ಸಾಂಸ್ಕೃತಿಕ ನಗರಿಯಲ್ಲಿ ಇನ್ನು ಉಗುಳಿದರೆ, ಕಸ ಎಸೆದರೆ ದಂಡ ಖಚಿತ
ಮೈಸೂರು, ಫೆಬ್ರವರಿ 4: ಈಗಾಗಲೇ ಸ್ವಚ್ಛ ನಗರಿ ಎಂದು ಕೆಲವು ಪ್ರಶಸ್ತಿಗಳನ್ನೂ ಪಡೆದಿರುವ ಮೈಸೂರಿನಲ್ಲಿ ಇನ್ನು ಮುಂದೆ ಸ್ವಚ್ಛತೆಗೆ ಇನ್ನಷ್ಟು ಆದ್ಯತೆ ನೀಡಲು ಮಹಾನಗರ ಪಾಲಿಕೆ ಮುಂದಾಗಿದೆ.
ಸಾರ್ವಜನಿಕರು ಕಂಡ ಕಂಡಲ್ಲಿ ಉಗುಳುವುದು, ಕಸ ಎಸೆಯುವವರನ್ನು ಕಂಡುಹಿಡಿದು ದಂಡ ವಿಧಿಸಲು ಮಹಾನಗರ ಪಾಲಿಕೆ ಆಡಳಿತ ಮಾರ್ಷಲ್ ಗಳನ್ನು ನಿಯೋಜಿಸಲಿದೆ.
ಈಗ ಬಿಬಿಎಂಪಿ ಜಾರಿಗೆ ತಂದಿರುವ ಮಾರ್ಷಲ್ ವ್ಯವಸ್ಥೆಯನ್ನೆ ಮೈಸೂರಿನಲ್ಲೂ ಅಳವಡಿಸಿಕೊಳ್ಳಲು ಪಾಲಿಕೆ ಮುಂದಾಗಿದ್ದು, ನಗರದ 65 ವಾರ್ಡ್‌ಗಳಲ್ಲೂ ಮಾರ್ಷಲ್ ಗಳನ್ನು ನಿಯೋಜಿಸಲಾಗುವುದು. ಜನರು ಉಗುಳುವುದು, ಕಸ ಹಾಕುವವರಿಗೆ ಸ್ಥಳದಲ್ಲೇ ಮಾರ್ಷಲ್‌ಗಳು ದಂಡ ವಿಧಿಸಲಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಅವರು, ಎಲ್ಲಾ ವಾರ್ಡ್‌ಗಳಲ್ಲೂ ಮಾರ್ಷಲ್‌ಗಳನ್ನು ನಿಯೋಜಿಸಿ ಅವರಿಗೆ ಇ.ಡಿ.ಸಿ ಯಂತ್ರಗಳನ್ನೂ ನೀಡಲಾಗುವುದು. ಇದಲ್ಲದೆ ಮಾರ್ಷಲ್‌ಗಳಿಗೆ ಅವರ ಕಾರ್ಯ ಕ್ಷಮತೆಗೆ ಅನುಗುಣವಾಗಿ ಪ್ರೋತ್ಸಾಹ ಧನವನ್ನೂ ನೀಡಲಾಗುವುದು ಎಂದು ಅವರು ಹೇಳಿದರು.
ಈಗ ಈ ಯೋಜನೆಯು ಪ್ರಾರಂಭಿಕ ಹಂತದಲ್ಲಿದ್ದು, ಶೀಘ್ರ ಅನುಷ್ಠಾನಕ್ಕೆ ಬರಲಿದೆ. ಮಾರ್ಷಲ್‌ಗಳು ಪಾಲಿಕೆಯ ಪ್ರತಿನಿಧಿಗಳಾಗಿ ಕೆಲಸ ನಿರ್ವಹಿಸಲಿದ್ದು, ಅವರಿಗೆ ಸಮವಸ್ತ್ರವನ್ನೂ ನೀಡಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದರು.












Click it and Unblock the Notifications