Pratap Simha: ಮೈಸೂರು ರಾಮಲಲ್ಲಾ ಕಾರ್ಯಕ್ರಮದಿಂದ ಪ್ರತಾಪ್ ಸಿಂಹನನ್ನು ಓಡಿಸಿದ ದಲಿತರು, ಏಕೆ?
ಮೈಸೂರು, ಜನವರಿ 23: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ರಾಮಲಲ್ಲಾ ವಿಗ್ರಹ ಕರ್ನಾಟಕದ ಮೈಸೂರಿನ ಗ್ರಾಮವೊಂದರ ದಲಿತರ ಜಮೀನಿನದ್ದು. ಈ ಗ್ರಾಮದಲ್ಲಿ ಶ್ರಿರಾಮೋತ್ಸವ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಸೋಮವಾರ ಹಾರೋಹಳ್ಳಿ-ಗುಜ್ಜೇಗೌಡನಪುರ ಗ್ರಾಮಕ್ಕೆ ಭೇಟಿ ನೀಡಿದ ಸಂಸದ ಪ್ರತಾಪ ಸಿಂಹನನ್ನು ದಲಿತರು ವಿರೋಧಿಸಿದ್ದಾರೆ. ಕಾರ್ಯಕ್ರಮಕ್ಕೆ ಹಾಜರಾಗದಂತೆ ಗ್ರಾಮಸ್ಥರು ಓಡಿಸಿದ ಘಟನೆ ನಡೆದಿದೆ.
ಹೌದು, ರಾಮಲಲ್ಲಾ ಕೆತ್ತನೆಗಾಗಿ ಕಲ್ಲು ನೀಡಿದ್ದ ಇದೇ ಗ್ರಾಮದಲ್ಲಿ ಸೋಮವಾರ ಶ್ರಿರಾಮೋತ್ಸವ ಪ್ರಯುಕ್ತ ಕಲ್ಲು ತೆಗೆದ ಈ ಗ್ರಾಮದ ಜಮೀನಿನಲ್ಲಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಹಾರೋಹಳ್ಳಿ-ಗುಜ್ಜೇಗೌಡನಪುರಕ್ಕೆ ತೆರಳಿದರು. ಆದರೆ ಸಂಸದರ ಆಗಮನವನ್ನು ಸಹಿಸದ ಗ್ರಾಮದ ದಲಿತ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲ ಹೈಡ್ರಾಮಾವೇ ನಡೆಯಿತು.

ದಲಿತರು ಮುಗಿಬೀಳಲು ಕಾರಣವೇನು?
ಈ ಗ್ರಾಮದಲ್ಲಿ ರಾಮಲಲ್ಲಾ ಕೆತ್ತನೆಗೆಂದು ಕಲ್ಲು ತೆಗೆದ ಸ್ಥಳಕ್ಕೆ ಭೂಮಿಪೂಜೆ ಏರ್ಪಡಿಸಿದ್ದ ದಲಿತ ಸಮುದಾಯದ 'ರಾಮಭಕ್ತರು' ಶಾಸಕ ಜಿ.ಟಿ.ದೇವೇಗೌಡ ಹಾಗೂ ಅಕ್ಕಪಕ್ಕದ ಗ್ರಾಮಗಳ ಹಲವು ಮುಖಂಡರು ಸೇರಿದಂತೆ ಈ ಭಾಗದ ಜೆಡಿಎಸ್ ಮುಖಂಡರನ್ನು ಆಹ್ವಾನಿಸಿದ್ದರು.
ಇದೇ ಕಾರ್ಯಕ್ರಮಕ್ಕೆ ಆಗಮಿಸಲು ಪ್ರತಾಪ್ ಸಿಂಹ ಬಂದಿದ್ದರು. ಆದರೆ ಅವರನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿ ಗ್ರಾಮದ ಮುಖಂಡ ಹಾಗೂ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಶ್ ಸಂಸದರು ಬರದಂತೆ ತಡೆ ಒಡ್ಡಿದರು. ನೀವೊಬ್ಬರು ದರಲಿ ವಿರೋಧಿ ನಾಯಕ ಎಂದು ಆರೊಪಿಸಿದರು. ನಿಮ್ಮಂತವರಿಗೆ ಈ ಕಾರ್ಯಕ್ರಮದಲ್ಲಿ ಅವಕಾಶ ಇಲ್ಲ ಎಂದು ದೂರಿದರು. ಇವರೊಂದಿಗೆ ದಲಿತ ನಾಯಕರು ಇದೇ ರೀತಿ ಆಗ್ರಹಿಸಿದಾಗ ಕೆಲ ಕಾಲ ಹೈಡ್ರಾಮಾ ನಡೆಯಿತು.
ಸಂಸದರಿಗೆ ರಕ್ಷಣೆ ಕೊಟ್ಟ ಪೊಲೀಸರು
ಈ ವೇಳೆ ಗ್ರಾಮಸ್ಥರು ಸಂಸದರ ವಿರುದ್ಧ ಘೋಷಣೆ ಕೂಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಸಂಸದರನ್ನು ಸುತ್ತುವರಿದು ರಕ್ಷಣೆ ನೀಡಿದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

ಹಾರೋಹಳ್ಳಿಯ ಗ್ರಾಮದಲ್ಲಿ ನೀವು ಒಡೆದು ಆಳುವ ನೀತಿ ಅನುಸರಿಸಬೇಡಿ ಎಂದು ಗ್ರಾಮಸ್ಥರು ದೂರಿದರು. ಎಲ್ಲ ರಾಜಕೀಯ ಪಕ್ಷಗಳ ನಾಯಕರು ಇಲ್ಲಿಗೆ ಬರುತ್ತಾರೆ. ಆದರೆ ನೀಮ್ಮ ಭೇಟಿ ಅಗತ್ಯವಿಲ್ಲ. ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಮಗೆ ಇಷ್ಟವಿಲ್ಲ ಎಂದು ಅವರೆಲ್ಲ ಹೇಳಿದರು.
ದಲಿತ ವಿರೋಧಿ ಆದ ನೀವು ರಾಜಕೀಯ ಕಾರಣದಿಂದ ಇದೀಗ ಗ್ರಾಮಕ್ಕೆ ಆಗಮಿಸಿದ್ದೀರಿ. ನಾವು ದಲಿತರು ಮತ್ತು ಇತರ ಸಮುದಾಯಗಳು ಒಟ್ಟಿಗೆ ಈ ಗ್ರಾಮದಲ್ಲಿ ವಾಸಿಸುತ್ತಿದ್ದು, ಇಲ್ಲಿನ ಶಾಂತಿ ಮತ್ತು ಸಾಮರಸ್ಯವನ್ನು ಕದಡಲು ಬಂದಿದ್ದೀರಿ ಎಂದು ದಲಿತ ನಾಯಕರು ಆರೋಪಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ದೇವೇಗೌಡ ಸಮಾರಂಭದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಇದಕ್ಕೆಲ್ಲ ಕಾಂಗ್ರೆಸ್ ಕಾರ್ಯಕರ್ತರು ಹೊಣೆ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು, ಕೆಲವು ಕಿಡಿಗೇಡಿಗಳು ಗಲಾಟೆ ಸೃಷ್ಟಿಸಿದ್ದಾರೆ. ಅವರು ಕಾಂಗ್ರೆಸ್ ಕಾರ್ಯಕರ್ತರು ಎಂದು ಆರೋಪಿಸಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನನ್ನನ್ನು ಸೋಲಿಸಲು ಸಾಧ್ಯವಿಲ್ಲ, ಅದಕ್ಕಾಗಿಯೇ ಅವರು ಇಂತಹ ನಾಟಕ ಮಾಡುತ್ತಿದ್ದಾರೆ ಎಂದು ದೂರಿದರು.












Click it and Unblock the Notifications