ಮೈಸೂರಿನಲ್ಲಿ ಬಿಜೆಪಿ ಮುಖಂಡನ ಹತ್ಯೆಗೆ ಅಸಲಿ ಕಾರಣ ಬಯಲಾಯ್ತು
ಮೈಸೂರು, ಮಾರ್ಚ್ 11: ಮಾರ್ಚ್ 6ರಂದು ಹುಟ್ಟುಹಬ್ಬದ ಪಾರ್ಟಿಯಲ್ಲೇ ನಡೆದಿದ್ದ ಇಲ್ಲಿನ ಬಿಜೆಪಿ ಮುಖಂಡ ಆನಂದ್ ಬರ್ಬರ ಹತ್ಯೆಗೆ ಅಸಲಿ ಕಾರಣ ತಿಳಿದು ಬಂದಿದೆ.
Recommended Video
ಮೈಸೂರಿನ ಕುವೆಂಪು ನಗರದ ಲವ ಕುಶ ಪಾರ್ಕ್ ಬಳಿಯ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ಮಾರ್ಚ್ 5ರ ರಾತ್ರಿ ಬಿಜೆಪಿ ಮುಖಂಡ ಆನಂದ್ ಬರ್ಬರವಾಗಿ ಕೊಲೆಯಾಗಿದ್ದರು. ಬಿಯರ್ ಬಾಟಲಿಯಲ್ಲಿ ಹೊಡೆದು ಅವರನ್ನು ಕೊಲೆ ಮಾಡಲಾಗಿತ್ತು. ಉತ್ತನಹಳ್ಳಿ ಸಮೀಪ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಾರ್ಟಿ ಮುಗಿಸಿ ಸರ್ವೀಸ್ ಅಪಾರ್ಟ್ ಮೆಂಟ್ ನಲ್ಲಿ ಮಾಡಿದ್ದ ರೂಮ್ ಗೆ ಮರಳಿದ್ದ ವೇಳೆ ಈ ಕೃತ್ಯ ನಡೆಸಲಾಗಿತ್ತು. ನಂತರ ಕೊಲೆ ಆರೋಪಿ ಬಸವರಾಜ್ ಪೊಲೀಸರಿಗೆ ಶರಣಾಗಿದ್ದ. ಇದೀಗ ಕೊಲೆಗೆ ಅಸಲಿ ಕಾರಣ ತಿಳಿದುಬಂದಿದೆ.

"ಅಕ್ಕನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ"
ಬಿಜೆಪಿ ಮುಖಂಡ ಆನಂದ್ ಕೊಲೆ ಮಾಡಿರುವುದಾಗಿ ಆರೋಪಿ ಬಸವರಾಜ್ ಪೊಲೀಸರ ಮುಂದೆ ಶರಣಾಗಿದ್ದ. ಆತ ಇದೀಗ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಅದರ ಪ್ರಕಾರ, ಬಸವರಾಜ್ ನ ಅಕ್ಕನ ಬಗ್ಗೆ ಕೊಲೆಯಾದ ಆನಂದ್ ಕೆಟ್ಟದಾಗಿ ಮಾತನಾಡಿದ್ದ. ಆ ಮಾತೇ ಆನಂದ್ ಜೀವಕ್ಕೆ ಮುಳುವಾಗಿದೆ. ಇದೇ ಕಾರಣಕ್ಕೆ ಆರೋಪಿ ಬಸವರಾಜ್ ಮದ್ಯ ಕುಡಿದು ಅದೇ ಬಾಟಲ್ ನಲ್ಲಿ ಆನಂದ್ ತಲೆಗೆ ಹೊಡೆದು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ.

ಈ ಹಿಂದೆ ಬಸವರಾಜ್ ಮೇಲೆ ಆನಂದ್ ಹಲ್ಲೆ
ಮಾರ್ಚ್ 5ರ ಸಂಜೆ ಆನಂದ್, ಬಸವರಾಜ್ ಗೆ ಕರೆ ಮಾಡಿ ಪಾರ್ಟಿಗೆ ಕರೆಸಿಕೊಂಡಿದ್ದ. ಮಧ್ಯರಾತ್ರಿಯವರೆಗೆ ಎಲ್ಲರೂ ಪಾರ್ಟಿ ಮಾಡಿದ್ದರು. ಕುಡಿದಾಗ ಬಾಸ್ ನಂತೆ ವರ್ತಿಸುತ್ತಿದ್ದ ಬಿಜೆಪಿ ಮುಖಂಡ ಆನಂದ್, ತನ್ನ ಸುತ್ತಮುತ್ತ ಇದ್ದವರನ್ನು ನಿಂದಿಸುತ್ತ ತಾನು ಹೇಳಿದ ಕೆಲಸ ಮಾಡುವಂತೆ ಸೂಚಿಸುತ್ತಿದ್ದ. ಅಲ್ಲದೆ ಈ ಹಿಂದೆಯೂ ಪಾರ್ಟಿ ಕೊಡಿಸಿ ಬಸವರಾಜ್ ಮೇಲೆ ಆನಂದ್ ಹಲ್ಲೆ ಮಾಡಿದ್ದ.

ಆನಂದ್ ಕುಚೇಷ್ಠೆಗೆ ಸಿಟ್ಟಿಗೆದ್ದ ಬಸವರಾಜ್
ಈ ಬಾರಿಯೂ ಹುಟ್ಟುಹಬ್ಬದ ದಿನ ಪಾರ್ಟಿಯಲ್ಲಿ ಮಧ್ಯರಾತ್ರಿ ಬಸವರಾಜ್ ಜೊತೆ ಆನಂದ್ ಕುಚೇಷ್ಠೆ ಮಾಡಿ, ಬಸವರಾಜ್ ತಲೆ ಮೇಲೆ ಹೊಡೆದು ಅವರ ಅಕ್ಕನ ಬಗ್ಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಆನಂದ್ ಮಾತಿನಿಂದ ಸಿಟ್ಟಿಗೆದ್ದ ಬಸವರಾಜ, ತಾನು ಕುಡಿಯುತ್ತಿದ್ದ ಮದ್ಯದ ಬಾಟಲ್ ನಿಂದಲೇ ಆನಂದ್ ತಲೆಗೆ ಹೊಡೆದಿದ್ದಾನೆ. ಹೊಡೆತಕ್ಕೆ ಆನಂದ್ ತಲೆ ಹಾಗೂ ಬಾಟಲ್ ಎರಡೂ ತೆರೆದುಕೊಂಡಿದೆ. ಆನಂದ್ ತೀವ್ರ ರಕ್ತಸ್ರಾವದಿಂದ ನರಳುತ್ತಾ ಕೆಳಗೆ ಬಿದ್ದಿದ್ದಾನೆ. ಆಗ ಜೇಬಿನಲ್ಲಿದ್ದ ಚಾಕುವಿನಿಂದ ಆನಂದ್ ಗೆ ಹಿಗ್ಗಾಮುಗ್ಗ ಇರಿದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಕೊಲೆ ನಂತರ ಹೆಂಡತಿ ತವರಿಗೆ ಕಳಿಸಿದ ಬಸವರಾಜ್
ಕೊಲೆಯಾದ ಜಾಗದಲ್ಲಿ ಸುರೇಶ್, ಗಿರಿ, ಮಂಜು ಎಂಬುವವರು ಇದ್ದರು. ಅವರು ಘಟನೆ ನಂತರ ಪರಾರಿಯಾಗಿದ್ದರು. ಇತ್ತ ಕೊಲೆ ನಂತರ ಅಪಾರ್ಟ್ ಮೆಂಟ್ ನಿಂದ ಮನೆಗೆ ತೆರಳಿ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಮಾರ್ಚ್ 6ರಂದೇ ಬೆಂಗಳೂರಿಗೆ ಬಸವರಾಜ್ ತೆರಳಿದ್ದಾನೆ. ತನ್ನ ಸ್ನೇಹಿತರ ಜೊತೆ ತಾನು ಮಾಡಿದ ಕೊಲೆ ಬಗ್ಗೆ ಹೇಳಿಕೊಂಡಿದ್ದಾನೆ. ನಂತರ ಸ್ನೇಹಿತರ ಸಲಹೆಯಂತೆ ತಾನೇ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ.












Click it and Unblock the Notifications