50 ಸಾವಿರ ಕುಟುಂಬಗಳಿಗೆ ನಿವೇಶನ ಕೊಡುತ್ತೇವೆ: ಹೊಸಹಳ್ಳಿಯ ಗಿರಿಜನರಿಗೆ ಆರ್.ಅಶೋಕ್ ಭರವಸೆ
ಮೈಸೂರು, ನವೆಂಬರ್, 21: ಎಚ್‌ಡಿ ಕೋಟೆ ತಾಲೂಕು ಹೊಸಹಳ್ಳಿ ಗ್ರಾಮದ ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರದ ವಸತಿ ನಿಲಯದಲ್ಲಿ ಸಚಿವ ಆರ್. ಅಶೋಕ್ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಕಂದಾಯ ಸಚಿವರು ಆದಿವಾಸಿ ಗಿರಿಜನ ಮುಖಂಡರೊಂದಿಗೆ ಸಂವಾದ ನಡೆಸಿದರು. "ರಾಜ್ಯದಲ್ಲಿರುವ ಹಾಡಿ, ಲಂಬಾಣಿ ತಂಡ, ಹಟ್ಟಿಗಳಲ್ಲಿ ವಾಸ ಮಾಡುತ್ತಿರುವ 50 ಸಾವಿರ ಕುಟುಂಬಗಳನ್ನು ಗುರುತಿಸಿ ಅವರಿಗೆ ನಿವೇಶನ ಕೊಡುವ ಕೆಲಸವನ್ನು ಮಾಡುತ್ತಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ನಿವೇಶನ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ಕೊಡಲಿದ್ದಾರೆ'' ಎಂದರು.
ಹೊಸಹಳ್ಳಿ ಗ್ರಾಮ ವಾಸ್ತವ್ಯದಿಂದ ತೃಪ್ತಿ
ತಾಲೂಕಿನ ಗಡಿ ಭಾಗದ ವಾಸ್ತವ್ಯವು ತಮಗೆ ಹಾಡಿ ಜನರ ಜೀವನ ಪದ್ಧತಿ ತಿಳಿದುಕೊಳ್ಳಲು ಉಪಯೋಗವಾಗಿದೆ. ದೇಶದ ಗಡಿಯಲ್ಲಿ ಸೈನಿಕರು ಹೋರಾಡಿದರೆ, ಗಿರಿಜನರು ದಿನ ನಿತ್ಯ ಕಾಡು ಪ್ರಾಣಿಗಳೊಂದಿಗೆ ಹೋರಾಡಿ ಜೀವನ ಮಾಡುತ್ತಿದ್ದಾರೆ. ಆದಿವಾಸಿ ಗಿರಿಜನರಿಗೆ ಮನೆ ಮತ್ತು ನಿವೇಶನ ಇದ್ದು, ಪೌತಿ ಖಾತೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಲು ಅವರಿಗೆ ಸೂಚಿಸಿದ್ದೇನೆ. ಹಾಗೂ ತಮಗೆ 12ನೇ ಗ್ರಾಮ ವಾಸ್ತವ್ಯ ತೃಪ್ತಿ ತಂದಿದೆ ಎಂದರು.
ಸಾಮೂಹಿಕ ಹಕ್ಕು ಕೊಡುವಂತೆ ಆಗ್ರಹ
ಆದಿವಾಸಿ ಮುಖಂಡ ವಿಜಯಕುಮಾರ್ ಮಾತನಾಡಿ, ''ರಾಜ್ಯದಲ್ಲಿ 15 ಪರಿಶಿಷ್ಟ ಪಂಗಡದ ಶಾಸಕರು ಇದ್ದಾರೆ. ಆದರೆ ಇವರಲ್ಲಿ ಒಬ್ಬರೂ ಆದಿವಾಸಿ ಗಿರಿಜನರಿಲ್ಲ. ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ಶೇಕಡಾ 3ರಿಂದ 7ಕ್ಕೆ ಹೆಚ್ಚಿಸಿದೆ. ಆದರೂ, ಮೂಲ ಆದಿವಾಸಿ ಗಿರಿಜನರಿಗೆ ಇದರಿಂದ ಯಾವುದೇ ಅನುಕೂಲವಾಗಿಲ್ಲ'' ಎಂದರು. ನಂತರ ಗಿರಿಜನ ಮುಖಂಡ ಕಾಳಕಲ್ಕರ್ ಮಾತನಾಡಿ, ''ಪ್ರೊ. ಮುಜಾರ್ ಅಸಾದಿ ವರದಿ ಜಾರಿ ಆಗಬೇಕು. ಆದಿವಾಸಿ ಗಿರಿಜನರಿಗೆ ಸಾಮೂಹಿಕ ಹಕ್ಕು ಕೊಡಬೇಕು. ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಬಾಧಿತರಾಗಿ ಹೊರ ಬಂದಿರುವ ಆದಿವಾಸಿ ಕುಟುಂಬಗಳಿಗೆ ಅರಣ್ಯ ಹಕ್ಕುಪತ್ರ ಕೊಡಬೇಕು'' ಎಂದು ಆಗ್ರಹಿಸಿದರು.

ಶೀಘ್ರದಲ್ಲೇ ಪುನರ್‌ವಸತಿ ಸೌಲಭ್ಯ
ಗ್ರಾಮೀಣ ಭಾಗದ ಜನರು ಇದ್ದಲ್ಲಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಬೇಕು. ಇದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಮೈಸೂರಿನಲ್ಲಿ ತಿಳಿಸಿದರು. ಹಾಗೆಯೇ ಎಚ್‌ಡಿ ಕೋಟೆ ತಾಲೂಕಿನ ಜನರಿಗೆ ಶೀಘ್ರದಲ್ಲೇ ಪುನರ್‌ವಸತಿ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು. ಎಚ್.ಡಿ ಕೋಟೆ ತಾಲೂಕಿನ ಭೀಮನ ಕೊಲ್ಲಿಯ ದೇವಸ್ಥಾನದ ಅವಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದರು. ಗ್ರಾಮವಾಸ್ತವ್ಯ ಎನ್ನುವುದು ಪಾಠಶಾಲೆ ಇದ್ದ ಹಾಗೆ. ಗ್ರಾಮ ವಾಸ್ತವ್ಯದಿಂದ ಹಳ್ಳಿಯ ಜನರ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದರು.
ಪ್ರಾಣಿಗಳು ಮತ್ತು ಮನುಷ್ಯನ ನಡುವೆ ಸಂಘರ್ಷ
ಎಚ್.ಡಿ ಕೋಟೆ ತಾಲೂಕು ಅರಣ್ಯ ಪ್ರದೇಶದ ಅಂಚಿನಲ್ಲಿದ್ದು, ಇಲ್ಲಿ ಪ್ರಾಣಿಗಳ ಮತ್ತು ಮನುಷ್ಯನ ನಡುವೆ ಸಂಘರ್ಷ ಇದೆ. ಇಂತಹ ಸಮಸ್ಯೆಗಳಿದ್ದರೂ ಜನರು ಇಲ್ಲಿನ ಪರಿಸರಕ್ಕೆ ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ ಹಾಡಿಗಳು ಹೆಚ್ಚಾಗಿದ್ದು, ಗಿರಿಜನ ಹೆಚ್ಚಾಗಿ ವಾಸಿಸುತ್ತಾರೆ. ಹಾಡಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಿ ಗ್ರಾಮಗಳಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಸ್ಥಳದಲ್ಲಿ ವಾಸಿಸುವ ಜನರಿಗೆ ಮಾಸಾಶನ, ಪೌತಿ ಖಾತೆ ಬದಲಾವಣೆ, ಸೌಲಭ್ಯಗಳ ವಿತರಣೆ ಹಾಗೂ ಹಕ್ಕು ಪತ್ರಗಳ ವಿತರಣೆ ಮಾಡಲಾಗುವುದು. ಪೌತಿ ಖಾತೆ ಮಾಡುವಾಗ ಹೆಣ್ಣು ಮಕ್ಕಳ ಸಹಿ ಪಡೆಯುವುದು ಕಡ್ಡಾಯವಾಗಿದೆ. ಏಕೆಂದರೆ ಹೆಣ್ಣು ಮಕ್ಕಳಿಗೂ ತಂದೆ ಆಸ್ತಿಯಲ್ಲಿ ಸಮಾನ ಹಕ್ಕಿರುತ್ತದೆ ಎಂದು ತಿಳಿಸಿದ್ದರು.

ಬಡವರು ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದರೆ, ಅಂತಹವರಿಗೆ 94 ಸಿ ಅಡಿಯಲ್ಲಿ ಆ ಜಾಗವನ್ನು ಖಾತೆ ಮಾಡಿ ಕೊಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನನ್ನು ಉಳಿಮೆ ಮಾಡುತ್ತಿದ್ದರೆ, ಈ ಹಿಂದೆ ಕ್ರಿಮಿನಲ್ ಪ್ರಕರಣದ ದಾಖಲಿಸಲಾಗುತ್ತಿತ್ತು. ಇದೀಗ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸದಂತೆ ಕಾನೂನು ತಿದ್ದುಪಡಿ ಮಾಡಲಾಗಿದೆ. ಕೋಳಿ ಸಾಕಾಣಿಕೆಗೆ ಈ ಹಿಂದೆ ಭೂ ಪರಿವರ್ತನೆ ಮಾಡಿಸಬೇಕಿತ್ತು. ಆದರೆ ಕಾನೂನು ತಿದ್ದುಪಡಿ ಮಾಡಿ ಕೋಳಿ ಸಾಕಾಣಿಕೆಯನ್ನು ಕೃಷಿ ವ್ಯಾಪ್ತಿಗೆ ತರಲಾಗಿದೆ. ಭೂಮಿಯನ್ನು ಖಾತೆ ಮಾಡಿಸಲು ಇದ್ದ 30 ದಿನಗಳ ಅವಧಿಯನ್ನು ಏಳು ದಿನಗಳಿಗೆ ಇಳಿಸಲಾಗಿದೆ.
ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಸರ್ಕಾರ ನೀಡಿರುವ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಭೂ ಪರಿವರ್ತನೆ ಮಾಡಿಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮನೆ ನಿರ್ಮಿಸಿಕೊಳ್ಳಲು ಬ್ಯಾಂಕ್ ಸಾಲ ಪಡೆಯುವುದಕ್ಕಾಗಿ ಭೂ ಪರಿವರ್ತನೆ ಮಾಡಲು ಏಳು ದಿನಗಳೊಳಗೆ ಅವಕಾಶ ಕಲ್ಪಿಸಲಾಗಿದೆ. ಹಲೋ ಕಂದಾಯ ಸಚಿವರೇ ಸಹಾಯ ವಾಣಿಯ ಮೂಲಕ 72 ಗಂಟೆಗಳೊಳಗೆ ಹಿರಿಯ ನಾಗರೀಕರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.












Click it and Unblock the Notifications