ಆಷಾಢ ಶುಕ್ರವಾರ ಹಿನ್ನೆಲೆ ಜಿಲ್ಲಾಡಳಿತದಿಂದ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಸಭೆ
ಮೈಸೂರು, ಜೂನ್ 26: ಮುಂದಿನ ತಿಂಗಳು ಬರಲಿರುವ ಆಷಾಢ ಶುಕ್ರವಾರ ಕಾರ್ಯಕ್ರಮದ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಹಾಗೂ ಸಂಚಾರ ವ್ಯವಸ್ಥೆಯ ಕುರಿತು ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಯಿತು.
ಚಾಮುಂಡಿ ಬೆಟ್ಟದ ಆವರಣದಲ್ಲಿ ನಡೆದ ಈ ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಸಭೆಗೂ ಮುನ್ನ ಬೆಟ್ಟದಲ್ಲಿ ಒಂದು ಸುತ್ತು ಹಾಕುವ ಮೂಲಕ ಭದ್ರತೆಯನ್ನು ಎಲ್ಲೆಲ್ಲಿ ಹೆಚ್ಚಿಸಬೇಕು, ಸರತಿ ಸಾಲನ್ನು ಹೇಗೆ ನಿರ್ವಹಣೆ ಮಾಡಬೇಕು? ಎಂದು ಪರಿಶೀಲಿಸಿದರು. ಪೊಲೀಸ್ ಹಾಗೂ ಹೋಂ ಗಾರ್ಡ್ ಗಳ ಕರ್ತವ್ಯದ ಬಗ್ಗೆ ಆಯುಕ್ತರು ಸಮಗ್ರ ಮಾಹಿತಿ ಪಡೆದರಲ್ಲದೇ, ಸಲಹೆ ಸೂಚನೆಯನ್ನು ನೀಡಿದರು.
ಆಷಾಢ ಶುಕ್ರವಾರದ ದಿನಗಳಲ್ಲಿ ಬೆಟ್ಟಕ್ಕೆ ಆಗಮಿಸುವವರು ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು. ಮಳಿಗೆಗಳಲ್ಲಿ ಕೂಡ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು. ಬೆಟ್ಟಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡುವ ವೇಳೆ ಭದ್ರತೆ ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳು ರಾಜಿ ಮಾಡಿಕೊಳ್ಳಬಾರದು. ಸಾರ್ವಜನಿಕರ ಸುರಕ್ಷತೆ ಮುಖ್ಯ. ಹೀಗಾಗಿ ಕೆಲವೊಮ್ಮೆ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಬಹುದು. ಇಂಥ ಸಮಯದಲ್ಲಿ ಯಾರೂ ಮುಲಾಜಿಗೆ ಒಳಗಾಗಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂದು ಬೆಟ್ಟಕ್ಕೆ ಕೆಎಸ್ಆರ್ ಟಿಸಿ ವತಿಯಿಂದ ವಾಹನದ ವ್ಯವಸ್ಥೆ ಇರುತ್ತದೆ. ಇದನ್ನು ಹೊರತುಪಡಿಸಿ ಖಾಸಗಿ ವಾಹನದ ಮೂಲಕ ಬರುವವರಿಗೆ ಸೂಕ್ತ ಸ್ಥಳದಲ್ಲಿ ವಾಹನ ನಿಲ್ಲಿಸುವಂತೆ, ಅಡ್ಡಾದಿಡ್ಡಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡದಂತೆ ಸಂಚಾರ ವಿಭಾಗದ ಪೊಲೀಸರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಸುಳ್ವಾಡಿ ಪ್ರಕರಣದ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಎಲ್ಲ ದೇವಸ್ಥಾನಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಪ್ರಸಾದದ ಮೇಲೆ ತೀವ್ರ ನಿಗಾ ಇಡುವಂತೆ ತಾಕೀತು ಮಾಡಿದೆ. ಭಕ್ತರಿಗೆ ನೀಡುವ ಪ್ರಸಾದವನ್ನು ಶುದ್ಧ ವಾತಾವರಣದಲ್ಲಿ ಅಧಿಕಾರಿಗಳ ಕಣ್ಗಾವಲಿನಲ್ಲಿ ಸಿದ್ಧಪಡಿಸುವಂತೆ ತಿಳಿಸಿದೆ. ಜಿಲ್ಲಾಡಳಿತ ಹಂತದಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಮಾತನಾಡಿ, ವಿವಿಧ ಸಂಘಟನೆಗಳು ತಾವೇ ತಯಾರಿಸಿಕೊಂಡಿರುವ ಪ್ರಸಾದವನ್ನು ಬೆಟ್ಟದಲ್ಲಿ ಹಾಗೂ ನಂದಿ ಬಳಿ ವಿತರಿಸುತ್ತಾರೆ. ನೆರೆಹೊರೆ ಜಿಲ್ಲೆಗಳ ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಿಂದ ಜನರು ಪ್ರಸಾದ ತರುತ್ತಾರೆ. ಹೀಗಾಗಿ ವಿಶೇಷ ಗಮನ ಹರಿಸಬೇಕು ಎಂದು ತಿಳಿಸಿದರು.












Click it and Unblock the Notifications