ಮೈಸೂರು ಅರಮನೆ ಮುಂದೆ ರಂಗೋಲಿಯಲ್ಲಿ ಅರಳಿದ ಅಪ್ಪು, ಪ್ರತಿಕ್ರಿಯೆಗಳು ಹೇಗಿವೆ ಗೊತ್ತಾ?
ಈ ಹಸರು ಚಿಕ್ಕ ಮಗುವಿನಿಂದ ಹಿಡಿದು ಅಜ್ಜಂದಿರವರ ಮನಸ್ಸಲ್ಲಿ ಅಚ್ಚಳಿಯದೇ ಅಚ್ಚಹಸಿರಿನ ಗಿಡ, ಮರದಂತೆ ನೆಲೆಸಿಬಿಟ್ಟಿದ್ದಾರೆ. ಈ ಮೂಲಕ ಅವರು ಅಜರಾಮರಾಗಿಬಿಟ್ಟಿದ್ದಾರೆ. ಆ ಅದ್ಭುತ ಹೆಸರೇ ಅಪ್ಪು (ಪುನೀತ್ ರಾಜ್‌ಕುಮಾರ್). ಇನ್ನು ಇಂದು (ಮಾರ್ಚ್ 17) ಪುನೀತ್ ರಾಜ್‌ಕುಮಾರ್ ಅವರ 49ನೇ ವರ್ಷದ ಹುಟ್ಟುಹಬ್ಬವನ್ನು ರಾಜ್ಯದೆಲ್ಲೆಡೆ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಹಾಗೆಯೇ ಇಲ್ಲೊಬ್ಬ ಅಭಿಮಾನಿಯೊಬ್ಬರು ಅವರ ಚಿತ್ರ ಬಿಡಿಸುವ ಮೂಲಕ ವಿಶೇಷವಾಗಿ ಶುಭಕೋರಿದ್ದಾರೆ.
ಮೈಸೂರು ಅರಮನೆ ಮುಂದೆ ರಂಗೋಲಿಯಲ್ಲಿ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಚಿತ್ರವನ್ನು ಅಭಿಮಾನಿಯೊಬ್ಬರು ಅದ್ಭುತವಾಗಿ ಬಿಡಿಸಿದ್ದು, ಇದರ ಮೇಲೆ ಪಕ್ಷಿಗಳು ಹಾರಾಡುವ ಅದ್ಭುತ ದೃಶ್ಯವಂತೂ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಈ ವಿಡಿಯೋಗೆ "ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ" ಎನ್ನುವ ಹಾಡನ್ನು ಹಾಕಿದ್ದು, ಇದಕ್ಕೆ ಪ್ರತಿಕ್ರಿಯೆಗಳ ಸರಮಾಲೆಯೇ ಹರಿದುಬರುತ್ತಿದೆ.

ಈ ದೃಶ್ಯವನ್ನು ಗಮನಿಸಿದರೆ ರಾಜಕುಮಾರ್ ಸಿನಿಮಾದಲ್ಲಿ ಪುನೀತ್ ಹೆಗಲ ಮೇಲೆ ಪಾರಿವಾಳ ಹಾರಿಬಂದು ಕುಳಿತಂತಿದೆ. ಈ ಬಗ್ಗೆ ಮಾತನಾಡಿದ ಚಿತ್ರ ಬಿಡಿಸಿದ ಕಲೆಗಾರ ಮಾತನಾಡಿದ್ದು, ನನ್ನ ಹೆಸರು ಕೂಡ ಪುನೀತ್ ಅಂತಾ, ಇವತ್ತು ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಹಿನ್ನೆಲೆ ನಾನು, ನಮ್ಮ ಮನೆಯವರು ಈ ಚಿತ್ರವನ್ನು ಅಪ್ಪು ಅವರಿಗಾಗಿ ಬಿಡಿಸಿದ್ದೇವೆ ಎಂದು ಹೇಳಿದ್ದಾರೆ.
ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಭಕೋರಿದ್ದಾರೆ. ಈ ಸಂಬಂಧ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಪ್ಪು ಫೋಟೋದ ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ಅವರಿಗೆ ವಿನಮ್ರ ನಮನಗಳು. ಒಬ್ಬ ಅದ್ಭುತ ಕಲಾವಿದ, ಸಿನಿಮಾದಲ್ಲಿನ ಅವರ ಕೆಲಸ ಮತ್ತು ಜನರ ಕಲ್ಯಾಣಕ್ಕಾಗಿ ಅವರು ನೀಡಿರುವ ಕೊಡುಗೆ ಇಂದಿಗೂ ಅನೇಕರಿಗೆ ಸ್ಫೂರ್ತಿ ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ.
ಬರೀ ರಾಹುಲ್ ಗಾಂಧಿ ಅಷ್ಟೇ ಅಲ್ಲದೆ ರಾಜ್ಯ, ದೇಶ ವಿದೇಶಗಳಿಂದಲೂ ಅಪ್ಪು ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. ಅಪ್ಪು ಅವರಿಗೆ ರಾಜ್ಯ ಅಷ್ಟೇ ಅಲ್ಲದೆ, ದೇಶ, ವಿದೇಶಗಳಲ್ಲೂ ಬಹುದೊಡ್ಡ ಅಭಿಮಾನಿ ಬಳಗ ಇದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಪುಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಭಿಮಾನಿಗಳಿಂದ ಸೆಲೆಬ್ರಿಟಿಗಳವರೆಗೂ ಎಲ್ಲರೂ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಪ್ಪು ಫೋಟೋ ಹಾಕಿ ವಿಶೇಷವಾಗಿ ಸಂಭ್ರಮಿಸುತ್ತಿದ್ದಾರೆ. ಇನ್ನೂ ಕೆಲವರು ಅಪ್ಪು ಸಮಾಧಿ ಬಳಿ ಹೋಗಿ ಪೂಜೆ ಸಲ್ಲಿಸಿದ್ದಾರೆ.












Click it and Unblock the Notifications