ಮೈಸೂರಲ್ಲಿ ಶೀಘ್ರ ಶಾಶ್ವತ ಆಧಾರ್ ನೋಂದಣಿ ಕೇಂದ್ರ
ಮೈಸೂರು, ಜ. 30: ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಮೇಲೆ ಯುಪಿಎ ಸರ್ಕಾರದ ಆಧಾರ್ ಮರೆಯಾಗುವ ನಿರೀಕ್ಷೆ ಹುಸಿಯಾಗಿದೆ. ಬದಲಿಗೆ ಆಧಾರ್‌ಗೆ ಹೆಸರು ನೋಂದಣಿ ಪ್ರಕ್ರಿಯೆ ಮತ್ತಷ್ಟು ವೇಗ ಪಡೆದುಕೊಂಡಿದೆ. ಅಲ್ಲದೆ, ಪೆಟ್ರೋಲಿಯಂ ಸಚಿವಾಲಯವು ಗ್ರಾಹಕರು ಆಧಾರ್ ಸಂಖ್ಯೆ ಸಲ್ಲಿಸುವುದನ್ನು ಕಡ್ಡಾಯ ಮಾಡಿದ ಮೇಲೆ ಆಧಾರ್ ಪ್ರಾಮುಖ್ಯತೆ ಹೆಚ್ಚಾಗಿದೆ.
ಆದರೆ, ಮೈಸೂರಿನಲ್ಲಿ ಇನ್ನೂ ಶೇ. 5ರಷ್ಟು ಜನರು ಆಧಾರ್ ನೋಂದಣಿ ಸಂಖ್ಯೆ ಪಡೆದಿಲ್ಲ. ಆದ್ದರಿಂದ ಜಿಲ್ಲೆಯಾದ್ಯಂತ 33 ಶಾಶ್ವತ ಆಧಾರ್ ನೋಂದಣಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಮುಂದಾಗಿದೆ. ಕರ್ನಾಟಕದ ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಯೋಜನೆಗೆ ವೇಗ ನೀಡಲು ಸರ್ಕಾರ ನಿರ್ಧರಿಸಿದೆ. [ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ಅಟಲ್‌ಜಿ ಜನಸ್ನೇಹಿ ಕೇಂದ್ರ ಹಾಗೂ ನಾಡ ಕಚೇರಿಗಳಲ್ಲಿ ಆಧಾರ್ ನೋಂದಣಿ ಕೇಂದ್ರವನ್ನು ಆರಂಭಿಸಲಾಗುವುದು. ಈ ಕೇಂದ್ರಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಸಲಾಗುವುದು. ಈಗಾಗಲೇ ಹಲವು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಧಾರ್ ನೋಂದಣಿ ಕುರಿತು ತರಬೇತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ. [ಎಲ್ ಪಿಜಿ ಸಬ್ಸಿಡಿಗೆ ಬ್ಯಾಂಕ್ ಖಾತೆ ಲಿಂಕ್ ಕಡ್ಡಾಯ]
ಸಾರಿಗೆ ಹಾಗೂ ಕಂದಾಯ ಇಲಾಖೆ, ಬ್ಯಾಂಕ್ ಹಾಗೂ ದೂರವಾಣಿ ಕೇಂದ್ರಗಳೂ ಆಧಾರ್ ಕಾರ್ಡ್ ಸಂಖ್ಯೆ ಕೇಳಲು ಆರಂಭಿಸಿರುವ ಕಾರಣ ಜನರು ಈ ಯೋಜನೆಗಾಗಿ ಮುಗಿಬಿದ್ದಿದ್ದಾರೆ. [ಎಂ-ಒನ್ ಗೆ ಆಧಾರ್ ಸಂಖ್ಯೆಯೇ ಐಡಿ]












Click it and Unblock the Notifications