ಮೈಸೂರು; ನಿವೃತ್ತ ಇಂಟೆಲಿಜನ್ಸ್ ಬ್ಯೂರೋ ಅಧಿಕಾರಿ ಕೊಲೆ ಪ್ರಕರಣ, ಇಬ್ಬರು ಆರೋಪಿಗಳ ಬಂಧನ
ಮೈಸೂರು, ನವೆಂಬರ್, 08: ಮಾನಸಗಂಗೋತ್ರಿ ಒಳಗೆ ವಾಯುವಿಹಾರಕ್ಕೆ ತೆರಳಿದ್ದ ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದೀಗ ಪ್ರಕರಣದ ಜಾಲವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿ ಆಗಿದ್ದು, ಇಬ್ಬರು ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಮೃತ ನಿವೃತ್ತ ಅಧಿಕಾರಿ ಆರ್.ಎನ್. ಕುಲಕರ್ಣಿ ಹಾಗೂ ಪಕ್ಕದ ಮನೆಯವರ ನಡುವೆ ಮನಸ್ತಾಪ ಇತ್ತು. ಮನೆ ಕಟ್ಟುವ ವಿಚಾರದಲ್ಲಿ ಪಕ್ಕದ ಮನೆಯವರು ನಿಯಮ ಮೀರಿದ್ದರು ಎಂದು ಕುಲಕರ್ಣಿ ಈ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪಕ್ಕದ ಮನೆಯ ಮಾದಪ್ಪನ ಪುತ್ರ ಮನು (30) ಹಾಗೂ ಈತನ ಸ್ನೇಹಿತ ವರುಣ್‌ನನ್ನು ಬಂಧಿಸಲಾಗಿದೆ ಎಂದರು.
ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ
ಪ್ರತಿದಿನ ಕುಲಕರ್ಣಿ ವಾಯುವಿಹಾರಕ್ಕೆ ತೆರಳುತ್ತಿದ್ದರು. ಈ ವಿಷಯ ಹಾಗೂ ಜಾಗವನ್ನು ಮನು ಹಾಗೂ ವರುಣ್ ನೋಡಿಕೊಂಡು ಬಂದಿದ್ದರು. ನಂತರ ಕೊಲೆಗೆ ಯೋಜನೆ ರೂಪಿಸಿದ್ದಾರೆ. ಮನು ತನ್ನ ತಂದೆ ಮಾದಪ್ಪನಿಗೂ ವಿಚಾರ ತಿಳಿಸದೆ ಈ ಹತ್ಯೆಗೆ ಸ್ಕೆಚ್ ರೂಪಿಸಿದ್ದನು. ಸಿಸಿಟಿವಿಯನ್ನು ಆಧರಿಸಿದ ದೃಶ್ಯಗಳನ್ನು ತಪಾಸಣೆ ನಡೆಸಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ದ್ವಿಚಕ್ರವಾಹನದಲ್ಲಿ ವಾರದ ಹಿಂದೆ ಯಾರೆಲ್ಲ ಬಂದಿದ್ದರು ಎಂಬುದನ್ನು ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಆಗ ಇಬ್ಬರನ್ನು ಕರೆಯಿಸಿ ವಿಚಾರಣೆ ನಡೆಸಿದಾಗ ಸತ್ಯವನ್ನು ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.

ಘಟನೆ ಸಂಪೂರ್ಣಾ ವಿವರ
ವಾಯು ವಿಹಾರಕ್ಕೆ ಬಂದಿದ್ದ ನಿವೃತ್ತ ಐಬಿ (ಇಂಟಲಿಜೆನ್ಸ್ ಬ್ಯುರೋ) ಅಧಿಕಾರಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಮೈಸೂರಿನ ಶಾರದಾದೇವಿನಗರದ ನಿವಾಸಿ ಆರ್.ಎನ್. ಕುಲಕರ್ಣಿ(82) ಅವರು ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಅಪಘಾತದ ಬಗ್ಗೆ ಸಾಕಷ್ಟು ಅನುಮಾನ ಮೂಡಿತ್ತು. ಮೃತರ ಕುಟುಂಬದವರು ಇದೊಂದು ಕೊಲೆ ಎಂದು ದೂರು ನೀಡಿದ್ದರು. ಜೊತೆಗೆ ಪಕ್ಕದ ಮನೆಯವರಿಂದ ನನಗೆ ಜೀವಾಪಾಯ ಇದೆ ಎಂದು ಕುಲಕರ್ಣಿ ಈ ಹಿಂದೆ ಹೇಳಿಕೊಂಡಿದ್ದರು. ಇದರ ಅನ್ವಯ ಕುಟುಂಬದವರು ದೂರು ನೀಡಿದ್ದರು. ತನಿಖೆ ಚುಕುಗೊಳಿಸಿದ್ದ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ. ಮೂಲತಃ ಹಾವೇರಿ ಜಿಲ್ಲೆ ಸವಣೂರಿನ ಕುಲಕರ್ಣಿ ಅವರು 1963ರಲ್ಲಿ ಕೇಂದ್ರ ಸರ್ಕಾರದ ಇಂಟೆಲಿಜೆನ್ಸ್ ಬ್ಯೂರೋ ಸೇರ್ಪಡೆಗೊಂಡು ನಾನಾ ಹುದ್ದೆ ಹಾಗೂ ಸ್ಥಳಗಳಲ್ಲಿ ಮೂರೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.
ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ
ಅಕ್ಟೋಬರ್ 4ರ ಶುಕ್ರವಾರ ಸಂಜೆ ಶಾರದಾದೇವಿನಗರದ ನಿವಾಸಿ ಕುಲಕರ್ಣಿ ಎಂದಿನಂತೆ ವಾಯುವಿಹಾರಕ್ಕೆ ಕಾರಿನಲ್ಲಿ ಮಾನಸಗಂಗೋತ್ರಿ ಕ್ಯಾಂಪಸ್‌ಗೆ ತೆರಳಿದ್ದರು. ಆ ವೇಳೆ ಕುಲಕರ್ಣಿ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ವಿಷಯ ತಿಳಿದ ಅವರ ಕಾರು ಚಾಲಕ ಸ್ಥಳಕ್ಕೆ ದೌಡಾಯಿಸಿ ಅವರನ್ನು ತಕ್ಷಣ ಕಾಮಾಕ್ಷಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಲಕರ್ಣಿ ಮೃತಪಟ್ಟಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಅಪಘಾತದ ಬಗ್ಗೆ ಸಾಕಷ್ಟು ಅನುಮಾನ ಮೂಡಿತ್ತು. ಕ್ಯಾಂಪಸ್‌ನಲ್ಲಿದ್ದ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ನೋಂದಣಿ ಸಂಖ್ಯೆ ಇಲ್ಲದ ಕಾರು ಡಿಕ್ಕಿ ಹೊಡೆದು ಪರಾರಿ ಆಗಿರುವುದು ಕಂಡು ಬಂದಿತ್ತು.

ಆರೋಪಿಗಳ ಪತ್ತೆಗೆ ಮೂರು ತಂಡ ರಚನೆ
ಏಕಾಏಕಿ ಡಿಕ್ಕಿ ಹೊಡೆದ ಮೇಲೆ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದು, ಕೊಲೆ ಉದ್ದೇಶವೇ ಎಂಬ ಅನುಮಾನ ಪೊಲೀಸರಿಗೆ ಖಚಿತವಾಗಿತ್ತು. ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಈ ಕುರಿತು ಮಾತನಾಡಿ, "ನಿವೃತ್ತ ಐಬಿ ಅಧಿಕಾರಿ ಕುಲಕರ್ಣಿ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರಕರಣದ ತನಿಖೆ ವೇಳೆ ಕೊಲೆ ಎಂಬುದು ಬೆಳಕಿಗೆ ಬಂದಿದೆ. ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿತ್ತು," ಎಂದು ಹೇಳಿದ್ದರು.












Click it and Unblock the Notifications