ಮೈಸೂರು; ಅಪಾಯಕ್ಕೆ ಆಹ್ವಾನ ನೀಡುವ ಯುವಕರ ನೀರಾಟ!
ಮೈಸೂರು, ಏಪ್ರಿಲ್ 9; ಬಿಸಿಲ ಝಳಕ್ಕೆ ಮೈಮನ ತಂಪು ಮಾಡುವ ಸಲುವಾಗಿ ಮಕ್ಕಳು ಸೇರಿದಂತೆ ಯುವಕರು ಕೆರೆ, ನದಿ, ನಾಲೆಗಳ ನೀರಿನಲ್ಲಿ ಈಜಾಡಲು ಮುಂದಾಗುತ್ತಿದ್ದು, ಇದು ಕೆಲವಡೆ ಅಪಾಯಕ್ಕೂ ಆಹ್ವಾನ ನೀಡುತ್ತಿದೆ.
ಈಗಾಗಲೇ ಅಲ್ಲಲ್ಲಿ ಈಜಲು ಹೋದ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆಗಳು ನಡೆದಿದ್ದು, ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವುದರೊಂದಿಗೆ ದುರಂತಗಳು ನಡೆಯದಂತೆ ಗಮನಹರಿಸುವುದು ಅಗತ್ಯವಿದೆ.
ಇಷ್ಟರಲ್ಲೇ ಮಳೆ ಸುರಿದಿದ್ದರೆ ವಾತಾವರಣ ಒಂದಷ್ಟು ತಂಪಾಗಿರುತ್ತಿತ್ತು. ಆದರೆ ಮಳೆ ಬಾರದ ಕಾರಣದಿಂದಾಗಿ ಬಿಸಿಲ ಝಳ ಹೆಚ್ಚುತ್ತಿದ್ದು, ಬಿಸಿಲಲ್ಲಿ ನಾಲ್ಕು ಹೆಜ್ಜೆ ಹಾಕಿದರೂ ದೇಹ ಬಳಲುತ್ತಿದೆ. ಹಾಗಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ನೀರಿನಲ್ಲಿ ಈಜಾಟವಾಡಲು ಕೆರೆ, ನಾಲೆ, ನದಿಯನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ.

ಬಹಳಷ್ಟು ಮಕ್ಕಳು ಮನೆಯಲ್ಲಿ ಪೋಷಕರಿಗೆ ಮಾಹಿತಿ ನೀಡದೆ ಗೆಳೆಯರೊಂದಿಗೆ ದೂರದ ನಾಲೆ, ನದಿಗಳಿಗೆ ಹೋಗುತ್ತಿದ್ದು, ಅಲ್ಲಿ ಈಜಾಡುವ ವೇಳೆ ದುರಂತಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಒಂದೆಡೆ ಕೊರೋನಾವೂ ಅಬ್ಬರಿಸುತ್ತಿದೆ. ಈ ಸಂದರ್ಭ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಗತ್ಯವಾಗಿದ್ದರೂ ಇದನ್ನು ಬದಿಗೊತ್ತಿ ಗುಂಪು ಗುಂಪಾಗಿ ಈಜುವ ದೃಶ್ಯಗಳು ಕೆಲವೆಡೆ ಕಂಡು ಬರುತ್ತಿದೆ.
ಮೈಸೂರು ನಗರದಿಂದ ಕೆಲವು ಯುವಕರು ಮತ್ತು ವಿದ್ಯಾರ್ಥಿಗಳು ಹೆಚ್. ಡಿ. ಕೋಟೆಯ ಕಬಿನಿಯತ್ತ ಮುಖ ಮಾಡುತ್ತಿರುವುದು ಕಂಡು ಬರುತ್ತಿದೆ. ಹೀಗೆ ತೆರಳುವ ಬಹಳಷ್ಟು ಯುವಕರು ತುಂಬಿ ಹರಿಯುತ್ತಿರುವ ಕಬಿನಿ ಜಲಾಶಯ ಮುಂಭಾಗದ ಎಡದಂಡೆ ನಾಲೆಯಲ್ಲಿ ಈಜಾಡುವುದು ಸಾಮಾನ್ಯವಾಗಿದೆ.
ಬರೀ ಈಜಾಟವಾಡುವುದಲ್ಲದೆ, ದಡದಿಂದ ನಾಲೆಗೆ ಧುಮುಕುತ್ತಿರುವ ದೃಶ್ಯ ಕಂಡು ಬರುತ್ತಿದ್ದು ಇದು ಅಪಾಯಕಾರಿ ಸಾಹಸವಾಗಿದೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ತಲೆ ನಾಲೆಯ ಬದಿಗೆ ಬಡಿದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸಂಬಂಧಿಸಿದವರು ಗಮನಹರಿಸಿ ಇದಕ್ಕೆ ಬ್ರೇಕ್ ಹಾಕಬೇಕಾಗಿದೆ.












Click it and Unblock the Notifications