ಕಳ್ಳರೇ ಹುಷಾರ್ ! ಈ ರಸ್ತೆ ತುಂಬಾ ಇದೆ ಸಿಸಿ ಕ್ಯಾಮೆರಾ
ಮೈಸೂರು, ಫೆಬ್ರವರಿ 01 : ಮನೆಯಲ್ಲಿ ಕಳ್ಳತನವಾದಾಗಲೋ ಅಥವಾ ಸುತ್ತಮುತ್ತ ಅಪರಾಧವೇನಾದರೂ ಜರುಗಿದರೆ ನಾವು ಮೊದಲು ಬೆಟ್ಟು ಮಾಡಿ ತೋರಿಸುವುದು ಪೊಲೀಸರನ್ನು. ಪೊಲೀಸರು ರಕ್ಷಣೆ ನೀಡಿಲ್ಲವೆಂದೋ ಅಥವಾ ಅವರ ಕಾರ್ಯ ಸರಿಯಿಲ್ಲವೆಂದೋ ದೂರುತ್ತೇವೆ.
ಆದರೆ ಅವೆಲ್ಲದಕ್ಕಿಂತ ಹೆಚ್ಚಾಗಿ ನಮ್ಮನ್ನು ನಾವು ಎಷ್ಟು ಸುರಕ್ಷಿತವಾಗಿ ಇರಿಸಿಕೊಂಡಿದ್ದೇವೆ? ನಾವು ಹೇಗೆ ಅಪರಾಧ ಹಾಗೂ ಅಪರಾಧಿಗಳನ್ನು ಮಟ್ಟ ಹಾಕಬಹುದು ಎಂಬುದನ್ನು ಅರಿಯಬೇಕು. ಇತರರಲ್ಲಿಯೂ ಜಾಗೃತಿ ಮೂಡಿಸಬೇಕು. ಪ್ರಜ್ಞಾವಂತ ನಾಗರಿಕರಾದ ನಮ್ಮ ಕರ್ತವ್ಯ ಕೂಡ ಇದು.
ಇದು ಸಾಧ್ಯವಾಗಬೇಕಾದರೆ ಮೊದಲಿಗೆ ನಮ್ಮ ಮನೆಯಲ್ಲಿ, ಅಪಾರ್ಟ್ ಮೆಂಟುಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ನಮ್ಮ ಮನೆಗೆ ಅಳವಡಿಸಿದರೆ ಸಾಕೇ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಮೈಸೂರಿನ ಒಂದು ಬಡಾವಣೆಯ ಜನ ಉತ್ತರ ನೀಡಿದ್ದಾರೆ.
ಹೌದು, ಗೋಕುಲಂ ಬಡಾವಣೆಯ ಸಾರ್ವಜನಿಕರೆಲ್ಲ ಸೇರಿಕೊಂಡು ತಮ್ಮ ಮನೆಯ ಮುಂದಿನ ರಸ್ತೆಗಳಿಗೆ ಸ್ವಂತ ಹಣದಲ್ಲಿ 16 ಸಿಸಿಟಿವಿ ಕ್ಯಾಮರಾಗಳನ್ನ ಅಳವಡಿಸಿದ್ದಾರೆ. ಮತ್ತು ಈ ಮೂಲಕ ಅಪರಾಧಗಳನ್ನ ತಡೆಯುವುದಕ್ಕೆ ಇಲ್ಲಿನ ಪೊಲೀಸರಿಗೆ ನೆರವಾಗಿದ್ದಾರೆ ಮತ್ತು ಮೈಸೂರಿನ ಇತರ ಬಡಾವಣೆಗಳಿಗೆ ಮಾದರಿಯಾಗಿದ್ದಾರೆ.

ಸಿಸಿ ಕ್ಯಾಮರಾ ಅಳವಡಿಕೆ ಎಲ್ಲೆಲ್ಲಿ
ವಿವಿ ಪುರಂ ಪೊಲೀಸ್ ಠಾಣಾ ಸರಹದ್ದಿನ ಗೋಕುಲಂ 3ನೇ ಹಂತ 9, 9ಎ ಹಾಗೂ 10ನೇ ಮುಖ್ಯ ರಸ್ತೆಯ ನಿವಾಸಿಗಳ ಸಭೆ ನಡೆಸಿ ಸ್ಥಳೀಯ ನಿವಾಸಿಗಳಾದ ನಿವೃತ್ತ ಕಂದಾಯಾಧಿಕಾರಿ ಟಿ.ರಾಜು, ಯುವಕರಾದ ವಿನಯ್ ವೈದ್ಯನಾಥನ್, ಕಾರ್ತಿಕ್‌ರಾಜ್ ಮುಂದಾಳತ್ವದಲ್ಲಿ ಒಟ್ಟು 22 ಮನೆಯ ನಿವಾಸಿಗಳು ತಮ್ಮ ರಸ್ತೆ ಹಾಗೂ ಮನೆಗಳು ಕಾಣುವಂತೆ ತಮ್ಮ ಸ್ವಂತ ಖರ್ಚಿನಲ್ಲಿ 16 ಉತ್ತಮ ಗುಣಮಟ್ಟದ ಹೈ ಫೋಕಸ್ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿರುತ್ತಾರೆ.

ಸಿಸಿಟಿವಿ ಅಳವಡಿಸಿ ಪೊಲೀಸರಿಗೆ ನೆರವು
ಸಿಸಿ ಟಿವಿ ಕ್ಯಾಮೆರಾಗಳು ಅಪರಾಧ ತಡೆ ಮತ್ತು ಪತ್ತೆ ಕಾರ್ಯದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಇಲಾಖೆಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರ ಜತೆಗೆ ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಈಗಾಗಲೇ ನಗರದ ಬಡಾವಣೆಗಳಲ್ಲಿ ಸಾರ್ವಜನಿಕ ಸಹಯೋಗದೊಂದಿಗೆ ಸಿಸಿ ಟಿವಿ ಕ್ಯಾಮೆರಾಗಳನ್ನು ಹಾಕಲಾಗಿದೆ.

ಕೆಲಸ ನಿರ್ವಹಿಸುವ ವಿಧಾನ
ಈ ಕ್ಯಾಮರಾಗಳನ್ನು ಸಾರ್ವಜನಿಕರೇ ತಮ್ಮ ಸ್ವಂತ ಹಣದಲ್ಲಿ ಅಳವಡಿಸಿದ್ದು, ಅಂದಾಜು 1.25 ಲಕ್ಷ ರೂ. ವೆಚ್ಚವಾಗಿದೆ. 22 ಮನೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಮಾನಿಟರ್ ಅನ್ನು ಒಂದು ಮನೆಯಲ್ಲಿ ಅಳವಡಿಸಲಾಗಿದ್ದು, ಪ್ರತಿ ಮನೆಯ ಮಾಲೀಕರ ಮೊಬೈಲ್‌ನಲ್ಲಿಯೂ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ಬರಲಿದೆ.

ಸಿಸಿಟಿವಿ ಅಳವಡಿಕೆಯಿಂದ ಅಪರಾಧ ಕಡಿಮೆ ಆಗುವ ವಿಶ್ವಾಸ
ಸಿಸಿಟಿವಿ ಕ್ಯಾಮರಾಗಳು ಅಪರಾಧ ತಡೆ ಮತ್ತು ಪತ್ತೆ ಕಾರ್ಯದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿವೆ. ಈ ಹಿನ್ನೆಲೆ ಇಲಾಖೆಯಿಂದ ಕ್ಯಾಮರಾಗಳನ್ನು ಅಳವಡಿಸುವುದರ ಜೊತೆಗೆ ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ.
ಈಗಾಗಲೇ ನಗರದ ಬಡಾವಣೆಗಳಲ್ಲಿ ಸಾರ್ವಜನಿಕ ಸಹಯೋಗದೊಂದಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಲಾಗಿದೆ. ಈ ಕಾರ್ಯಕ್ರಮವನ್ನು ಇನ್ನು ಮುಂದೆಯೂ ಸಹ ಮುಂದುವರೆಸುವ ಮೂಲಕ ಇತರೇ ಬಡಾವಣೆಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ನಗರದ ಪೊಲೀಸ್ ಆಯುಕ್ತ ಡಾ. ಎ.ಸುಬ್ರಮಣ್ಯೇಶ್ವರ ರಾವ್.
ಒಟ್ಟಾರೆ ನಾವೆಲ್ಲರೂ ನಮ್ಮ ಬೀದಿಗಳಲ್ಲಿಯೂ ಈ ರೀತಿಯ ಯೋಜನೆ ಜಾರಿಗೆ ತರುವಲ್ಲಿ ಕೈ ಜೋಡಿಸಿದರೆ ಮುಂದೊಂದು ದಿನ ಅಪರಾಧಗಳನ್ನು, ಅಪರಾಧಿಗಳನ್ನು ತಡೆಯುವ ಕೆಲಸಕ್ಕೆ ಕೈ ಜೋಡಿಸೋಣ.












Click it and Unblock the Notifications