ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯ ವೈಷಮ್ಯ ಮರೆತು ಒಂದೇ ವೇದಿಕೆಯಲ್ಲಿ ಸಿದ್ದು, ಜಿಟಿಡಿ!

By C. Dinesh
|
Google Oneindia Kannada News

ಮೈಸೂರು, ನವೆಂಬರ್ 10; ಕರ್ನಾಟಕದ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚಾಮುಂಡೇಶ್ವರಿಯ ಜೆಡಿಎಸ್‌ ಶಾಸಕ ಜಿ. ಟಿ. ದೇವೇಗೌಡ ನಡುವಿನ ಜಟಾಪಟಿ ಇದೀಗ ಹೊಸ ರೂಪ ಪಡೆದಿದೆ.

ಕಳೆದ ವಿಧಾನಸಭಾ ಚುನಾವಣೆ ಬಳಿಕ ಹಾವು-ಮುಂಗುಸಿಯಂತಿದ್ದ ಉಭಯ ನಾಯಕರು ಇದೀಗ ಸ್ನೇಹದ ಬಾವುಟ ಹಾರಿಸುವ ಮೂಲಕ ಮೈಸೂರು ಮತ್ತು ರಾಜ್ಯ ರಾಜಕೀಯದಲ್ಲಿ ಹೊಸದೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ. 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಇಬ್ಬರು ನಾಯಕರು ಚುನಾವಣಾ ಕಣಕ್ಕಿಳಿದಿದ್ದರು.

ಅಚ್ಚರಿ ಮೂಡಿಸಿದ ಜಿ. ಟಿ. ದೇವೇಗೌಡ ಸುಧಾಕರ್ ಭೇಟಿ! ಅಚ್ಚರಿ ಮೂಡಿಸಿದ ಜಿ. ಟಿ. ದೇವೇಗೌಡ ಸುಧಾಕರ್ ಭೇಟಿ!

ಅಂತಿಮವಾಗಿ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿದ್ದ ಸಿದ್ದರಾಮಯ್ಯ ವಿರುದ್ಧ ಭರ್ಜರಿ ಗೆಲುವು ಕಂಡಿದ್ದ ಜಿ. ಟಿ. ದೇವೇಗೌಡರು ಶಾಸಕರಾಗಿ ಆಯ್ಕೆಯಾಗಿದ್ದರು. ಚಾಮುಂಡೇಶ್ವರಿ ಸೋಲಿನ ಸುಳಿವು ಸಿಕ್ಕಿದ್ದ ಸಿದ್ದರಾಮಯ್ಯ ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದಲೂ ಕಣಕ್ಕಿಳಿದಿದ್ದರು. ಅಲ್ಲಿ ಗೆದ್ದು ವಿಧಾನಸಭೆಗೆ ಪ್ರವೇಶ ಪಡೆದು ಮುಖಭಂಗ ತಪ್ಪಿಸಿಕೊಂಡಿದ್ದರು.

ಜಿಟಿಡಿ ಪಕ್ಷಕ್ಕೆ ಸ್ವಾಗತಿಸಿ ಪ್ರಶ್ನೆ ಮುಂದಿಟ್ಟ ಕಾಂಗ್ರೆಸ್ ಮಾಜಿ ಶಾಸಕ! ಜಿಟಿಡಿ ಪಕ್ಷಕ್ಕೆ ಸ್ವಾಗತಿಸಿ ಪ್ರಶ್ನೆ ಮುಂದಿಟ್ಟ ಕಾಂಗ್ರೆಸ್ ಮಾಜಿ ಶಾಸಕ!

ಈ ಚುನಾವಣೆ ಬಳಿಕ ಇಬ್ಬರು ನಾಯಕರ ನಡುವೆ ಮಾತಿನ ಜಟಾಪಟಿ ಜೋರಾಗಿ, ರಾಜಕೀಯದ ಬದ್ಧವೈರಿಗಳಂತೆ ಕಾಣಿಸಿಕೊಂಡಿದ್ದರು. ಆದರೆ ನಂತರ ನಡೆದ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಜಿಟಿಡಿ ಜೆಡಿಎಸ್‌ ಪಕ್ಷದಿಂದ ದೂರ ಉಳಿದರಲ್ಲದೇ, ಕಾಂಗ್ರೆಸ್‌ ಪಕ್ಷ ಸೇರುವ ಮಾತುಗಳು ಕೇಳಿಬಂದಿತು. ಇದಕ್ಕೆ ಪೂರಕವೆಂಬಂತೆ ಪಕ್ಷದ ಎಲ್ಲಾ ಚಟುವಟಿಕೆಗಳಿಂದ ದೂರ ಉಳಿದಿದ್ದ ಜಿ. ಟಿ. ದೇವೇಗೌಡ ಜೆಡಿಎಸ್‌ ತೊರೆಯುವುದು ಖಚಿತವಾಗಿತ್ತು.

ಜೆಡಿಎಸ್‌ನಲ್ಲಿದ್ದರೂ ಇಲ್ಲದಂತಿರುವ ಜಿಟಿಡಿ ಮುಂದಿನ ನಡೆ? ಜೆಡಿಎಸ್‌ನಲ್ಲಿದ್ದರೂ ಇಲ್ಲದಂತಿರುವ ಜಿಟಿಡಿ ಮುಂದಿನ ನಡೆ?

ಜಿಟಿಡಿ ಮನವೊಲಿಕೆ ಪ್ರಯತ್ನ

ಜಿಟಿಡಿ ಮನವೊಲಿಕೆ ಪ್ರಯತ್ನ

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡರ ಅಸಮಾಧಾನವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್‌ ನಾಯಕರು ನಿರಂತರ ಪ್ರಯತ್ನವನ್ನು ನಡೆಸಿದರು. ಇದಾದ ಕೆಲವು ದಿನಗಳ ನಂತರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶಾಸಕ ಜಿ. ಟಿ. ದೇವೇಗೌಡ, "ಜೆಡಿಎಸ್‌ ತೊರೆಯುವ ಕುರಿತು ಸಮಯ ಬಂದಾಗ ನಿರ್ಧಾರ ಮಾಡುವುದಾಗಿ" ಹೇಳುವ ಮೂಲಕ ಕಾಂಗ್ರೆಸ್‌ ಪಕ್ಷ ಸೇರುವ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.

ಆದರೆ ಇದೀಗ ಜಿಟಿಡಿ ಕಾಂಗ್ರೆಸ್‌ ಸೇರುತ್ತಾರೆ ಎಂಬ ಬಗ್ಗೆ ಚರ್ಚೆಗೆ ಮತ್ತಷ್ಟು ಜೋರಾಗಿದೆ. ಜಿ. ಟಿ. ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪರಸ್ಪರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಈ ಚರ್ಚೆಗೆ ಕಿಚ್ಚು ಹಚ್ಚಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಕಾರ್ಯಕ್ರಮ

ಚಾಮುಂಡೇಶ್ವರಿಯಲ್ಲಿ ಕಾರ್ಯಕ್ರಮ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿರೋಧಿಗಳಾಗಿದ್ದ ಸಿದ್ದರಾಮಯ್ಯ ಹಾಗೂ ಜಿ. ಟಿ. ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಿನಕಲ್‌ನಲ್ಲಿ ನಡೆದ ಅಂಬೇಡ್ಕರ್ ಭವನದ ಉದ್ಘಾಟನಾ ಸಮಾರಂಭ ಹಾಗೂ ಕೇರ್ಗಳ್ಳಿ ಹೊಂಬಾಳಮ್ಮ ಸಿದ್ದರಾಮೇಶ್ವರ ಸಮುದಾಯ ಭವನ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಶಾಸಕ ಜಿ. ಟಿ. ದೇವೇಗೌಡ ಜೆಡಿಎಸ್‌ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರುವುದು ಸ್ಪಷ್ಟವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಈ ಮೂಲಕ ಸಂದೇಶ ರವಾನಿಸಿದ್ದಾರೆ. ಕೇವಲ ವೇದಿಕೆ ಹಂಚಿಕೊಳ್ಳುವುದು ಮಾತ್ರವಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ವಿರೋಧಿಗಳಾಗಿ ಸ್ಪರ್ಧೆ ಮಾಡಿದ್ದ ಇಬ್ಬರು ನಾಯಕರು ಪರಸ್ಪರ ಗುಣಗಾನ ಮಾಡಿದ್ದಾರೆ.

ಸಮಾರಂಭದಲ್ಲಿ ಸಿದ್ದರಾಮಯ್ಯ ಮಾತು

ಸಮಾರಂಭದಲ್ಲಿ ಸಿದ್ದರಾಮಯ್ಯ ಮಾತು

ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಬಳಿಕ ಕ್ಷೇತ್ರಕ್ಕೆ ಬರೋದಕ್ಕೆ ತುಂಬಾ ಬೇಸರ ಆಗಿತ್ತು. ಹಲವು ದಿನಗಳ ಬಳಿಕ ನಾನು ಚಾಮುಂಡೇಶ್ವರಿ ಕ್ಷೇತ್ರದಕ್ಕೆ ಬಂದಿದ್ದೇನೆ. ಚುನಾವಣೆಯಲ್ಲಿ ನಾನು, ಜಿ. ಟಿ. ದೇವೇಗೌಡ ಪರಸ್ಪರ ಎದುರಾಗಿದ್ವಿ. ಚುನಾವಣೆಯಲ್ಲಿ ನನ್ನನ್ನೇ ಸೋಲಿಸಿದ್ದ ಗಿರಾಕಿ ಈತ" ಎಂದು ಹಾಸ್ಯ ಚಟಾಕಿ ಹಾರಿಸಿದರು.

"ಸೋತ ಬಳಿಕ ಇಬ್ಬರೂ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳುವ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ಆದರೆ ಜನರು ಕರೆದ ಮೇಲೆ ಒಂದೇ ವೇದಿಕೆಗೆ ಬರಲೇಬೇಕು. ಜಿ. ಟಿ. ದೇವೇಗೌಡ ಕಾಂಗ್ರೆಸ್‌ಗೆ ಬಂದಿದ್ದಾನೆ ಅಂತಾ ಜನರು ಹೇಳುತ್ತಿದ್ದಾರೆ. ಜಿ. ಟಿ. ದೇವೇಗೌಡಗೆ ಕಾಂಗ್ರೆಸ್ ಬರೋದಿಕ್ಕೆ ಮನಸ್ಸು ಇದೆ. ಆದರೆ ಎಚ್. ಡಿ‌. ದೇವೇಗೌಡ, ಕುಮಾರಸ್ವಾಮಿ ಅಲ್ಲಿಯೇ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ವರ್ಷಗಳ ಇತಿಹಾಸ ಇದೆ‌. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬರೋದಿದ್ರೆ ಬರಬಹುದು. ಯಾರೇ ಬಂದರು ಪಕ್ಷಕ್ಕೆ ಸ್ವಾಗತ" ಎಂದು ಸಿದ್ದರಾಮಯ್ಯ ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ.

ಜಿ. ಟಿ. ದೇವೇಗೌಡ ಮಾತು

ಜಿ. ಟಿ. ದೇವೇಗೌಡ ಮಾತು

ವೇದಿಕೆಯಲ್ಲಿ ಮಾತನಾಡಿದ ಜಿ. ಟಿ. ದೇವೇಗೌಡ, "1983ರಿಂದ ನಿರಂತರವಾಗಿ ನಾನು, ಸಿದ್ದರಾಮಯ್ಯ ಜೊತೆಯಾಗಿ ಬೆಳೆದಿದ್ದೇವೆ. ಜೆಡಿಎಸ್ ಅನ್ನು‌ ನೆಲದಿಂದ ಜೊತೆಯಾಗಿ ಕಟ್ಟಿದ್ದೇವೆ. ನಂತರದ ಘಟನಾವಳಿಗಳಿಂದ ಸಿದ್ದರಾಮಯ್ಯ ಜೆಡಿಎಸ್ ತೊರೆದರು. ನಂತರ ಕಾಂಗ್ರೆಸ್‌ಗೆ ಹೋಗಿ ಸಿದ್ದರಾಮಯ್ಯ ಸಿಎಂ ಆದರು. ಸಿದ್ದರಾಮಯ್ಯ ಅವರು ಕೊಟ್ಟ ಅನ್ನಭಾಗ್ಯ ಬಹಳ ಮುಖ್ಯವಾದ ಯೋಜನೆ. ಸಿದ್ದರಾಮಯ್ಯ ಅವರಿಗೆ ಹಸಿವಿನ ಕಷ್ಟ ಗೊತ್ತಿದೆ. ಸಿದ್ದರಾಮಯ್ಯ ಎಲ್ಲಾ ಜವಾಬ್ದಾರಿ ಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ" ಎಂದರು.

"ಸಿದ್ದರಾಮಯ್ಯ ಮಾತು ಒರಟು ಅಷ್ಟೇ. ಎಚ್.ಸಿ. ಮಹದೇವಪ್ಪ ಎಂಬ ದಲಿತ ನಾಯಕನನ್ನು ಬೆಳೆಸಿದ್ದು ಸಿದ್ದರಾಮಯ್ಯ. ಸಿದ್ದರಾಮಯ್ಯನನ್ನು ವೀರಶೈವ ವಿರೋಧಿ ಎಂಬ ಪಟ್ಟ ಕಟ್ಟಿದ್ದರು. ಹಲವು ವೀರಶೈವ ಮುಖಂಡರನ್ನು ಮೈಸೂರು ಭಾಗದಲ್ಲಿ ಬೆಳೆಸಿದ್ದು ಸಿದ್ದರಾಮಯ್ಯ" ಎಂದು ಗುಣಗಾನ ಮಾಡಿದರು.

"ದಲಿತರು, ಒಕ್ಕಲಿಗರು, ನಾಯಕರು, ವೀರಶೈವರು ಎಲ್ಲಾ ಸಮುದಾಯವನ್ನು ಸಿದ್ದರಾಮಯ್ಯ ಪ್ರೀತಿಸುತ್ತಾರೆ. ಸಿದ್ದರಾಮಯ್ಯ, ಜಿ. ಟಿ. ದೇವೇಗೌಡ ಯಾಕೆ ಬೇರೆಯಾದರು? ಎಂಬ ಕೊರಗು ಜಿಲ್ಲೆಯ ಜನರಿಗೆ ಇತ್ತು. ನಾನು ಯಾವತ್ತೂ ಸಿದ್ದರಾಮಯ್ಯ ಅವರ ವಿರುದ್ದ ಹಿಂದೆ, ಮುಂದೆ ಯಾವುದೇ ಮಾತಾಡಿಲ್ಲ. ಸಿದ್ದರಾಮಯ್ಯ ಸೋಲಲಿ, ಗೆಲ್ಲಲಿ ಚಾಮುಂಡೇಶ್ವರಿ ಕ್ಷೇತ್ರದ ಜನರು ಅವರನ್ನ ಪ್ರೀತಿಸುತ್ತಾರೆ" ಎಂದು ಕೊಂಡಾಡಿದರು.

ಒಟ್ಟಾರೆ ಸಿದ್ದರಾಮಯ್ಯ ಹಾಗೂ ಜಿ .ಟಿ. ದೇವೇಗೌಡರು ಪರಸ್ಪರ ಒಂದಾಗಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದರೆ. ಮೈಸೂರು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಜನರಲ್ಲಿ ಸಂತಸ ಹೆಚ್ಚಿಸಿದೆ. ಆದರೆ ಜಿ. ಟಿ. ದೇವೇಗೌಡರು ಯಾವ ಸಂದರ್ಭದಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಕೈಹಿಡಿಯಲಿದ್ದಾರೆ? ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿಲ್ಲ.

English summary
Leader of opposition Siddaramaiah and Chamundeshwari assembly seat JD(S) MLA G. T. Deve Gowda share state at Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X