ರಾಮ್ ರಹೀಂ ಸಿಂಗ್ ಪ್ರಕರಣದ ತನಿಖಾಧಿಕಾರಿ ನಾರಾಯಣನ್ ಸಂದರ್ಶನ
ಇಡೀ ದೇಶವನ್ನೇ ಕುತೂಹಲದಿಂದ ಎದುರು ನೋಡುವಂತೆ ಮಾಡಿದ ಪ್ರಕರಣ ಗುರ್ಮೀತ್ ರಾಮ್ ರಹೀಂ ಸಿಂಗ್ ನ ಮೇಲಿದ್ದ ಅತ್ಯಾಚಾರದ ಆರೋಪ. ಆ ಪ್ರಕರಣದಲ್ಲಿ ಆತ ದೋಷಿ ಎಂದು ಪ್ರಕಟಗೊಳ್ಳುತ್ತಿದ್ದಂತೆ ಇಡೀ ಪಂಚಕುಲ ಅಕ್ಷರಶಃ ನರಕ ಸದೃಶವಾಯಿತು.
ಬಾಬಾ ಅಪರಾಧಿ ಎಂದು ಪ್ರಕಟಗೊಳ್ಳುತ್ತಿದ್ದಂತೆ ಈ ತೆರನಾದರೆ, ಇನ್ನು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಾಗ ಅಧಿಕಾರಿಗಳ ಪಾಡೇನಾಗಿರಬಹುದು? ಊಹಿಸಲು ಅಸಾಧ್ಯವೇ ಸರಿ.
ಅಂತಹ ಸವಾಲಿನ ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆಗೊಳಪಡಿಸಿ, ಆತ ಒಬ್ಬ ಅತ್ಯಾಚಾರಿ ಎಂಬುದು ಕೋರ್ಟ್ ನಲ್ಲಿ ಸಾಬೀತಾಗುವಷ್ಟು ಗಟ್ಟಿಯಾಗಿ ಪ್ರಕರಣದ ಸಾಕ್ಷ್ಯ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ನಿವೃತ್ತ ಸಿಬಿಐ ಡಿಐಜಿ ಮುಳಂಜಿ ನಾರಾಯಣನ್.
ಸದ್ಯಕ್ಕೆ ನಿವೃತ್ತಿ ಜೀವನ ನಡೆಸುತ್ತಿರುವ ಅವರು, ಮೈಸೂರಿನ ತಮ್ಮ ಸಂಬಂಧಿಕರ ಮನೆಗೆ ಮೂರು ದಿನದ ಹಿಂದೆ ಬಂದಿದ್ದಾರೆ. ಬಾಬಾ ರಾಮ್ ರಹೀಮ್ ಸಿಂಗ್ ನ ಮೇಲಿನ ಪ್ರಕರಣದ ತನಿಖೆ ಎಷ್ಟು ಸವಾಲಾಗಿತ್ತು ಎಂಬುದರ ಬಗ್ಗೆ ಒನ್ಇಂಡಿಯಾ ಕನ್ನಡ ಜತೆಗೆ ಮಾತನಾಡಿದ್ದಾರೆ. ಅವರು ನೀಡಿರುವ ಈ ಸಂದರ್ಶನ ರೋಚಕ ಹಾಗೂ ಸ್ಫೋಟಕವಾಗಿದೆ.
Recommended Video


ಪ್ರಶ್ನೆ: ಸಿಬಿಐ ಕೋರ್ಟ್ ತೀರ್ಪಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾರಾಯಣನ್: ಕೋರ್ಟ್ ತೀರ್ಪು ನನಗೆ ಸಮಾಧಾನ ತರುವುದು ಮುಖ್ಯವಲ್ಲ, ನೊಂದ ಮಹಿಳೆಯರಿಗೆ ನ್ಯಾಯ ಸಿಗಬೇಕಿತ್ತು. ಈ ಪ್ರಕರಣದಿಂದ ಅಧಿಕಾರಿಗಳು ಪಾಠ ಕಲಿಯಬೇಕು. ಎಷ್ಟೇ ಒತ್ತಡವಿರಲಿ ನಮಗೆ ಒಪ್ಪಿಸಿದ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು.
ಈಗ ಈತನಿಗೆ 20 ವರ್ಷ ಜೈಲು ಶಿಕ್ಷೆಯಾಗಿದೆ. ಆತನಿಗೆ ಜೀವಾವಧಿ ಶಿಕ್ಷೆಯಾಗಬೇಕಿತ್ತು. ಈ ಬಗ್ಗೆ ಹೈಕೋರ್ಟ್ ಗೆ ಸಿಬಿಐ ಮೇಲ್ಮನವಿ ಸಲ್ಲಿಸಲಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಬಲವಾಗಿದೆ ಹಾಗೂ ಆಕ್ಟೀವ್ ಆಗಿದೆ. ಅದು ನಮ್ಮನ್ನು ರಕ್ಷಣೆ ಮಾಡುತ್ತದೆ.
ಇನ್ನು ಸಿಬಿಐ ಹಾಗೂ ಪೊಲೀಸರಿಗೆ ಏನೇ ಒತ್ತಡವಿದ್ದರೂ ಕಾನೂನು ಪ್ರಕಾರ ಕೆಲಸ ಮಾಡಬೇಕು. ಈ ಮಧ್ಯೆ ಯಾವುದೇ ಭ್ರಷ್ಟಾಚಾರ ಇರಬಾರದು. ಮೊದಲು ನಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ನನಗೆ ವಹಿಸಿದ ಮೂರು ಪ್ರಕರಣಗಳ ತನಿಖೆಯನ್ನು ಹಾಗೇ ಮಾಡಿದ್ದೇನೆ.

ಪ್ರಶ್ನೆ: ತನಿಖೆ ನಡೆಸುವಾಗ ನಿಮಗಾದ ಅನುಭವಗಳನ್ನು ತಿಳಿಸುತ್ತೀರಾ?
ನಾರಾಯಣನ್: ಬಾಬಾ ಕರ್ಮಕಾಂಡ ಒಂದೆರಡಲ್ಲ. ತನಿಖೆ ಮಾಡುವ ವೇಳೆ ಭಾರೀ ಒತ್ತಡವಿತ್ತು. ಬಾಬಾ ಅನುಯಾಯಿಗಳ ಬೆದರಿಕೆಗಳಂತೂ ಹೆಚ್ಚಾಗಿತ್ತು. ಹಲವಾರು ಹೆಣ್ಣುಮಕ್ಕಳು ಬಾಬಾ ದೌರ್ಜನ್ಯಕ್ಕೆ ತುತ್ತಾಗಿದ್ದರೂ ನಮ್ಮ ತನಿಖೆಗೆ ಸಹಕರಿಸಿದವರು ಇಬ್ಬರು ಮಾತ್ರ.
ಅವರು ನೀಡಿದ ಸಾಕ್ಷ್ಯದಿಂದಾಗಿ ಇಡೀ ಪ್ರಕರಣಕ್ಕೆ ಜೀವ ಬಂತು. ಸಿಬಿಐಗೆ ದೂರು ಸಲ್ಲಿಕೆ ಆಗಿದ್ದರೂ ಐದು ವರ್ಷ ಕಾಲ ರಾಜಕೀಯ ಒತ್ತಡದಿಂದಾಗಿ ಪ್ರಕರಣದ ತನಿಖೆಯಾಗಿರಲಿಲ್ಲ. ಹೈಕೋರ್ಟ್ ನಮಗೆ ಒಪ್ಪಿಸಿದ ಪ್ರಕರಣವನ್ನು ತನಿಖೆ ಮಾಡಿದೆವು.
ನನಗೆ ಯಾವುದೇ ಭಯವಿಲ್ಲ, ಯಾವುದೇ ಬೆದರಿಕೆಗೆ ಬಗ್ಗದೆ ತನಿಖೆ ಮಾಡಿದ್ದೇನೆ. ಇದೊಂದೇ ಪ್ರಕರಣವಲ್ಲ, ರಾಜೀವ್ ಗಾಂಧಿ ಹತ್ಯೆ, ಬಾಬ್ರಿ ಮಸೀದಿ ಪ್ರಕರಣದ ತನಿಖೆಯಲ್ಲೂ ಭಾಗಿಯಾಗಿದ್ದೆ. ನಮ್ಮ ದೇಶದಲ್ಲಿ ಇಂತಹ ಬಾಬಾಗಳಿಗೆ ರಾಜಕೀಯ ಪಕ್ಷಗಳ ಬೆಂಬಲವಿದೆ, ಹಾಗಾಗಿ ತನಿಖೆ ಮಾಡೋದು ಕಷ್ಟವಾಯಿತು.

ಪ್ರಶ್ನೆ: ರಾಮ್ ರಹೀಂ ತನಿಖೆ ವೇಳೆಯ ಒಂದು ಸಣ್ಣ ಘಟನೆಯನ್ನು ತಿಳಿಸಿ
ನಾರಾಯಣನ್: ತನಿಖೆ ಪ್ರಾರಂಭಿಸಿದ ಬಳಿಕ ರಾಂ ರಹೀಂನನ್ನು ವಿಚಾರಣೆಗೆ ಗುರಿಪಡಿಸುವ ಸಲುವಾಗಿ ಸಿರ್ಸಾದಲ್ಲಿರುವ ಆಶ್ರಮಕ್ಕೆ ಹೋದಾಗ ಬಾಬಾ ಬರೀ ಅರ್ಧ ತಾಸಿನ ಕಾಲಾವಕಾಶ ನೀಡಿದ. ಇದಕ್ಕೆ ಸಮ್ಮತಿಸಿ ಒಳ ಹೋದ ನಮ್ಮ ತಂಡಕ್ಕೆ ಆಶ್ಚರ್ಯ ಕಾದಿತ್ತು.
ರಾಂ ರಹೀಂನ ವಸತಿ ಯಾವ ಪಂಚತಾರಾ ಹೊಟೇಲಿನ ಕೊಠಡಿಗೂ ಕಡಿಮೆಯಿರಲಿಲ್ಲ. ಎಲ್ಲ ಆಧುನಿಕ ಐಷಾರಾಮಗಳು ಅಲ್ಲಿದ್ದವು. ಅರ್ಧ ತಾಸು ಎಂದು ಹೇಳಿದ್ದ ರಾಂ ರಹೀಂನನ್ನು ಬರೋಬ್ಬರಿ ಮೂರು ತಾಸಿಗೂ ಹೆಚ್ಚು ಹೊತ್ತು ಪ್ರಶ್ನಿಸಿದೆ.
ಈ ಸಂದರ್ಭದಲ್ಲಿ ರಾಂ ರಹೀಂನ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿದೆ ಎನ್ನುವುದು ನನಗೆ ಮನವರಿಕೆಯಾಗಿತ್ತು. ಇದು ನನ್ನ ವೃತ್ತಿ ಜೀವನದಲ್ಲೇ ಮರೆಯಲಾಗದ ಘಟನೆ.

ಪ್ರಶ್ನೆ: ವಿಚಾರಣೆ ಅವಧಿ ದೀರ್ಘವೆನಿಸಲಿಲ್ಲವೇ ಸರ್?
ನಾರಾಯಣನ್: ಉತ್ತರ ಭಾರತದ ನ್ಯಾಯಾಲಯಗಳಲ್ಲಿ ವಿಚಾರಣೆ ವಿಳಂಬವಾಗಿ ನಡೆಯುವುದರಿಂದ 15 ವರ್ಷಗಳ ಬಳಿಕ ತೀರ್ಪು ಹೊರಬಂದಿರುವುದು ಆಶ್ಚರ್ಯವಾಗಿಲ್ಲ. ಕೊನೆಗೂ ನಾವು ನಡೆಸಿದ ತನಿಖೆಗೆ ತಕ್ಕ ಪ್ರತಿಫಲ ಸಿಕ್ಕಿದ ಸಮಾಧಾನವಿದೆ.












Click it and Unblock the Notifications