MLC Election: ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಗೊಂದಲಕ್ಕೆ ತೆರೆ
ಬಿಜೆಪಿ ಮತ್ತು ಜೆಡಿಎಸ್ ನಡುವೆ ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಎದುರಾಗಿದ್ದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಮೈತ್ರಿ ಅಭ್ಯರ್ಥಿಯಾದ ಕೆ. ವಿವೇಕಾನಂದ ಅವರಿಗೆ ಡಾ.ಈ.ಸಿ. ನಿಂಗರಾಜ್ ಗೌಡ ತಮ್ಮ ಬೆಂಬಲ ಘೋಷಿಸಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಮೈಸೂರು ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಂಗರಾಜೇ ಗೌಡ ಅವರು, ಯಾವುದೇ ಆಸೆ, ಕಲ್ಪನೆ ಇಲ್ಲದೆ ಕೆಲಸ ಮಾಡುವುದೇ ಸಂಘದ ಕೆಲಸ. ಕಳೆದ 35 ವರ್ಷಗಳಿಂದ ಪಕ್ಷ ಮತ್ತು ಸಂಘ ಪರಿವಾರದ ಹಿರಿಯರು ನನ್ನನ್ನು ಬೆಳೆಸಿದ್ದಾರೆ. ಸಂಘಟನೆ ಮತ್ತು ಬಿಜೆಪಿ ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ಮುಖ್ಯ ಎಂಬುದನ್ನು ಕಲಿಸಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೆಂದ್ರ ಅವರ ಕೈ ಬಲಪಡಿಸುವ ಉದ್ದೇಶದಿಂದ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಅವರಿಗೆ ಬೆಂಬಲ ಘೋಷಿಸಿದ್ದೇನೆ. ರಾಜ್ಯಾಧ್ಯಕ್ಷರು ಕರೆ ಮಾಡಿ ದೇಶದ ಹಿತಕ್ಕಾಗಿ ಅನಿರೀಕ್ಷಿತವಾಗಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲಾಗಿದ್ದು, ಮೈತ್ರಿ ಧರ್ಮ ಪಾಲಿಸೋಣ ಎಂದು ಮನವಿ ಮಾಡಿದರು. ಹಾಗಾಗಿ ನಾನು ಏನನ್ನೂ ಮಾತನಾಡದೆ ಪಕ್ಷದ ನಿರ್ಧಾರಕ್ಕೆ ಗೌರವ ಕೊಟ್ಟು, ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಿದ್ದೇನೆ ಎಂದು ಹೇಳಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, ಟಿಕೆಟ್ ವಂಚಿತ ನಿಂಗರಾಜೇ ಗೌಡ, ಕೆ.ಟಿ. ಶ್ರೀಕಂಠೇಗೌಡ ಹಾಗೂ ನಿರಂಜನ ಮೂರ್ತಿ ಅವರು ಮೈತ್ರಿ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಲಿದ್ದು, ಅವರ ಮುಂದಾಳತ್ವದಲ್ಲೇ ಚುನಾವಣೆ ನಡೆಯಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಗಟ್ಟಿಯಾಗಿದ್ದು, ಮೈತ್ರಿ ಉಳಿಯಲ್ಲ, ಮುರಿಯಬೇಕು ಎಂಬ ಕಾಂಗ್ರೆಸ್ ಆಸೆಗೆ ಇಂದಿನ ಬೆಳವಣಿಗೆ ಉತ್ತರ ನೀಡಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್‌ಗೌಡ ಮಾತನಾಡಿ, ಆರಂಭದಲ್ಲಿ ಪಕ್ಷ ನಿಂಗರಾಜ್ ಗೌಡ ಅವರಿಗೆ ಟಿಕೆಟ್ ಘೋಷಣೆ ಮಾಡಿತ್ತು. ಆದರೆ, ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದರಿಂದ ಮೈತ್ರಿ ಪಾಲನೆಯ ಉದ್ದೇಶದಿಂದ ನಿಂಗರಾಜ್ ಅವರು ಮೈತ್ರಿ ಅಭ್ಯರ್ಥಿಯಾದ ವಿವೇಕಾಂನದ ಅವರಿಗೆ ಬೆಂಬಲ ಸೂಚಿಸಿದ್ದಾರೆ ಎಂದರು.












Click it and Unblock the Notifications