SSLC Result: ಅವಳಿ ಸಹೋದರಿಯರಿಗೆ ಬಂತು ಒಂದೇ ಅಂಕ!
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೈಸೂರು ನಗರದ ಮರಿಮಲ್ಲಪ್ಪ ಪ್ರೌಢಶಾಲೆಯ ಅವಳಿ ಸಹೋದರಿಯರಾದ ಅಂಜಲಿ ವಿ.ಶಾಸಿ ಹಾಗೂ ಅದಿತಿ ವಿ.ಶಾಸಿ ಇಬ್ಬರೂ 619 ಅಂಕ ಪಡೆದು ಗಮನ ಸೆಳೆದಿದ್ದಾರೆ. ಈ ಅವಳಿ ಸಹೋದರಿಯರು ನಗರದ ಅಗ್ರಹಾರದ ವೆಂಕಟರಮಣ, ವಿನಯಾ ದಂಪತಿ ಪುತ್ರಿಯರಾಗಿದ್ದಾರೆ.
ಅದಿತಿ ವಿ.ಶಾಸಿ ಕನ್ನಡದಲ್ಲಿ 125, ಇಂಗ್ಲಿಷ್‌ನಲ್ಲಿ 99, ಹಿಂದಿಯಲ್ಲಿ 99, ಗಣಿತದಲ್ಲಿ 98, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಪಡೆದುಕೊಂಡಿದ್ದಾರೆ. ಅಂಜಲಿ ವಿ. ಶಾಸಿ ಕನ್ನಡದಲ್ಲಿ 125, ಇಂಗ್ಲಿಷ್‌ನಲ್ಲಿ 100, ಹಿಂದಿಯಲ್ಲಿ 100, ಗಣಿತದಲ್ಲಿ 98, ವಿಜ್ಞಾನದಲ್ಲಿ 98, ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಪಡೆದುಕೊಂಡಿದ್ದಾರೆ. ಇಬ್ಬರಿಗೂ ಸಮಾನ ಅಂಕ ಬಂದಿರುವುದಕ್ಕೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಕಿರು ಪರೀಕ್ಷೆಗಳಲ್ಲೂ ಒಂದೇ ಅಂಕ
"ಎಷ್ಟೋ ಸಲ ನಾವು ತರಗತಿಯಲ್ಲಿ ನಡೆಯುತ್ತಿದ್ದ ಕಿರು ಪರೀಕ್ಷೆಗಳಲ್ಲೂ ಸಮಾನ ಅಂಕ ಪಡೆಯುತ್ತಿದ್ದೆವು. ಆದರೆ, ಮುಖ್ಯ ಪರೀಕ್ಷೆಯಲ್ಲೂ ಸಮಾನ ಅಂಕ ಬಂದಿರುವುದು ಅಚ್ಚರಿ ಮೂಡಿಸಿದೆ. ಮನೆಯಲ್ಲಿ ಕಲಿಕೆಗೆ ಉತ್ತಮ ವಾತಾವರಣ ಇತ್ತು. ಪೋಷಕರು ಹೆಚ್ಚಿನ ಸಹಕಾರ ನೀಡಿದರು. ಶಾಲೆಯಲ್ಲಿ ಎಲ್ಲಾ ಶಿಕ್ಷಕರು ಉತ್ತಮ ಮಾರ್ಗದರ್ಶನ ಮಾಡಿದರು. ಎಂದಿಗೂ ಸಮಾನ ಅಂಕ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ" ಎಂದು ಸಹೋದರಿಯರು ಸಂತಸ ವ್ಯಕ್ತಪಡಿಸಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ಮಗಳಿಗೆ 623 ಅಂಕ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೈಸೂರಿನ ಭಾರತೀಯ ವಿದ್ಯಾಭವನ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್.ಜಾಹ್ನವಿ 623 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಜಾಹ್ನವಿ ತಂದೆ ಶಿವಕುಮಾರ್ ನಗರದ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕಾರ್ಯ ನಿರ್ವಹಿಸುತ್ತಿದ್ದರೆ, ತಾಯಿ ಪುಷ್ಪಲತಾ ಗೃಹಿಣಿ. ಡಿಪ್ಲೊಮಾ ಓದಿದ್ದ ಶಿವಕುಮಾರ್ ಗುಲ್ಕನ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕಾರ್ಖಾನೆ ಮುಚ್ಚಿದ ಪರಿಣಾಮ ಕಳೆದ 5 ವರ್ಷದಿಂದ ಸೆಕ್ಯೂರಿಟಿ ಗಾರ್ಡ್ ಆಗಿದ್ದಾರೆ.
ಎಸ್ಸೆಸ್ಸೆಲಿ ಪರೀಕ್ಷೆಯಲ್ಲಿ ವಿಜಯನಗರದ ಸದ್ವಿದ್ಯಾ ಶಾಲೆಯ ಡಿ.ಎಸ್.ಧನ್ವಿ 623 ಅಂಕ ಪಡೆದಿದ್ದಾರೆ. ಧನ್ವಿ ತಂದೆ ಡಿ.ಪಿ.ಸುಧನ್ವ ಅವರು ಸದ್ವಿದ್ಯಾ ಕಾಲೇಜಿನಲ್ಲಿ ಹಾಗೂ ತಾಯಿ ಕುಸುಮಾ ಪ್ರಮತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭವಿಷ್ಯದಲ್ಲಿ ಡಿ.ಎಸ್.ಧನ್ವಿಗೆ ಏರೋನಾಟಿಕಲ್ ಎಂಜಿನಿಯರ್ ಆಗುವ ಗುರಿ ಇದೆ.












Click it and Unblock the Notifications