ಹುಲಿ ಚರ್ಮ ಮಾರಾಟ ಮಾಡಿದವನಿಗೆ ಶಿಕ್ಷೆ ನೀಡಿದ ಕೋರ್ಟ್
ಚಾಮರಾಜನಗರ, ಮಾರ್ಚ್ 01: ಹುಲಿ ಚರ್ಮ ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ ಆರೋಪಿಗೆ 3 ವರ್ಷ ಜೈಲು, 10 ಸಾವಿರ ರುಪಾಯಿ ದಂಡ ವಿಧಿಸಿ ಗುಂಡ್ಲುಪೇಟೆ ಜೆಎಂಎಫ್ಸಿ ನ್ಯಾಯಾಲಯ ತೀರ್ಪು ನೀಡಿದೆ.
ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ತಾರಕ ಗ್ರಾಮದ ನಿವಾಸಿ ಸೈಯದ್ ಶಿಕ್ಷೆಗೆ ಒಳಗಾದ ಆರೋಪಿ. ಮತ್ತೋರ್ವ ಆರೋಪಿ ಅಂತರಸಂತೆ ಗ್ರಾಮದ ಅನ್ಸರ್ ಖುಲಾಸೆಗೊಂಡಿದ್ದಾನೆ. ಇನ್ನೊಬ್ಬ ಆರೋಪಿ ಹುಣಸಿನಕುಪ್ಪೆ ಹಾಡಿಯ ವೆಂಕಟ ಈಗಾಗಲೇ ಸಾವನ್ನಪ್ಪಿದ್ದಾನೆ.
2008 ರಲ್ಲಿ ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶದ ಅಂತರಸಂತೆ ವಲಯ ದಲ್ಲಿ ಹುಣಸಿನಕುಪ್ಪೆಯ ವೆಂಕಟ ಹುಲಿಯೊಂದನ್ನು ಹತ್ಯೆ ಮಾಡಿದ್ದ. ಈ ಹುಲಿಯ ಚರ್ಮವನ್ನು ವೆಂಕಟ, ಸೈಯದ್ ಹಾಗು ಅನ್ಸರ್ ಬಂಡೀಪುರದ ಹುಲಿ ಸಂರಕ್ಷಿತ ಅರಣ್ಯದ ಮದ್ದೂರು ವಲಯದ ಬರಗಿ-ಹೊಂಗಳ್ಳಿ ಬಳಿ ತಂದು ಮಾರಾಟಕ್ಕೆ ಯತ್ನಿಸಿದ್ದರು.

ಈ ಮಾಹಿತಿ ಅರಿತ ಬಂಡೀಪುರ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಆರೋಪಿ ಸೈಯದ್ ಮಾತ್ರ ಸಿಕ್ಕಿಬಿದ್ದಿದ್ದ. ಅನ್ಸರ್ ಹಾಗು ವೆಂಕಟ ಪರಾರಿಯಾಗಿದ್ದರು. ಈ ಸಂಬಂಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಈ ನಡುವೆಯೇ ಹುಲಿ ಕೊಂದ ಆರೋಪಿ ವೆಂಕಟ ಎಂಬಾತ ಸಾವನ್ನಪಿದ್ದ.
ಸೈಯದ್ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಜೆಎಂಎಫ್ಸಿ ನ್ಯಾಯಾಧೀಶ ಚಂದ್ರಶೇಖರ್ ಪಿ. ದಿಡ್ಡಿ ಅವರು ತೀರ್ಪು ನೀಡಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಅನ್ಸರ್ನನ್ನು ಖುಲಾಸೆಗೊಳಿಸಿದ್ದಾರೆ.












Click it and Unblock the Notifications