ಬಾಲರಾಮನ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್ ಕುಟುಂಬದವರಿಗೆ ಸಂಸದ ಪ್ರತಾಪ್ ಸಿಂಹ ಸನ್ಮಾನ
ಮೈಸೂರು: ದೇಶದ ಎಲ್ಲೆಡೆ ರಾಮೋತ್ಸವದ ಸಂಭ್ರಮ ಮನೆ ಮಾಡಿದೆ. ಅಯೋಧ್ಯೆಯಲ್ಲಿ ಪ್ರತಿಷ್ಟಾಪನೆ ಆಗುತ್ತಿರುವ ಬಾಲರಾಮನ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು.
ಬಸವೇಶ್ವರ ವೃತ್ತದ ಬಳಿ ಇರುವ ಶಿಲ್ಪಿ ಅರುಣ್ ಯೋಗಿರಾಜ್ ಅವರ ನಿವಾಸಕ್ಕೆ ತೆರಳಿದ ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ ಹಾಗೂ ಬಿಜೆಪಿ ಮುಖಂಡರು, ಅರುಣ್ ಯೋಗಿರಾಜ್ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಅರುಣ್ ಯೋಗಿರಾಜ್ ಅವರ ತಾಯಿ ಸರಸ್ವತಿ, ಪತ್ನಿ ವಿಜೇತ, ಅಣ್ಣ ಸೂರ್ಯಪ್ರಕಾಶ್ ಅವರಿಗೆ ಹೂಗುಚ್ಛ ನೀಡಿ ಗೌರವಿಸಿದರು.

ನಂತರ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಬಾಲರಾಮ ಪ್ರತಿಷ್ಠಾಪನೆ ಕುರಿತು ಶಂಕರಾಚಾರ್ಯ ಮಠದ ಸ್ವಾಮೀಜಿ ಸಲ್ಲದ ಮಾತನ್ನು ಆಡಬಾರದು. ಅವರ ಹಿನ್ನೆಲೆ, ರಾಜಕೀಯ ನಿಲುವು ನಮಗೆ ಗೊತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಹೋರಾಡಿದ ಕೆಲ ಸ್ವಾಮೀಜಿಗಳು ಇದರಲ್ಲಿದ್ದಾರೆ ಎಂದು ಆರೋಪಿಸಿದರು.
ಶಂಕರಾಚಾರ್ಯರು ಕೇರಳದ ಕಾಲಡಿಯಲ್ಲಿ ಹುಟ್ಟಿ ಬದರೀನಾಥ, ಕೇದಾರನಾಥ ಸೇರಿದಂತೆ ನಾಲ್ಕು ಧಾಮಗಳನ್ನು ಸ್ಥಾಪಿಸಿದರು. ಇಂತಹ ದೊಡ್ಡ ಹಿನ್ನೆಲೆ ಹೊಂದಿರುವ ಮಠದ ಸ್ವಾಮೀಜಿಗಳಿಂದ ಈ ರೀತಿ ಮಾತುಗಳು ಬರಬಾರದು ಎಂದರು.
ನಮ್ಮ ದೇವಸ್ಥಾನಗಳು ಸಿಮೆಂಟ್ ಕಟ್ಟಡ ಕಟ್ಟಿನಿಲ್ಲಿಸುವ ರೀತಿಯಲ್ಲ, ದೇವಸ್ಥಾನಗಳಲ್ಲಿ ವಿಗ್ರಹಗಳನ್ನು ಸ್ಥಾಪಿಸಿ, ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಹತ್ತಾರು ಧಾರ್ಮಿಕ ಕೈಂಕರ್ಯ ಗಳನ್ನು ನೆರವೇರಿಸಲಾಗುವುದು. ವರ್ಷಾನುಗಟ್ಟಲೇ ಕೆಲಸ ನಡೆಯಲಿದೆ. ದೇವಸ್ಥಾನ ನಿರ್ಮಾಣವಾಗುವುದರ ಕುರಿತು ಅರಿವಿರಬೇಕು ಎಂದರು.
ಕೆ.ಎನ್.ರಾಜಣ್ಣ ವಾಲ್ಮೀಕಿ ಸಮಾಜದವರು, ರಾಮನ ಬಗ್ಗೆ ಗೌರವ ಭಾವವನ್ನು ಇಟ್ಟುಕೊಂಡಿರುತ್ತಾರೆ ಎಂದು ಭಾವಿಸಿದ್ದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಓಲೈಸಿ ಉಪ ಮುಖ್ಯಮಂತ್ರಿ ಸ್ಥಾನವನ್ನು ಪಡೆಯಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications