೃಶ್ಯವನ್ನು ಆಸ್ವಾದಿಸಿ ಒಂದಷ್ಟು ಹೊತ್ತು ಇದ್ದು ಹೋಗುತ್ತಿದ್ದರು. ಸ್ಥಳೀಯರು ಕುಟುಂಬ ಸಹಿತ ಪಿಕ್ನಿಕ್ ಹೋಗಿ ಬರುತ್ತಿದ್ದರು. ಆದರೀಗ ವಾರಾಂತ್ಯಕ್ಕೆ ಇನ್ನೂರೋ, ಮುನ್ನೋರೋ ಮಂದಿ ಬಂದರೆ ಅದೇ ಹೆಚ್ಚು ಎಂಬ ಪರಿಸ್ಥಿತಿ ಇದೆ.[ಬಿಸಿಲ ಬೇಗೆಯ ನಡುವೆ ಮಂಗಳೂರಲ್ಲಿ ಶುರುವಾಯಿತೇ ನೀರಿನ ದಂಧೆ ?]

ಈ ವ್ಯಾಪ್ತಿಯಲ್ಲಿ ಪ್ರವಾಸಿಗರನ್ನು ನಂಬಿಕೊಂಡು ವ್ಯವಹಾರ ನಡೆಸುವ ವ್ಯಾಪಾರಸ್ಥರು, ಹೋಟೆಲ್ ಗಳಿಗೆ ವ್ಯಾಪಾರ ಕುಗ್ಗಿದ್ದು ಎಲ್ಲರೂ ಮಳೆಬಂದು ಕಾವೇರಿ ಮೈಕೈ ತುಂಬಿಕೊಂಡು ಹರಿಯುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಸದಾ ತುಂಬಿ ಹರಿಯುತ್ತಾ ಕಣ್ಮನ ಸೆಳೆಯುತ್ತಿದ್ದ ಕೃಷ್ಣರಾಜಸಾಗರ, ಗಗನಚುಕ್ಕಿ, ಎಡಮುರಿ, ಪಶ್ಚಿಮವಾಹಿನಿ, ಸಂಗಮ, ಗೋಸಾಯ್ ಘಾಟ್, ನಿಮಿಷಾಂಭ ದೇವಿ ದೇವಾಲಯದ ಬಳಿಯ ಸ್ನಾನ ಘಟ್ಟಗಳು, ಮಹದೇವಪುರ, ರಾಮಸ್ವಾಮಿ ಅಣೆಕಟ್ಟೆ, ಶಿಂಷಾ, ಶಿವನಸಮುದ್ರ, ಶಿವ ಅಣೆಕಟ್ಟೆ, ಮುತ್ತತ್ತಿ ಮೊದಲಾದವುಗಳೆಲ್ಲ ಜಲಸ್ಪಾಟ್ ಆಗಿದ್ದು, ಇಲ್ಲಿ ನೀರಿದ್ದರೆ ಮಾತ್ರ ಜನ ಬರುತ್ತಾರೆ. ಇಲ್ಲಾಂದ್ರೆ ಯಾರೂ ಇತ್ತ ಕಡೆ ಸುಳಿಯುವುದಿಲ್ಲ.

ಮುಂಗಾರಿನಲ್ಲಿ ಮಳೆ ಬಾರದ ಕಾರಣ ಎಲ್ಲೆಡೆ ನೀರಿನ ಕೊರತೆ ಕಂಡು ಬಂದಿದ್ದು ಅದರ ಹೊಡೆತ ಈ ತಾಣಗಳ ಮೇಲೆಯೂ ಬಿದ್ದಿದೆ. ಮತ್ತೆ ಈ ತಾಣಗಳು ಎಂದಿನಂತಾಗಿ ಪ್ರವಾಸಿಗರನ್ನು ಸೆಳೆಯಬೇಕಾದರೆ ಕಾವೇರಿ ಕಣಿವೆಯಲ್ಲಿ ಮಳೆ ಸುರಿಯುವುದು ಅನಿವಾರ್ಯವಾಗಿದೆ.

ಇದೆಲ್ಲದರ ನಡುವೆ ಸ್ವಲ್ಪ ನೆಮ್ಮದಿ ತಂದಿರುವ ವಿಚಾರವೆಂದರೆ ಕೊಡಗಿನಲ್ಲಿ ಆಗಾಗ್ಗೆ ಅಲ್ಲಲ್ಲಿ ಮಳೆಯಾಗುತ್ತಿದ್ದು, ಕಾವೇರಿ ನದಿಯ ನೀರಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಹೆಚ್ಚಾದಂತೆ ಕಂಡು ಬಂದಿದೆ. ಹೀಗೆ ಮುಂದುವರೆದರೆ ಎಲ್ಲರೂ ನೆಮ್ಮದಿಯುಸಿರು ಬಿಡಬಹುದೇನೋ?

English summary
The empty Balmuri falls has failed to attract more tourists these days. The everyone in the region are expecting summer shower to see beauty of Balmuri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X