ಮೈಸೂರು: ದಾಖಲೆ ಇಲ್ಲದೇ ವಾಹನದಲ್ಲಿ ಸಾಗಿಸುತ್ತಿದ್ದ 23 ಲಕ್ಷ ರು ವಶ
ಮೈಸೂರು, ಮಾರ್ಚ್ 27 : ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಇಬ್ಬರನ್ನು ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾರ್ವತಿಪುರದ ಚೆಕ್ ಪೋಸ್ಟ್ ಬಳಿ ಬಂಧಿಸಿದ್ದಾರೆ.
ಚಾಲಕ ಕಾರ್ತಿಕ್ ಹಾಗೂ ಕಾರಿನಲ್ಲಿದ್ದ ಇನ್ನೋರ್ವ ಮಣಿಕಂಠ ಅವರನ್ನು ಭಾನುವಾರ ಬಂಧಿಸಿರುವ ಪೊಲೀಸರು 23,47,970 ರು.ಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಂಜನಗೂಡು ಉಪ ಚುನಾವಣೆ ಹಿನ್ನೆಲೆಯಲ್ಲಿ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾರ್ವತಿಪುರದಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರತ ಅಧಿಕಾರಿಗಳು ಗುಂಡ್ಲು ಪೇಟೆ ಕಡೆಯಿಂದ ಬರುತ್ತಿದ್ದ ಮಹಿಂದ್ರಾ ಕಾರನ್ನು ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ ಎಂದು ಸಹಾಯಕ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಕಾರಿನ ಚಾಲಕ ಕಾರ್ತಿಕ್ ಹಾಗೂ ಕಾರಿನಲ್ಲಿದ್ದ ಇನ್ನೋರ್ವ ಮಣಿಕಂಠ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ತಾವು ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಹೆಚ್.ಡಿ. ಕೋಟೆ ಕಡೆಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.
ಎ.ಎಸ್.ಐ. ಪಾರ್ಥ, ಮುಖ್ಯಪೇದೆ ಜಯಣ್ಣ, ಹೋಮ್ ಗಾರ್ಡ್ ಸಂತೋಷ್ ಕುಮಾರ್, ಸ್ಥಳೀಯ ಗ್ರಾಮ ಪಂಚಾಯಿತಿ ನೌಕರ ಪುಟ್ಟ ಅಂಕಶೆಟ್ಟಿ ಅವರು ಹಣ ಪತ್ತೆ ಹಚ್ಚಿದ್ದಾರೆ.












Click it and Unblock the Notifications