ದಸರಾ ಕ್ರೀಡಾಕೂಟದಲ್ಲಿ ಅವಕಾಶ ವಂಚಿತರಾದ ಗ್ರಾಮೀಣ ಕ್ರೀಡಾಪಟುಗಳು
ಮೈಸೂರು, ಸೆಪ್ಟೆಂಬರ್.27 : ರಾಜ ಮಹಾರಾಜರ ಕಾಲದಿಂದಲೂ ನಾಡಹಬ್ಬ ದಸರಾ ಉತ್ಸವದಲ್ಲಿ ಕಲೆ, ಸಂಸ್ಕೃತಿಗೆ ನೀಡುವಷ್ಟೇ ಆದ್ಯತೆಯನ್ನು ಕ್ರೀಡಾಕೂಟಕ್ಕೂ ನೀಡಲಾಗುತ್ತಿದೆ. ಹಾಗೆ ನೋಡಿದರೆ ಪ್ರತಿ ದಸರಾ ಕ್ರೀಡಾಕೂಟದಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕ್ರೀಡಾಪಟುಗಳು ಬೆಳಕಿಗೆ ಬರುತ್ತಿದ್ದರು.
ಆದರೆ ಈ ಸಾಲಿನ ದಸರಾ ಕ್ರೀಡಾಕೂಟದಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅವಕಾಶ ನೀಡದೆ ವಂಚಿಸಲಾಗುತ್ತಿದೆ. ದಸರಾ ಕ್ರೀಡಾಕೂಟಕ್ಕೆ ಮಾನ್ಯತೆ ನೀಡಬೇಕೆಂಬ ಉದ್ದೇಶದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಈ ಸಾಲಿನಿಂದ ದಸರಾ ಸಿಎಂ ಕಪ್' ಹೆಸರಿನೊಂದಿಗ ಕ್ರೀಡಾಕೂಟ ಸಂಘಟಿಸುತ್ತಿದೆ.
ಕ್ರೀಡಾಕೂಟಗಳ ಭವಿಷ್ಯದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ, ನೇರವಾಗಿ ರಾಜ್ಯಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲು ಮುಂದಾಗುತ್ತಿರುವುದರಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ರಾಜ್ಯದ ಬೆರಳೆಣಿಕೆಯಷ್ಟು ತಂಡಗಳು ಹಾಗೂ ಕ್ರೀಡಾಪಟುಗಳು ಮಾತ್ರ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಪಡೆಯಲಿವೆ.

ಇದರಿಂದ ತಾಲೂಕು, ಜಿಲ್ಲಾ ಮತ್ತು ವಿಭಾಗೀಯ ಮಟ್ಟದಲ್ಲಿ ಭಾಗವಹಿಸಲೇಬೇಕೆಂದು ವರ್ಷಗಟ್ಟಲೆ ಕಾಯುವ ಗ್ರಾಮೀಣ ಕ್ರೀಡಾಪಟುಗಳಿಗೆ ಅನ್ಯಾಯವಾಗಲಿದೆ. ದಸರಾ ಕ್ರೀಡಾ ಉಪ ಸಮಿತಿ, ಕ್ರೀಡಾ ಇಲಾಖೆ ಹಾಗೂ ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಜಂಟಿಯಾಗಿ ಈ ಬಾರಿಯ ದಸರಾ ಕ್ರೀಡಾಕೂಟ ಆಯೋಜಿಸುತ್ತಿವೆ.
ಒಲಿಂಪಿಕ್ಸ್ ಮಾನ್ಯತೆ ಪಡೆದ ಕ್ರೀಡೆಗಳ ಜತೆಗೆ ಕೆಲ ದೇಸಿ ಕ್ರೀಡೆಗಳನ್ನು ಅ. 10ರಿಂದ 16ರವರೆಗೆ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಇಲ್ಲಿಯವರೆಗೆ ತಾಲೂಕು ಮಟ್ಟದಲ್ಲಿ ಗೆದ್ದ ತಂಡ ಜಿಲ್ಲಾಮಟ್ಟಕ್ಕೆ ಪ್ರವೇಶ ಪಡೆಯುತ್ತಿತ್ತು.
ಜಿಲ್ಲಾ ಮಟ್ಟದಿಂದ ವಿಭಾಗೀಯ ಮಟ್ಟ ನಂತರ ರಾಜ್ಯ ಮಟ್ಟಕ್ಕೆ ಪ್ರವೇಶ ನೀಡಲಾಗುತ್ತಿತ್ತು. ಆದರೆ, ಈ ಬಾರಿ ನೇರವಾಗಿ ರಾಜ್ಯಮಟ್ಟದ ಕ್ರೀಡಾ ಕೂಟ ನಡೆಯುತ್ತಿರುವುದರಿಂದ ಗುಂಪು ಕ್ರೀಡೆಗಳ ಸ್ಪರ್ಧೆಗೆ ರಾಜ್ಯದ ಟಾಪ್ 8 ತಂಡಗಳನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ.
ಇನ್ನು ಅಥ್ಲೆಟಿಕ್ಸ್ ಸ್ಪರ್ಧೆಗಳಿಗೆ ರಾಜ್ಯದ ಟಾಪ್ 8 ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಹೆಚ್ಚಾಗಿ ಬೆಂಗಳೂರಿನ ತಂಡಗಳು ಹಾಗೂ ಕ್ರೀಡಾಪಟುಗಳು ಆಯ್ಕೆಯಾಗುವ ಸಾಧ್ಯತೆಗಳಿದ್ದು, ರಾಜ್ಯದ ಇತರ ಜಿಲ್ಲೆಗಳ ಕ್ರೀಡಾಪಟುಗಳು ಅವಕಾಶ ವಂಚಿತರಾಗಲಿದ್ದಾರೆ.
ನೇರವಾಗಿ ರಾಜ್ಯಮಟ್ಟದ ಕ್ರೀಡಾಕೂಟ ನಡೆಸುತ್ತಿರುವುದಕ್ಕೆ ಗ್ರಾಮೀಣ ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ಕ್ರೀಡಾಪಟುಗಳಿಗೆ ವರ್ಷದಲ್ಲಿ ಹಲವು ಅವಕಾಶಗಳಿವೆ.
ಆದರೆ, ಗ್ರಾಮೀಣ ಕ್ರೀಡಾಪಟುಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಡಿಮೆ. ಆದ್ದರಿಂದ ಸರ್ಕಾರ ದಸರಾ ಕ್ರೀಡಾಕೂಟವನ್ನು ಸಾಂಪ್ರದಾಯಿಕವಾಗಿಯೇ ನಡೆಸಬೇಕು. ಅದನ್ನು ಬಿಟ್ಟು ನೇರವಾಗಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜನೆಗೆ ಮುಂದಾಗಿರುವುದನ್ನು ಖಂಡಿಸಲಾಗುತ್ತಿದೆ.
ಇತ್ತ ಉದ್ಘಾಟಿಸಲು ಸಾಧಕರಿಗೆ ಆಹ್ವಾನ ನೀಡಲಾಗಿದ್ದು, ಅಥ್ಲೀಟ್ ಎಂ.ಆರ್.ಪೂವಮ್ಮ, ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಮತ್ತು ಹಾಕಿ ಆಟಗಾರ ವಿ.ಆರ್.ರಘುನಾಥ್ ಈ ಬಾರಿಯ ದಸರಾ ಕ್ರೀಡಾಕೂಟ ಉದ್ಘಾಟನೆಯಲ್ಲಿ ಭಾಗವಹಿಸುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications