ಮೈಸೂರಿನಲ್ಲಿ ಮಹಿಳೆಯರಿಗಾಗಿ ಪಿಂಕ್ ಟಾಯ್ಲೆಟ್: ಏನಿದು ಗುಲಾಬಿ ಶೌಚಾಲಯ..?
ಮೈಸೂರು, ಡಿಸೆಂಬರ್ 12: ಜನನಿಬಿಡ ಪ್ರದೇಶ, ಮಾರುಕಟ್ಟೆ ಹಾಗೂ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಸೇರುವ ಸ್ಥಳಗಳಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಗುಲಾಬಿ ಶೌಚಾಲಯಗಳನ್ನು ತೆರೆಯಲು ರಾಜ್ಯ ಸರಕಾರ ತೀರ್ಮಾನಿಸಿದೆ. ಇದರ ಭಾಗವಾಗಿ ಮೈಸೂರಿನಲ್ಲಿ ಮೊದಲ ಪಿಂಕ್ ಟಾಯ್ಲೆಟ್ ನಿರ್ಮಾಣ ಮಾಡಲಾಗುತ್ತಿದೆ.
ನಗರದ ಹೃದಯ ಭಾಗದಲ್ಲಿರುವ ದೇವರಾಜ ಅರಸು ರಸ್ತೆ ಬದಿಯಲ್ಲಿ ಮಹಿಳೆಯರ ಬಳಕೆಗೆ ಗುಲಾಬಿ ಶೌಚಾಲಯವನ್ನು ನಗರ ಪಾಲಿಕೆ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ ನಗರದ ವಿವಿಧೆಡೆ ಗುಲಾಬಿ ಶೌಚಾಲಯ ತಲೆ ಎತ್ತಲಿವೆ.
ಏನಿದು ಪಿಂಕ್ ಟಾಯ್ಲೆಟ್..?
ಪಿಂಕ್ ಟಾಯ್ಲೆಟ್ ಕೇವಲ ಶೌಚಗೃಹವಾಗಿರದೆ ಮಕ್ಕಳಿಗೆ ಹಾಲುಣಿಸುವ ಕೇಂದ್ರವೂ ಆಗಿದ್ದು, ಸುಸಜ್ಜಿತ ವ್ಯವಸ್ಥೆ ಒಳಗೊಂಡಿರುತ್ತದೆ. ದೂರದೂರಿನಿಂದ ಮಕ್ಕಳೊಂದಿಗೆ ಬರುವವರು ಇಲ್ಲಿ ಹಾಲುಣಿಸಬಹುದು. ಅಲ್ಲದೇ ಇಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಇಡಲಾಗಿರುತ್ತದೆ. ಜೊತೆಗೆ ಬಟ್ಟೆ ಬದಲಾಯಿಸಿಕೊಳ್ಳಲು ಡ್ರೆಸಿಂಗ್ ರೂಂ ಕೂಡ ಇರುತ್ತದೆ. ಮಹಿಳೆಯರಿಗಾಗಿಯೇ ಈ ಟಾಯ್ಲೆಟ್‌ಗಳನ್ನು ವಿಶೇಷವಾಗಿ ನಿರ್ಮಾಣ ಮಾಡಲಾಗುತ್ತಿದೆ.

ಗುಲಾಬಿ ಶೌಚಾಲಯ ಈಗಾಗಲೇ ನೋಯ್ಡಾ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಯಶಸ್ವಿಯಾಗಿವೆ. ಈ ನಿಟ್ಟಿನಲ್ಲಿ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಪಿಂಕ್ ಟಾಯ್ಲೆಟ್ ಕಾಮಗಾರಿ ಶುರುವಾಗಿದ್ದು, ಜನವರಿ ಒಳಗೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ದೇವರಾಜ ಅರಸು ರಸ್ತೆಯು ಸದಾ ಜನದಟ್ಟಣೆ ಇರುವಂತಹ ಜಾಗ, ವಾಣಿಜ್ಯ ಸಂಕೀರ್ಣಗಳು, ಬಟ್ಟೆ, ಆಹಾರ, ಬೇಕರಿ, ಚಿನ್ನಾಭರಣ, ಬ್ಯಾಂಕ್, ಎಟಿಎಂ, ಶೂ, ಮೊಬೈಲ್ ಫೋನ್ ಸೇರಿದಂತೆ ಸಾಕಷ್ಟು ಅಂಗಡಿ-ಮಳಿಗೆಗಳು ಇಲ್ಲಿವೆ. ನಿತ್ಯ ಸಾವಿರಾರು ಜನ ಈ ರಸ್ತೆಯಲ್ಲಿ ಓಡಾಡುತ್ತಾರೆ. ಮದುವೆ, ಮುಂಜಿಯಿಂದ ಹಿಡಿದು ನಾನಾ ಶುಭ ಸಮಾರಂಭಗಳಿಗೆ ಸಾರ್ವಜನಿಕರು ಇಲ್ಲಿಯೇ ಶಾಪಿಂಗ್ ಮಾಡುತ್ತಾರೆ. ಹಾಗಾಗಿ ಮಹಿಳೆಯರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಪಿಂಕ್ ಶೌಚಾಲಯ ನಿರ್ಮಿಸಲಾಗುತ್ತಿದೆ.
"ನಗರದ ಚಾಮುಂಡಿ ಗೆಸ್ಟ್ ಹೌಸ್ ಹಿಂಭಾಗ ಅರಸು ರಸ್ತೆ ಬಳಿ ಪಿಂಕ್ ಟಾಯ್ಲೆಟ್ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಮುಕ್ತಾಯವಾಗಲಿದೆ. ಸಾರ್ವಜನಿಕ ಶೌಚಾಲಯ ನಿರ್ಮಿಸುವ ಆಲೋಚನೆ ಇದ್ದು, ಜಾಗ ಹುಡುಕಲಾಗುತ್ತಿದೆ" ಎಂದು ಮೇಯರ್ ಶಿವಕುಮಾರ್ ತಿಳಿಸಿದ್ದಾರೆ.

"ದೇವರಾಜ ಅರಸು ರಸ್ತೆ ಬಳಿ ಮಹಿಳೆಯರಿಗಾಗಿ ಪಿಂಕ್ ಟಾಯ್ಲೆಟ್ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಬ೦ದರೆ ನಗರದ ಇತರ ಜನನಿಬಿಡ ಪ್ರದೇಶದಲ್ಲೂ ನಿರ್ಮಿಸಲಾಗುವುದು" ಎಂದು ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ.












Click it and Unblock the Notifications