ಮೈಸೂರು ವಿವಿ ಬೋಧಕೇತರ ಸಿಬ್ಬಂದಿ ನೇಮಕದಲ್ಲಿ ಅಕ್ರಮ ನಡೆದಿಲ್ಲ
ಮೈಸೂರು, ಜೂನ್ 27 : ಮೈಸೂರು ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ವಿಶ್ವವಿದ್ಯಾಲಯದ ಕುಲಸಚಿವರು ಹೇಳಿದರು. 96 ಬೋಧಕೇತರ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ವಿಶ್ವವಿದ್ಯಾಲಯದ ಕುಲಸಚಿವ ಆರ್.ರಾಜಣ್ಣ ಅವರು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಈ ಕುರಿತು ವರದಿ ನೀಡಿದ್ದಾರೆ. 96 ಬೋಧಕೇತರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಾಗ ಮೀಸಲಾತಿ ನಿಯಮ ಪಾಲಿಸಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಹೇಳಿತ್ತು.
ರಾಜ್ಯಪಾಲರ ಆದೇಶದಂತೆ ಬೋಧಕೇತರ ಸಿಬ್ಬಂದಿಗಳನ್ನು ತಕ್ಷಣದಿಂದಲೇ ಕರ್ತವ್ಯದಿಂದ ಬಿಡುಗಡೆ ಮಾಡಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶ ನೀಡಿತ್ತು. ಆದ್ದರಿಂದ, ಆರ್.ರಾಜಣ್ಣ ಅವರು ಇಲಾಖೆಗೆ ವರದಿ ನೀಡಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ ಆದೇಶ ನೀಡಿದಂತೆ 2016ರ ಡಿಸೆಂಬರ್‌ನಲ್ಲಿ 124 ಬೋಧಕೇತರ ಸಿಬ್ಬಂದಿಗಳನ್ನು ನೇಮಕ ಮಾಡಿಲ್ಲ. ನೇಮಕ ಮಾಡದೇ ಇರುವ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
2017ರ ಜನವರಿಯಲ್ಲಿ ಬೋಧಕೇತರ ಸಿಬ್ಬಂದಿಗಳನ್ನು 11 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. 11 ತಿಂಗಳ ನಂತರ ಸಹಜವಾಗಿ ಅವರ ಉದ್ಯೋಗ ಅವಧಿ ಮುಗಿಯುತ್ತದೆ. ಹೀಗಿರುವಾಗ ಅವರನ್ನು ವಜಾಗೊಳಿಸುವ ಪ್ರಮೇಯವೇ ಇಲ್ಲ ಎಂದು ಹೇಳಿದ್ದಾರೆ.
2007ರಿಂದ ಇಲ್ಲಿಯ ತನಕ ಯಾವುದೇ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ. ನಿಯಮಾವಳಿ ಪ್ರಕಾರ ತಾತ್ಕಾಲಿಕವಾಗಿ ಸಿಬ್ಬಂದಿಯನ್ನು 11 ತಿಂಗಳ ಅವಧಿಗೆ ಮಾತ್ರ ನೇಮಕ ಮಾಡಿಕೊಳ್ಳಲು ಸರ್ಕಾರ ಅಥವ ಸಿಂಡಿಕೇಟ್ ಅನುಮತಿ ಬೇಕಾಗಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಪ್ರೊ.ಕೆ.ಎಸ್.ರಂಗಪ್ಪ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಅವರ ಅಧಿಕಾರ ಅವಧಿ ಮುಗಿಯಲು ಕೆಲವು ತಿಂಗಳು ಬಾಕಿ ಇರುವಾಗ 96 ಬೋಧಕೇತರ ಸಿಬ್ಬಂದಿಗಳನ್ನು ನೇಮಕ ಮಾಡಿದ್ದರು. ಈ ನೇಮಕಾತಿಯ ವೇಳೆ ಮೀಸಲಾತಿ ನಿಯಮಗಳನ್ನು ಪಾಲಿಸಿರಲಿಲ್ಲ ಎಂಬುದು ವಿವಾದಕ್ಕೆ ಕಾರಣವಾಗಿದೆ.












Click it and Unblock the Notifications