Mysuru Dasara: ಅರಮನೆಯಲ್ಲಿ ಕುಶಾಲತೋಪುಗಳಿಗೆ ವಿಶೇಷ ಪೂಜೆ; ಏನಿದರ ಮಹತ್ವ ತಿಳಿಯಿರಿ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಗರಿಗೆದರಿದೆ. 14 ಆನೆಗಳು ಈಗಾಗಲೇ ಅರಮನೆ ಪ್ರವೇಶಿಸಿದ್ದು, ದಿನನಿತ್ಯ ತಾಲೀಮಿನಲ್ಲಿ ಭಾಗಿಯಾಗಿವೆ. ನಿತ್ಯ ಬೆಳಗ್ಗೆ ಸಂಜೆ ಮೈಸೂರಿನ ರಸ್ತೆಗಳಲ್ಲಿ ಆನೆಗಳ ತಾಲೀಮು ಕಂಡು ಮೈಸೂರು ನಿವಾಸಿಗಳು, ಪ್ರವಾಸಿಗರು ಸಂತೋಷಗೊಂಡಿದ್ದಾರೆ. ಈ ನಡುವೆ ಫಿರಂಗಿಗಳಿಗೆ ಗುರುವಾರ ಅರಮನೆಯ ಆನೆ ಬಾಗಿಲಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಾಮಾನ್ಯವಾಗಿ ದಸರಾ ಜಂಬೂಸವಾರಿ ದಿನ ತಾಯಿ ಚಾಮುಂಡೇಶ್ವರಿಗೆ ಗಣ್ಯರು ಪುಷ್ಪಾರ್ಚನೆಯನ್ನು ನೆರವೇರಿಸುತ್ತಾರೆ. ಈ ವೇಳೆ ಗೌರವಾರ್ಥವಾಗಿ 21 ಕುಶಾಲತೋಪುಗಳನ್ನು ಸಿಡಿಸಲಾಗುತ್ತದೆ. ಕುಶಾಲತೋಪಿನ ಫಿರಂಗಿ ಸದ್ದಿಗೆ ಆನೆಗಳನ್ನು ಹೆದರಬಾರದು ಎಂದು ತಾಲೀಮು ಈಗಿನಿಂದಲೇ ನಡೆಸಲಾಗುತ್ತದೆ. ಇದಕ್ಕೂ ಮುನ್ನ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಅರ್ಚಕ ಪ್ರಹ್ಲಾದ್ ರಾವ್ ಫಿರಂಗಿ ಪೂಜೆ ನೆರವೇರಿಸಿದರು. 11 ಫಿರಂಗಿಗಳನ್ನು ಸ್ವಚ್ಛ ಮಾಡಿದ ಬಳಿಕ ಸಾಲಾಗಿ ನಿಲ್ಲಿಸಿ, ವಿಭೂತಿ, ಕುಂಕುಮ, ಅರಿಶಿಣ ಹಚ್ಚಿ, ಮಾವಿನ ತೋರಣ, ಬಾಳೆ ಕಂದುಗಳನ್ನು ಕಟ್ಟಿ, ಚಾಮುಂಡೇಶ್ವರಿಯ ಫೋಟೊ ಇಟ್ಟು ಪೂಜೆ ಮಾಡಲಾಯಿತು. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಮುತ್ತುರಾಜ್ ಸೇರಿದಂತೆ ಅರಮನೆಯ ಭದ್ರತಾ ಅಧಿಕಾರಿಗಳು ಭಾಗವಹಿಸಿದ್ದರು.
ಸಿಬ್ಬಂದಿಗೂ ತರಬೇತಿ
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ದಸರೆ ಜಂಬೂ ಸವಾರಿ ಸಂದರ್ಭ 21 ಕುಶಾಲತೋಪುಗಳನ್ನು ಸಿಡಿಸಲು ಹಾಗೂ ಬನ್ನಿಮಂಟಪದ ಬಳಿ ಕುಶಾಲತೋಪು ಸಿಡಿಸಲು ಫಿರಂಗಿಗಳನ್ನು ಬಳಸುತ್ತೇವೆ. ಇದಕ್ಕೆ ಸಿಬ್ಬಂದಿಗೆ ತರಬೇತಿ ನೀಡುವುದನ್ನು ಆರಂಭಿಸಲು ಫಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು ಎಂದು ತಿಳಿಸಿದರು.
ಮುಖ್ಯ ಅರ್ಚಕ ಪ್ರಹ್ಲಾದ್ ರಾವ್ ಮಾತನಾಡಿ, ಗಣಪತಿ, ಚಾಮುಂಡೇಶ್ವರಿ ಪೂಜೆ ಬಳಿಕ ಫಿರಂಗಿಗಳ ಪೂಜೆ ನಡೆಯಿತು. ಅರಮನೆಯ ಪಕ್ಕದ ಮಾರಮ್ಮ ದೇವಾಲಯದ ಪಕ್ಕದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ 14 ಆನೆಗಳು ಹಾಗೂ ಅಶ್ವದಳಕ್ಕೆ ಮೂರು ಬಾರಿ ಫಿರಂಗಿ ಸಿಡಿಸುವ ತಾಲೀಮು ನಡೆಯುತ್ತದೆ ಎಂದರು.
ಅದ್ದೂರಿ ದಸರಾ ಆಚರಣೆಗೆ ತಯಾರಿ
ಈ ಬಾರಿ ಅದ್ದೂರಿ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದ್ದು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಅದ್ದೂರಿಯಾಗಿಯೇ ದಸರಾ ಆಚರಣೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಅಭಿಮನ್ಯು ಈ ಬಾರಿ ಅಂಬಾರಿ ಹೊರಲು ಸಜ್ಜಾಗಿದ್ದು ಎಲ್ಲಾ 14 ಆನೆಗಳು ಈಗಾಗಲೇ ತಾಲೀಮು ನಡೆಸುತ್ತಿವೆ.












Click it and Unblock the Notifications