ಮೈಸೂರಿನಲ್ಲಿ ವಾಸ್ತು ಹೆಸರಿನಲ್ಲಿ ಚಿನ್ನಾಭರಣ ದೋಚಿದ್ದವನ ಬಂಧನ
ಮೈಸೂರು, ಜೂನ್ 13: ವಾಸ್ತು ಹೆಸರಿನಲ್ಲಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಕುಬೇರನ ಮೂಲೆಯಲ್ಲಿ ಆಮೆ ವಿಗ್ರಹ ಇಟ್ಟರೆ ಒಳ್ಳೆಯದೆಂದು ಹೇಳಿ ಆಮೆ ವಿಗ್ರಹ ಇಡುವ ನೆಪದಲ್ಲಿ 2 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪಿ ಸರಸ್ವತಿಪುರಂನ ಅಕ್ಷಯ್.ಪಿ.ಪದಕಿ (26) ಎಂಬಾತನನ್ನು ಲಕ್ಷ್ಮೀಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದೇ ಜೂನ್ 6ರಂದು ಕೃಷ್ಣಮೂರ್ತಿಪುರಂನಲ್ಲಿ ಇರುವ ವಿಜಯಲಕ್ಷ್ಮೀ ಎಂಬುವರ ಮನೆಯಲ್ಲಿ ಈ ಪ್ರಕರಣ ನಡೆದಿತ್ತು. ನಿಮ್ಮ ಮನೆ ವಾಸ್ತು ಸರಿಯಿಲ್ಲ, ವಾಸ್ತುಪ್ರಕಾರ ವಸ್ತುಗಳನ್ನು ಜೋಡಿಸಿಡುತ್ತೇನೆಂದು ಆಮೆ ವಿಗ್ರಹವನ್ನು ಕುಬೇರನ ಮೂಲೆಯಲ್ಲಿ ಇಡಬೇಕು ಎಂದು ಹೇಳಿ ಬೀರುವಿನ ಬೀಗ ತೆಗೆಸಿದ್ದಾನೆ. ನಂತರ, ಕುಡಿಯಲು ನೀರು ಕೇಳಿ 30 ಗ್ರಾಂ ಚಿನ್ನ, 420 ಗ್ರಾಂ ಬೆಳ್ಳಿಯನ್ನು ಕಳವು ಮಾಡಿದ್ದ.

ಈತ ಹೋದ ಮೇಲೆ ಕಳುವಾಗಿರುವುದು ಗೊತ್ತಾಗಿದೆ. ನಂತರ, ವಿಜಯಲಕ್ಷ್ಮೀ ಅವರು ದೂರು ದಾಖಲಿಸಿದ್ದರು. ಮೈಸೂರು ಮಾತ್ರವಲ್ಲದೇ ಬೆಂಗಳೂರು, ಮೇಲುಕೋಟೆ ಹಾಗೂ ಇತರ ಕಡೆಗಳಲ್ಲೂ ಈತ ವಾಸ್ತುಪ್ರಕಾರ ಮನೆಯಲ್ಲಿರುವ ಪರಿಕರಗಳನ್ನು ಜೋಡಿಸಿಡುತ್ತೇನೆಂದು ಹೇಳಿ ಇದೇ ರೀತಿ ಕಳ್ಳತನ ಮಾಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ ಪೊಲೀಸರು.












Click it and Unblock the Notifications