ಮೈಸೂರಿನಲ್ಲಿ ರೈಲ್ವೆ ಕಾಮಗಾರಿಯಿಂದ ಪಾರಂಪರಿಕತೆಗೆ ಧಕ್ಕೆ : ಅಧಿಕಾರಿಗಳ ಸ್ಪಷ್ಟನೆ
ಮೈಸೂರು, ಮೇ. 15 : ಮೈಸೂರು ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಗೆ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಈ ಕುರಿತಾಗಿ ಮೈಸೂರು ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣ ಗಾರ್ಗ್ ಸ್ಪಷ್ಟನೆ ನೀಡಿದ್ದು, ನಗರದ ರೈಲು ನಿಲ್ದಾಣ ಪಾರಂಪರಿಕ ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ ನವೀಕರಣ ಕಾಮಗಾರಿಯಷ್ಟೇ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಲ್ದಾಣದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಕೂಲಂಕಷವಾಗಿ ವಿವರಿಸಿದರು. ಮೈಸೂರು ಪಾರಂಪರಿಕ ತಜ್ಞರ ಸಮಿತಿಯವರು ರೈಲ್ವೆ ನಿಲ್ದಾಣದಲ್ಲಿ ಕೈಗೊಂಡಿರುವ ಕಾಮಗಾರಿ ಪಾರಂಪರಿಕ ಕಟ್ಟಡಗಳಿಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಅವರು ಎಲ್ಲಿ ಧಕ್ಕೆಯಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಕೋರಿದರು.
ರೈಲ್ವೆ ಇಲಾಖೆ ಪಾರಂಪರಿಕತೆಗೆ ತುಂಬಾ ಪ್ರಾಮುಖ್ಯತೆ ನೀಡುತ್ತಿದೆ. ನವೀಕರಣ ಕಾಮಗಾರಿ ಕೈಗೊಳ್ಳುವ ಮುನ್ನವೇ ಆಗಸ್ಟ್ ತಿಂಗಳಿನಲ್ಲಿ ನಗರ ಪಾಲಿಕೆ ಹಾಗೂ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಪತ್ರ ಬರೆದು ಕಾಮಗಾರಿಗಳ ಬಗ್ಗೆ ವಿವರವಾಗಿ ತಿಳಿಸಲಾಗಿತ್ತು. ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಕೋರಲಾಗಿದೆ. ಚುನಾವಣೆ ಸಮಯದಲ್ಲಿ ಅವರು ಬರಲಾಗಲಿಲ್ಲ. ನಮ್ಮ ಅಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕೆಲಸ ಮಾಡುವಂತೆ ಪ್ರವಾಸೋದ್ಯಮ ಸಚಿವರು ಸಹ ಕಾಮಗಾರಿ ವೀಕ್ಷಿಸಿ ಸೂಚಿಸಿದ್ದಾರೆ ಎಂದರು.

ರೈಲ್ವೆ ನಿಲ್ದಾಣದಲ್ಲಿ 15 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನವೀಕರಣ, ಪಾರ್ಕಿಂಗ್ , ಕಚೇರಿ ಸ್ಥಳಾಂತರ ಹೀಗೆಯೇ ಮುಂದುವರಿಯಲಿದೆ. ಕಟ್ಟಡ ಸೋರುತ್ತಿದೆ. ಮಳೆಗಾಲಕ್ಕೂ ಮುನ್ನವೇ ಕೆಲಸ ಮುಗಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಯದಿದ್ದರೆ ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ದೇಶದ 64 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಆಯ್ಕೆ ಮಾಡಿದ ದಿನದಿಂದಲೂ ನಾವು ಪಾರಂಪರಿಕತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ಇದಕ್ಕಾಗಿ ಪಾರಂಪರಿಕ ಸಮಿತಿಯೊಂದನ್ನು ರಚಿಸಿ ಅದಕ್ಕೆ ಸಿಬ್ಬಂದಿಯನ್ನೂ ನಿಯೋಜಿಸಿದ್ದೇವೆ. ಯಾವುದೇ ಹೊಸ ಸೇರ್ಪಡೆಯಾಗಬೇಕಾದರೂ ಅದಕ್ಕೆ ಪಾರಂಪರಿಕತೆಯ ಲೇಪ ನೀಡಲಾಗಿದೆ. ಹಾಗಾಗಿ, ಕಾಮಗಾರಿಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಮಳೆಗಾಲ ಆರಂಭವಾಗುವುದರೊಳಗೆ ನಮ್ಮ ಕಾಮಗಾರಿಗಳನ್ನು ಮುಗಿಸುತ್ತೇವೆ ಎಂದು ಹೇಳಿದರು.












Click it and Unblock the Notifications