ಸಾಮಾನ್ಯರಂತೆ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಯದುವೀರ್ ದಂಪತಿ
Recommended Video
ಮೈಸೂರು, ಜೂನ್ 17: ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭಾನುವಾರ ಪತ್ನಿ ತ್ರಿಷಿಕಾ ಕುಮಾರಿ ಜತೆ ದೇವರಾಜ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದರು. ವ್ಯಾಪಾರಿಗಳೊಂದಿಗೆ ಆಪ್ತವಾಗಿ ಚರ್ಚಿಸಿ, ಮಾರುಕಟ್ಟೆಯಲ್ಲಿ ಒಂದು ಸುತ್ತು ಹಾಕಿದರು.
ಮಾರುಕಟ್ಟೆಗೆ ತೆರಳಿ ಸೊಪ್ಪು, ತರಕಾರಿ ಖರೀದಿಸುವ ಮೂಲಕ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಆಶ್ಚರ್ಯ ಮೂಡಿಸಿದರು. ಪತ್ನಿ ತ್ರಿಷಿಕಾ ಅವರು ದೇವರಾಜ ಮಾರುಕಟ್ಟೆಯನ್ನು ವೀಕ್ಷಿಸಿದ್ದಲ್ಲದೆ ಮಾರುಕಟ್ಟೆಯಲ್ಲಿ ಸೊಪ್ಪು, ತರಕಾರಿ, ನೇರಳೆ ಹಾಗೂ ನಂಜನಗೂಡು ರಸಬಾಳೆಯನ್ನು ಖರೀದಿಸಿ, ವ್ಯಾಪಾರಿಗಳೊಂದಿಗೆ ಇಲ್ಲಿನ ಸಮಸ್ಯೆಗಳ ಕುರಿತು ಮಾತುಕತೆ ನಡೆಸಿದರು.
ತ್ರಿಷಿಕಾ ಅವರು ಮಾರುಕಟ್ಟೆಯಲ್ಲಿ ಖರೀದಿಸಲು ಮುಂದಾದಾಗ ವ್ಯಾಪಾರಿಗಳು ದುಡ್ಡು ಪಡೆಯಲು ಹಿಂದೇಟು ಹಾಕಿದರು. ಕೈ ಮುಗಿದು ಹಣವನ್ನು ನಯವಾಗಿ ನಿರಾಕರಿಸಿದರು. ಆದರೆ ಇದಕ್ಕೆ ಬಗ್ಗದ ದಂಪತಿ ಬಲವಂತವಾಗಿ ಹಣ ನೀಡಿ ತರಕಾರಿ, ಸೊಪ್ಪು ಹಣ್ಣುಗಳನ್ನು ಖರೀದಿಸಿದರು. ನಂತರ ಮೈಸೂರಿನ ಗುರು ಸ್ವೀಟ್ ಮಾರ್ಟ್ ಗೆ ತೆರಳಿ ಮೈಸೂರು ಪಾಕ್ ಖರೀದಿಸಿದರು.

ರಾಜವಂಶಸ್ಥರು ಮಾರುಕಟ್ಟೆಗೆ ಬಂದು ಖುದ್ದಾಗಿ ತರಕಾರಿ ಖರೀದಿ ಮಾಡಿದ್ದು ರಾಜಪರಂಪರೆಯಲ್ಲಿಯೇ ಇದೆ ಮೊದಲು ಎನ್ನಲಾಗಿದೆ.











Click it and Unblock the Notifications