ಪೊಲೀಸರ ಜತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಅತ್ಯಾಚಾರ ಆರೋಪಿ ಸ್ವಾಮೀಜಿ
ಮೈಸೂರು, ಸೆಪ್ಟೆಂಬರ್ 12 : ಚಾತುರ್ಮಾಸ ಪೂಜೆ ವೇಳೆ ಗೃಹಿಣಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಆರೋಪಿಯಾದ ಸ್ವಾಮೀಜಿಯೋರ್ವರು ಪದೇ ಪದೇ ವಾಸ ಸ್ಥಳ ಬದಲಿಸುತ್ತಾ ಪೊಲೀಸರ ತನಿಖೆಯನ್ನೇ ಹಾದಿ ತಪ್ಪಿಸುತ್ತಿದ್ದಾನೆ!
ಸ್ವಾಮೀಜಿ ಹಾಗೂ ಕೃತ್ಯಕ್ಕೆ ಸಹಕರಿಸಿದ ತನ್ನ ಪತಿಯ ವಿರುದ್ಧವೂ ರಾಮಕೃಷ್ಣ ನಗರದ ಗೃಹಿಣಿಯೊಬ್ಬರು ಕಳೆದ ವಾರ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದರು.
ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಫೋನ್ ಸ್ಥಗಿತಗೊಳಿಸಿ ತಲೆಮರೆಸಿಕೊಂಡಿದ್ದಾರೆ ಡಿಸಿಪಿ ವಿಷ್ಣುವರ್ಧನ್, ಕೆಆರ್ ವಿಭಾಗದ ಎಸಿಪಿ ಧರ್ಮಪ್ಪ ಅವರ ಸೂಚನೆ ಮೇರೆಗೆ ಆರೋಪಿಗಳ ಪತ್ತೆಗಾಗಿ ಕುವೆಂಪು ನಗರ ಪೊಲೀಸ್ ಇನ್‍ಸ್ಪೆಕ್ಟರ್ ವಿಜಯಕುಮಾರ್ ನೇತೃತ್ವದಲ್ಲಿ ಅಪರಾಧ ವಿಭಾಗದ ಪೊಲೀಸರ ತಂಡ ರಚಿಸಲಾಗಿದ್ದು, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ನುರಿತ ಸಿಬ್ಬಂದಿ ತಂಡದಲ್ಲಿದ್ದಾರೆ.

ಆದರೆ, ಪೊಲೀಸರಿಗಿಂತಲೇನೂ ತಾನು ಕಡಿಮೆಯಿಲ್ಲ ಎಂಬಂತೆ ಆರೋಪಿ ಸ್ವಾಮೀಜಿ ದಿನಕ್ಕೊಂದು ಸ್ಥಳ ಬದಲಾಯಿಸುತ್ತಾ ಪೊಲೀಸರಿಗೇ ಸವಾಲು ಹಾಕುತ್ತಿದ್ದಾನೆ. ಆರೋಪಿಗಳಿಬ್ಬರನ್ನೂ ಶೀಘ್ರವಾಗಿ ಬಂಧಿಸಬೇಕೆಂಬ ಹಠಕ್ಕೆ ಬಿದ್ದಿರುವ ಪೊಲೀಸರು ವಿವಿಧ ತಂತಗಳ ಮೂಲಕ ಶೋಧ ಕಾರ್ಯ ಮುಂದುವರಿಸಿದ್ದಾರೆ.
ದೂರು ದಾಖಲಾದ ಮರುದಿನವೇ ಪೊಲೀಸರು ಸ್ವಾಮೀಜಿ ವಾಸವಿದ್ದ ಮಂಡ್ಯ ಜಿಲ್ಲೆ ಪಾಂಡವಪುರದ ಚಂದೆ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿರುವ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಆದರೆ, ಪೊಲೀಸರು ಬರುವ ಮುನ್ಸೂಚನೆ ಅರಿತ ಸ್ವಾಮೀಜಿ ಅಗತ್ಯ ವಸ್ತುಗಳೊಡನೆ ಪರಾರಿಯಾಗಿದ್ದಾನೆ. ಪೊಲೀಸರು ಬರಿಗೈಲಿ ಹಿಂದಿರುಗಿದ್ದಾರೆ.
ನಂತರ ಸ್ವಾಮೀಜಿಯ ಸಹಚರರ ಮೊಬೈಲ್ ಫೋನ್ ಕರೆಗಳ ಮೇಲೆ ಕಣ್ಣಿಟ್ಟ ಪೊಲೀಸರಿಗೆ, ಆರೋಪಿ ತಿ.ನರಸೀಪುರದ ತೋಟದ ಮನೆಯೊಂದರಲ್ಲಿ ತಂಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ತನಿಖಾ ತಂಡ ಸೋಮವಾರ ರಾತ್ರಿ ತೋಟದ ಮನೆ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ದಾಳಿ ಸುಳಿವು ಸಿಕ್ಕಿದ್ದ ಸ್ವಾಮೀಜಿ ಶಿಷ್ಯರೊಂದಿಗೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕೊನೆಕ್ಷಣದಲ್ಲಿ ನಡೆದ ಈ ಬೆಳವಣಿಗೆಯಿಂದ ಪೊಲೀಸರು ನಿರಾಶೆಗೊಂಡು ವಾಪಸಾಗಿದ್ದಾರೆ.
ಸ್ವಾಮೀಜಿ ಇರುವ ಅಡಗು ತಾಣದ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕುತ್ತಿರುವ ಪೊಲೀಸರ ತಂಡ, ಮಂಗಳವಾರ ಕೂಡ ವಿವಿಧ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದೆ. ಸ್ವಾಮೀಜಿ ಪಕ್ಕದ ರಾಜ್ಯಗಳಲ್ಲಿನ ಹಿಂಬಾಲಕರ ಮನೆಯಲ್ಲಿ ವಾಸ್ತವ್ಯ ಹೂಡಿರಬೇಕೆಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಆರೋಪಿ ಯನ್ನು ಒಂದೆರಡು ದಿನದಲ್ಲಿ ಬಂಧಿಸಿಯೇ ತೀರುವುದಾಗಿ ಹೇಳಿದ್ದಾರೆ.












Click it and Unblock the Notifications