30 ರೈಲುಗಳ ಸಂಚಾರ ರದ್ದು; ಮೈಸೂರಿನಲ್ಲಿ ಪ್ರಯಾಣಿಕರ ಪರದಾಟ
ಮೈಸೂರು, ಜೂನ್ 17: ನವೀಕರಣ ಕಾಮಗಾರಿ ಸೇರಿದಂತೆ ನಗರದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ವಿವಿಧ ಕಾರ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಿಂದ ಬೆಂಗಳೂರು, ಶಿವಮೊಗ್ಗ, ಹಾಸನ ಹಾಗೂ ಚಾಮರಾಜನಗರಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ನಗರದ ಕೇಂದ್ರ ರೈಲ್ವೆ ನಿಲ್ದಾಣ ಹಾಗೂ ಹಳ್ಳಿಗಳಲ್ಲಿ ನಾನ್ ಇಂಟರ್ ಲಾಕಿಂಗ್ ಆಧುನಿಕ ವ್ಯವಸ್ಥೆ ಅಳವಡಿಸುತ್ತಿರುವುದರಿಂದ ಇದೇ ಜೂನ್ 23ರವರೆಗೆ ಮೈಸೂರಿನಿಂದ ವಿವಿಧೆಡೆಗೆ ಪ್ರಯಾಣಿಸುತ್ತಿದ್ದ 30 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೆಎಸ್ ಆರ್‌ಟಿಸಿ ಗ್ರಾಮಾಂತರ ವಿಭಾಗವು ಜೂನ್ 23ರವರೆಗೆ ಮೈಸೂರು- ಬೆಂಗಳೂರು ಮಾರ್ಗವಾಗಿ ಹೆಚ್ಚುವರಿ 50 ಬಸ್‌ಗಳನ್ನು ನಿಯೋಜಿಸಿದೆ. ನಗರ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಸಾಮಾನ್ಯಕ್ಕಿಂತ ಹೆಚ್ಚಿತ್ತು. ಬಸ್‌ಗಳು ಸಿಗದೆ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ರೈಲು ಸಂಚಾರದಲ್ಲಿ ಉಂಟಾಗಿರುವ ವ್ಯತ್ಯಯದ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಆದರೂ ರೈಲು ನಿಲ್ದಾಣಕ್ಕೆ ಜನ ಬಂದು ಹೋಗುತ್ತಿದ್ದಾರೆ. ಬಸ್ ನಿಲ್ದಾಣಕ್ಕೆ ಹೋಗಲು ಆಟೊ ರಿಕ್ಷಾಗಳಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ಹಣ ಪಡೆಯುತ್ತಿದ್ದದ್ದು ಕಂಡುಬಂತು.
ರೈಲುಗಳ ಸಂಚಾರ ರದ್ದಾದ ಪರಿಣಾಮ ಪ್ರಯಾಣಿಕರಿಗೆ ಪರ್ಯಾಯವಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ರೈಲಿಗಿಂತ ಬಸ್ ಪ್ರಯಾಣ ದರ ಹೆಚ್ಚಾದ್ದರಿಂದ ಪ್ರಯಾಣಿಕರಿಗೆ ಹೊರೆಯಾಗಿ ಪರಿಣಮಿಸಿದೆ. ದವಸ ಧಾನ್ಯ ಸೇರಿದಂತೆ ಬಹಳಷ್ಟು ಲಗೇಜ್ ಗಳನ್ನು ತೆಗೆದುಕೊಂಡು ಬಂದಿದ್ದ ಪ್ರಯಾಣಿಕರು ಬಸ್ ನಲ್ಲಿ ಹೋಗಲು ಹಿಂದೇಟು ಹಾಕಿದರು. ಕೆಲವರು ಖಾಸಗಿ ವಾಹನಗಳ ಮೊರೆ ಹೋದರು.
ಮೈಸೂರು - ಬೆಂಗಳೂರು ನಡುವೆ ನಿತ್ಯ 500ಕ್ಕೂ ಹೆಚ್ಚು ಬಸ್ ಗಳು ಸಂಚರಿಸುತ್ತವೆ. ಈಗ ರೈಲು ಸಂಚಾರ ವ್ಯತ್ಯಯಗೊಂಡ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಸಂಚರಿಸಲಿದೆ. ಚಾಮರಾಜನಗರ, ಶಿವಮೊಗ್ಗ, ಹಾಸನ, ಅರಸೀಕೆರೆ, ಕೆ.ಆರ್ ನಗರಕ್ಕೆ ಹೆಚ್ಚುವರಿ ಬಸ್ ಸಂಚಾರ ಪ್ರಾರಂಭವಾಗಲಿದೆ. ಬೇಡಿಕೆ ನೋಡಿಕೊಂಡು ಮತ್ತಷ್ಟು ಬಸ್ ಸಂಚಾರ ಹೆಚ್ಚಿಸುವುದಕ್ಕೆ ಸಾರಿಗೆ ಸಂಸ್ಥೆ ಈಗಾಗಲೇ ತೀರ್ಮಾನ ಕೈಗೊಂಡಿದೆ.












Click it and Unblock the Notifications