ಬಿಎಸ್ ವೈ – ಈಶ್ವರಪ್ಪ ಬಣಗಳ ನಡುವೆ ಮೈಸೂರಿನಲ್ಲೂ ಮಾರಾಮಾರಿ
ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪ ನಡುವಿನ ಬಹಿರಂಗ ಕಿತ್ತಾಟದ ಬಿಸಿ ಮೈಸೂರಿಗೂ ಹರಡಿದೆ.
ಮೈಸೂರು, ಏಪ್ರಿಲ್ 28 : ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪ ನಡುವಿನ ಬಹಿರಂಗ ಕಿತ್ತಾಟದ ಬಿಸಿ ಮೈಸೂರಿಗೂ ಹರಡಿದೆ. ನಿನ್ನೆ ತಾನೇ ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಸಂಘಟನೆ ಉಳಿಸಿ' ಎಂಬ ಹೆಸರಿನಲ್ಲಿ, ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಏರ್ಪಾಡಾಗಿದ್ದ ಬಿಜೆಪಿ ಅತೃಪ್ತರ ಸಭೆಯಲ್ಲಿ ಬಿಎಸ್ ವೈ ಮತ್ತು ಈಶ್ವರಪ್ಪ ಬೆಂಬಲಿಗರ ನಡುವೆ ಮಾರಾಮಾರಿ ಏರ್ಪಟ್ಟು ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು.
ಇದೀಗ ಮೈಸೂರಿನಲ್ಲೂ ಎರಡು ಬಣಗಳ ನಡುವೆ ಮಾರಾಮಾರಿ ಏರ್ಪಟ್ಟಿದ್ದು, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿಗೆ ಕೆ.ಎಸ್. ಈಶ್ವರಪ್ಪ ಬೆಂಬಲಿಗರು ಘೇರಾವ್ ಹಾಕಿದ ಘಟನೆ ನಡೆದಿದೆ.[ನಾವು ತಂದೆ ತಾಯಿಗೆ ಹುಟ್ಟಿದವರು ಪಕ್ಷ ಬಿಡಲ್ಲ : ಈಶ್ವರಪ್ಪ]

ಮೈಸೂರಿನ ನಜರಬಾದ್ ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಿದ್ದ ಬಿ.ಜೆ.ಪುಟ್ಟಸ್ವಾಮಿ, ಕೆ.ಎಸ್ . ಈಶ್ವರಪ್ಪ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಹೇಳಿಕೆ ನೀಡಿದರು. ಇದರಿಂದ ಅಸಮಾಧಾನಗೊಂಡ ಕೆ.ಎಸ್ ಈಶ್ವರಪ್ಪ ಬೆಂಬಲಿಗರು ಬಿ.ಜೆ ಪುಟ್ಟಸ್ವಾಮಿ ಅವರಿಗೆ ಘೇರಾವ್ ಹಾಕಿ ತರಾಟೆ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.
ನಂತರ ಬಿಎಸ್ ವೈ ಬೆಂಬಲಿಗರು ಬಿಎಸ್ ಯಡಿಯೂರಪ್ಪಗೆ ಹಾಗೂ ಕೆಎಸ್ ಈಶ್ವರಪ್ಪ ಬೆಂಬಲಿಗರು ಈಶ್ವರಪ್ಪಗೆ ಜೈಕಾರ ಹಾಕಿದ್ದಾರೆ.
ರಾಜ್ಯದಲ್ಲಿ ಉಭಯ ನಾಯಕರ ಬೆಂಬಲಿಗರ ಮಾರಾಮಾರಿ ರಾಷ್ಟ್ರೀಯ ನಾಯಕರಿಗೂ ಇರಿಸುಮುರಿಸುಂಟು ಮಾಡಿದ್ದು, ಇಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜ್ಯದಲ್ಲಾಗುತ್ತಿರುವ ಅಹಿತಕರ ಬೆಳವಣಿಗೆಯ ಕುರಿತು ವರದಿ ನೀಡಲಿದ್ದಾರೆ.[ಅತೃಪ್ತರ ಸಮಾವೇಶದಲ್ಲಿ ಈಶ್ವರಪ್ಪ-ಬಿಎಸ್ವೈ ಬೆಂಬಲಿಗರ ಮಾರಾಮಾರಿ]

ಮಾರಾಮಾರಿ ಕುರಿತು ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗಿದ್ದರೂ, ಈ ಬಗ್ಗೆ ಮೌನವಾಗಿಯೇ ಇರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತಾ ಶಾ ನಿಗೂಢ ನಡೆಯ ಬಗ್ಗೆಯೂ ಈಗ ಚರ್ಚೆಯಾಗುತ್ತಿದೆ.












Click it and Unblock the Notifications