ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ಸರಳ ಆಚರಣೆ; ಭಕ್ತರಿಗೆ ಪ್ರವೇಶ ನಿಷೇಧ
ಮೈಸೂರು, ಜುಲೈ 16: ಆಷಾಢ ಮಾಸದ ಮೊದಲ ಶುಕ್ರವಾರ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸರಳ ಆಚರಣೆ ಮಾಡಲಾಯಿತು.
ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ, ಪುನಸ್ಕಾರ, ರುದ್ರಾಭಿಷೇಕ, ಕುಂಕುಮಾಭಿಷೇಕ ಮಾಡಿ ವಿಶೇಷ ಅಲಂಕಾರ ಮಾಡಲಾಗಿದೆ. ಪ್ರತಿ ವರ್ಷವೂ ಆಷಾಢ ಶುಕ್ರವಾರಗಳಂದು ಸಹಸ್ರಾರು ಜನ ಸೇರುತ್ತಿದ್ದರು. ಆದರೆ ಕೊರೊನಾ ಹರಡುವಿಕೆ ತಡೆಗಟ್ಟಲು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಶುಕ್ರವಾರ, ಶನಿವಾರ, ಭಾನುವಾರದ ವಾರಾಂತ್ಯದಂದು ಪ್ರವೇಶ ನಿರ್ಬಂಧ ವಿಧಿಸಿ ಮೈಸೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ಎಲ್ಲ ಗೇಟ್‌ಗಳೂ ಕ್ಲೋಸ್ ಆಗಿವೆ. ಸಚಿವರು, ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸೇರಿ ಹಲವರು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.

ನಟ ದರ್ಶನ್‌ಗೆ ನಿರಾಸೆ
ಆಷಾಢದ ಕಾರಣ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಲು ಮುಂದಾಗಿದ್ದ ನಟ ದರ್ಶನ್‌ಗೆ ನಿರಾಸೆಯಾಗಿದ್ದು, ಆಷಾಢ ಶುಕ್ರವಾರದಂದು ಸಾರ್ವಜನಿಕ ಪ್ರವೇಶ ನಿರ್ಬಂಧ ಆದೇಶ ಸೆಲೆಬ್ರಿಟಿ (ನಟರು)ಗಳಿಗೂ ಅನ್ವಯವಾಗಲಿದೆ.

ಸೋಮವಾರದಿಂದ ಗುರುವಾರದ ತನಕ ಮಾತ್ರ ಚಾಮುಂಡಿ ದರ್ಶನಕ್ಕೆ ಅವಕಾಶ ಕಲ್ಪಿಸಿ ಮೈಸೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ ಮಾಹಿತಿ ನೀಡಿದ್ದಾರೆ. ಪತ್ರಿಕಾಗೋಷ್ಠಿ ನಡೆಸುವ ಮುನ್ನ ಚಾಮುಂಡಿದೇವಿ ದರ್ಶನ ಪಡೆಯಬೇಕೆಂದಿದ್ದ ನಟನ ಆಸೆಗೆ ನಿರಾಸೆ ಉಂಟಾಗಿದೆ












Click it and Unblock the Notifications