ಬೇಬಿ ಬೆಟ್ಟ ನಮ್ಮ ಆಸ್ತಿ, ಟ್ರಯಲ್ ಬ್ಲಾಸ್ಟ್ ಮಾಡುವಾಗ ನಮ್ಮ ಅನುಮತಿ ಪಡೆಯಬೇಕಿತ್ತು: ಪ್ರಮೋದಾದೇವಿ
ಮೈಸೂರು, ಜುಲೈ 26: ''ಸರಕಾರಗಳು ರಾಜ ಮನೆತನಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ನಾವೇನೂ ಯಾರದೋ ಆಸ್ತಿ ಕಬಳಿಸಲು ಹೊರಟಿರುವಂತೆ ಯೋಚಿಸುತ್ತಿವೆ. ಇದು ನಮಗೆ ಕೊಡುತ್ತಿರುವ ಕಿರುಕುಳ. ದೇಶದ ಬೇರೆ ಯಾವ ರಾಜಮನೆತನಗಳಿಗೂ ಆಸ್ತಿಯ ವಿಚಾರದಲ್ಲಿ ಅಲ್ಲಿನ ಸರಕಾರಗಳು ಇಷ್ಟು ತೊಂದರೆ ಕೊಟ್ಟಿಲ್ಲ'' ಎಂದು ಮೈಸೂರು ಅರಸರ ಪ್ರಮೋದಾದೇವಿ ಒಡೆಯರ್ ಬೇಸರ ವ್ಯಕ್ತಪಡಿಸಿದರು.
ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಮಂಡ್ಯ ಜಿಲ್ಲಾಡಳಿತ ಬೇಬಿ ಬೆಟ್ಟದಲ್ಲೇ ಟ್ರಯಲ್ ಮಾಡಬೇಕು ಅಂತೇನೂ ಇಲ್ಲ. ನಮ್ಮ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವಾಗ ಕನಿಷ್ಠ ನಮ್ಮ ಅನುಮತಿ ಪಡೆಯಬೇಕಿತ್ತು. ಆದರೂ ಯಾಕಿಷ್ಟು ನಮಗೆ ಹಿಂಸೆ ಕೊಡುತ್ತಾರೆ ಎಂಬುದು ಮಾತ್ರ ಗೊತ್ತಿಲ್ಲ. 10 ರೂಪಾಯಿ ಬೆಲೆ ಬಾಳುವುದನ್ನು 10 ಪೈಸೆಗೆ ತೆಗೆದು ಕೊಳ್ಳುವ ಮನಃಸ್ಥಿತಿ ಸರಕಾರ ಪ್ರದರ್ಶಿಸುತ್ತಿದೆ. ಸರಕಾರಕ್ಕೆ ನಾನು ಧನ್ಯವಾದ ಹೇಳಬೇಕು'' ಎಂದು ಕಿಡಿಕಾರಿದ್ದಾರೆ.
''ಸರಕಾರದ ನಡೆಯಿಂದ ನನ್ನ ಕಾನೂನು ಜ್ಞಾನ ಹೆಚ್ಚಾಯಿತು. ಬೇಬಿ ಬೆಟ್ಟದ ವಿಚಾರದಲ್ಲಿ ಈಗ ಕಾನೂನು ತಜ್ಞರ ಜೊತೆ ಚರ್ಚಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ. ಮೈಸೂರಿನ ಕುರುಬಾರಹಳ್ಳಿ ಬಿ ಖರಾಬ್ ಜಾಗದ ವಿವಾದದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ನಮಗೆ ಜಯ ಸಿಕ್ಕಿದೆ. ಆ ತೀರ್ಪು ಈ ಬೆಟ್ಟದ ಜಾಗಕ್ಕೂ ಅನ್ವಯವಾಗಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ
ರಾಜ್ಯ ವಿಲೀನ ಸಂದರ್ಭದಲ್ಲಿ ಭಾರತ ಸರಕಾರ ಮತ್ತು ರಾಜವಂಶದ ನಡುವೆ ಒಪ್ಪಂದ ಏರ್ಪಟ್ಟಿತ್ತು. ರಾಜ ಮನೆತನಕ್ಕೆ ಒಂದಷ್ಟು ಖಾಸಗಿ ಆಸ್ತಿಯನ್ನು ಪಟ್ಟಿ ಮಾಡಿ ಇನ್ನುಳಿದ ಎಲ್ಲಾ ಆಸ್ತಿಗಳನ್ನು ದೇಶದೊಂದಿಗೆ ವಿಲೀನ ಮಾಡಿದರು. ಈ ಸಂಬಂಧ 1950ರಲ್ಲಿ ಕೇಂದ್ರ ಸರಕಾರ ಮತ್ತು ರಾಜವಂಶಸ್ಥ ನಡುವೆ ಒಪ್ಪಂದ ಏರ್ಪಟ್ಟಿದೆ. ಇದರ ಮುಂದುವರಿದ ಭಾಗವಾಗಿ 1951ರಲ್ಲಿ ಖಾಸಗಿ ಆಸ್ತಿಗಳ ಪಟ್ಟಿಯನ್ನು ಸರಕಾರಿ ಆದೇಶದ ಮೂಲಕ ಖಚಿತಪಡಿಸಲಾಗಿದೆ. ಯಾವುದು ನಮ್ಮ ಖಾಸಗಿ ಆಸ್ತಿ, ಯಾವುದು ಸರಕಾರಿ ಆಸ್ತಿ ಎಂಬುದು ಅಧಿಕಾರ ನಡೆಸುವ ಎಲ್ಲರಿಗೂ ಗೊತ್ತಿದೆ. ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಹೇಳಿದರು.

ಖಾಸಗಿ ಆಸ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ಯಾಕೆ?
''ಬೇಬಿ ಬೆಟ್ಟ ಹಾಗೂ ಸುತ್ತಮುತ್ತಲ 1,623 ಎಕರೆ ನಮ್ಮ ಖಾಸಗಿ ಆಸ್ತಿ. ಈ ಆಸ್ತಿಯನ್ನು ಸರಕಾರಿ ಅಧಿಕಾರಿಗಳು ಬಿ-ಖರಾಬ್ ಜಮೀನು ಎಂದು ಘೋಷಣೆ ಮಾಡಿದ್ದಾರೆ. ಇದರ ಪರಿಣಾಮ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿದೆ. ಆದರೆ, ದಾಖಲೆಗಳಲ್ಲಿ ಅದು ನಮಗೆ ಸೇರಿದ ಭೂಮಿಯಾಗಿದೆ. ಇಂತಹ ಸ್ಥಳದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಲು ಹೊರಟಿದ್ದಾರೆ. ಆ ಜಾಗ ನಮ್ಮ ವ್ಯಾಪ್ತಿಗೆ ಬಂದರೆ ನಾನು ಅಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವುದಿಲ್ಲ'' ಎಂದು ಹೇಳಿದ್ದಾರೆ.












Click it and Unblock the Notifications