ಚಾಮುಂಡೇಶ್ವರಿ ಉಪ ಚುನಾವಣೆ vs ವರುಣ ಕ್ಷೇತ್ರ; ಏಕೆ ಈ ಹೋಲಿಕೆ?
ಮೈಸೂರು, ಮೇ 01; ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ 9 ದಿನಗಳು ಬಾಕಿ ಇದೆ, ಪ್ರಚಾರ ಅಬ್ಬರದಿಂದ ಸಾಗುತ್ತಿದೆ. ಮೇ 10ರಂದು ನಡೆಯುವ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರ ವರುಣ. ಮಾಜಿ ಸಿಎಂ ಸಿದ್ದರಾಮಯ್ಯ ಇಲ್ಲಿ ಕಣದಲ್ಲಿದ್ದಾರೆ. ಬಿಜೆಪಿಯಿಂದ ವಿ. ಸೋಮಣ್ಣ ಎದುರಾಳಿ.
ಬಾದಾಮಿ ಕ್ಷೇತ್ರ ಬಿಟ್ಟು ಸಿದ್ದರಾಮಯ್ಯ ವರುಣಕ್ಕೆ ಬಂದರೆ, ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಶಾಸಕ ವಿ. ಸೋಮಣ್ಣರನ್ನು ಬಿಜೆಪಿ ಮೈಸೂರಿನ ವರುಣಗೆ ತಂದು ನಿಲ್ಲಿಸಿದೆ. ಜಾತಿ ಬಲ, ಕಾಂಗ್ರೆಸ್ ಕಾರ್ಯಕರ್ತರ ಪಡೆ, ಸಿದ್ದರಾಮಯ್ಯ ಅಪಾರ ಅಭಿಮಾನಿಗಳು ಹೀಗೆ ಚುನಾವಣೆಯಲ್ಲಿ ಹಲವು ಲೆಕ್ಕಾಚಾರಗಳಿವೆ.

ವರುಣದಲ್ಲಿ ವಿ. ಸೋಮಣ್ಣ vs ಸಿದ್ದರಾಮಯ್ಯ ನಡುವಿನ ಸ್ಪರ್ಧೆಯನ್ನು ಚಾಮುಂಡೇಶ್ವರಿ ಉಪ ಚುನಾವಣೆಗೆ ಹೋಲಿಕೆ ಮಾಡಲಾಗುತ್ತಿದೆ. 2018ರಲ್ಲಿ ಚಾಮುಂಡೇಶ್ವರಿಯಲ್ಲಿ ಸೋತಿದ್ದನ್ನು ಹೇಗೆ ಸಿದ್ದರಾಮಯ್ಯ ಮರೆತಿಲ್ಲವೋ?. 2006ರ ಚಾಮುಂಡೇಶ್ವರಿ ಗೆಲುವನ್ನು ಸಿದ್ದರಾಮಯ್ಯ ಮರೆತಿಲ್ಲ, ಮರೆಯಲು ಸಾಧ್ಯವೂ ಇಲ್ಲ. ಹಾಗಾದರೆ ಎರಡು ಚುನಾವಣೆಗಳ ನಡುವಿನ ಹೋಲಿಕೆ ಏಕೆ? ಇಲ್ಲಿದೆ ನೋಡಿ ವಿವರ.
ರಾಜಕೀಯ ಪುನರ್ ಜನ್ಮ; ವರುಣ ಮೈಸೂರು, ನಂಜನಗೂಡು ಮತ್ತು ತಿ. ನರಸೀಪುರ ತಾಲೂಕಿನ ಗ್ರಾಮಗಳನ್ನು ಒಳಗೊಂಡ ಕ್ಷೇತ್ರ. ಇದು ಕಾಂಗ್ರೆಸ್ ಭದ್ರಕೋಟೆ ಎನ್ನುವುದಕ್ಕಿಂತ ಸಿದ್ದರಾಮಯ್ಯ ಭದ್ರಕೋಟೆ ಎಂದರೆ ಅದು ತಪ್ಪಾಗಲಾರದು. ಈ ಬಾರಿ ಬಿಜೆಪಿಯಿಂದ ಬೇರೆ ಯಾರೇ ಅಭ್ಯರ್ಥಿಯಾಗಿದ್ದರೂ ಸಿದ್ದರಾಮಯ್ಯ ಗೆಲುವು ಸುಲಭ ಎಂಬ ಮಾತಿತ್ತು. ಆದರೆ ಈಗ ಗೆಲುವು ಕಷ್ಟವೇ?, ಶ್ರಮ ಹಾಕಬೇಕಾದಿತು ಎಂಬ ಅಭಿಪ್ರಾಯವಿದೆ.

2006ರಲ್ಲಿ ಚಾಮುಂಡೇಶ್ವರಿ ಉಪ ಚುನಾವಣೆ ನಡೆದಿತ್ತು. ಕೇವಲ 247 ಮತಗಳ ಅಂತದಲ್ಲಿ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರು. ಇಡೀ ಸರ್ಕಾರವೇ ಎದುರಾಗಿ ನಿಂತರೂ ಕ್ಷೇತ್ರದ ಜನರು ಸಿದ್ದರಾಮಯ್ಯ ಕೈ ಹಿಡಿದಿದ್ದರು. ಈ ಗೆಲುವು ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಬಹುದೊಡ್ಡ ತಿರುವು, ಈಗಲೂ ಅದೇ ಮಾದರಿಯ ಪೈಪೋಟಿ ವರುಣದಲ್ಲಿ ಇದೆ ಎಂದು ಅಂದಾಜಿಸಲಾಗಿದೆ.
ಚಾಮುಂಡೇಶ್ವರಿ ಚುನಾವಣೆ ಗೆಲುವನ್ನು ಸಿದ್ದರಾಮಯ್ಯ ಇಂದಿಗೂ ಮರೆತಿಲ್ಲ. ಕಳೆದ ವಾರ ಸಹ ಕಾರ್ಯಕ್ರಮವೊಂದರಲ್ಲಿ, "2006ರ ಉಪ ಚುನಾವಣೆಯಲ್ಲಿ ಮತದಾರರು ಕೈ ಹಿಡಿಯದೇ ಹೋಗಿದ್ದರೆ ನನ್ನ ರಾಜಕೀಯ ಜೀವನ ಮುಗಿದು ಹೋಗುತ್ತಿತ್ತು. ಗೆದ್ದಿದ್ದು 247 ಮತಗಳ ಅಂತರದಿಂದ. ಆದರೆ ಒಂದು ಮತದಿಂದ ಗೆದ್ದರೂ ಅದು ಗೆಲುವೇ. ಈ ಕ್ಷೇತ್ರದ ಮತದಾರರ ಋಣ ತೀರಿಸಲಾಗದು" ಎಂದು ಅವರು ಚಾಮುಂಡೇಶ್ವರಿಯಲ್ಲಿ ನಡೆದ ಕಾರ್ಯಕ್ರಮದಲ್ಲೇ ಹೇಳಿದ್ದರು.
ಲಿಂಗಾಯತ ಮತಗಳನ್ನು ಗಮನದಲ್ಲಿಟ್ಟುಕೊಂಡೇ ವಿ. ಸೋಮಣ್ಣರನ್ನು ವರುಣದಲ್ಲಿ ಕಣಕ್ಕಿಳಿಸಲಾಗಿದೆ. ಆದರೆ ಜಾತಿ ಅಸ್ತ್ರವನ್ನು ಮೀರಿದ ಬೆಂಬಲ ಸಿದ್ದರಾಮಯ್ಯಗೆ ಇದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಜಾತಿ ಮೀರಿರುವ ಸಿದ್ದರಾಮಯ್ಯ ಮೇಲಿನ ಅಭಿಮಾನವನ್ನು ನಂಬಿಯೇ ಅವರು ಈ ಬಾರಿ ವರುಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತು, ಇದು ನನ್ನ ಕೊನೆಯ ಚುನಾವಣೆ ಎಂಬ ಭಾವನಾತ್ಮಕ ಅಂಶಗಳು ಚುನಾವಣೆಯಲ್ಲಿ ಸಹಾಯಕವಾಗಲಿದೆ ಎಂಬ ಮಾತುಗಳಿವೆ.
ಚಾಮರಾಜನಗರ ಮತ್ತು ವರುಣದಲ್ಲಿ ಕಣಕ್ಕಿಳಿದಿರುವ ಸೋಮಣ್ಣ ವರುಣದಲ್ಲಿ ಗೆಲ್ಲಲೇಬೇಕು ಎಂಬ ಛಲದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಬೆಂಬಲಕ್ಕೆ ನಿಂತಿದ್ದಾರೆ. ರಾಜ್ಯ ಬಿಜೆಪಿ ಮಾತ್ರವಲ್ಲ, ಕೇಂದ್ರದ ನಾಯಕರು ಸೋಮಣ್ಣ ಬೆನ್ನಿಗೆ ನಿಂತಿದ್ದಾರೆ. ಪ್ರಚಾರದ ಕಣ ಕಾವೇರಿದೆ. ಜೆಡಿಎಸ್ ಕ್ಷೇತ್ರದಲ್ಲಿ ಪ್ರಭಾವ ಹೊಂದಿಲ್ಲ. ಆದ್ದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಪ್ರಬಲ ಪೈಪೋಟಿಗೆ ವೇದಿಕೆ ಸಿದ್ಧವಾದಿದೆ. ಅದರಲ್ಲೂ ಲಿಂಗಾಯತ ಮತಗಳನ್ನು ಸೆಳೆಯಲು ಬಿಜೆಪಿ ಸಾಕಷ್ಟು ಶ್ರಮವಹಿಸಿದೆ. ಯಡಿಯೂರಪ್ಪ ಆಪ್ತರಾದ ಕಾಪು ಸಿದ್ದಲಿಂಗ ಸ್ವಾಮಿ ಸೋಮಣ್ಣ ಗೆಲ್ಲಿಸಲು ಪಣ ತೊಟ್ಟಿದ್ದಾರೆ.
ವರುಣದಲ್ಲಿ ಸಿದ್ದರಾಮಯ್ಯ 2008 ಮತ್ತು 2013ರಲ್ಲಿ ಗೆದ್ದಿದ್ದರು. 2018ರಲ್ಲಿ ಕ್ಷೇತ್ರವನ್ನು ಪುತ್ರ ಡಾ. ಯತೀಂದ್ರಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿಗೆ ಹೋದರು. ಅಲ್ಲಿ ಸೋತರು. ಬಾದಾಮಿಯಲ್ಲಿ ಗೆದ್ದರು. ಯತೀಂದ್ರ 5 ವರ್ಷ ಮಾಡಿದ ಕೆಲಸಗಳು ಸಿದ್ದರಾಮಯ್ಯಗೆ ಮತ್ತಷ್ಟು ಬಲ ನೀಡಿವೆ. ಲಿಂಗಾಯತ ಸಮುದಾಯ, ಯವಕರ ಜೊತೆ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದನ್ನು ಟಿವಿ ಸಂದರ್ಶನದಲ್ಲಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಹಾಗಾದರೆ ಈ ಬಾರಿ ವರುಣದಲ್ಲಿ ಗೆಲುವಿನ ಕಿರೀಟ ಯಾರಿಗೆ? ಎಂಬುದು ಎಲ್ಲರ ಪ್ರಶ್ನೆ.












Click it and Unblock the Notifications