ದೀನ ದಯಾಳ್ ಉಪಾಧ್ಯಾಯ ಅವರ ಏಕಾತ್ಮ ಮಾನವತೆ, ಅಂತ್ಯೋದಯದ ಕನಸು
ಮೈಸೂರು, ಫೆ 11: ಪಂಡಿತ್ ದೀನದಯಾಳ್ ಉಪಾಧ್ಯಾಯರ ಬಲಿದಾನ ದಿನದಂದು ಕೆ. ಆರ್ ಕ್ಷೇತ್ರದ ಬಿಜೆಪಿ ವತಿಯಿಂದ ಸಮರ್ಪಣಾ ದಿನವನ್ನು ವಿದ್ಯಾರಣ್ಯಪುರಂ ನ ಕಚೇರಿಯಲ್ಲಿ ಆಚರಿಸಲಾಗಿದೆ. ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು "ದೀನ ದಯಾಳ್ ಉಪಾಧ್ಯಾಯ ಅವರ ಏಕಾತ್ಮ ಮಾನವತೆ ಹಾಗೂ ಅಂತ್ಯೋದಯದ ಕನಸನ್ನು ನಾವೆಲ್ಲರೂ ಸಾಕಾರಗೊಳಿಸುವತ್ತ ಹೆಜ್ಜೆ ಇಡಬೇಕು, ಈಗಾಗಲೇ ಅಂತ್ಯೋದಯ ಯೋಜನೆ ಸಕಾರಗೊಳಿಸುವತ್ತ ನಾವು ಕ್ಷೇತ್ರದಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ದೀನದಯಾಳರ ಏಕಾತ್ಮ ಮಾನವತಾ ವಾದವನ್ನು ಅರ್ಥಮಾಡಿಕೊಳ್ಳುವುದು ನಿಜಕ್ಕೂ ಕಷ್ಟ" ಎಂದು ಹೇಳಿದರು.
"ಒಂದು ಬಾರಿ ಅರ್ಥ ಮಾಡಿಕೊಂಡರೆ ಸಮಾಜಕ್ಕೆ ನಮ್ಮನ್ನು ನಾವು ಸಮರ್ಪಿಸಿಕೊಂಡು ಬಿಡುತ್ತೇವೆ. ಅಷ್ಟು ಸುಂದರ ಆ ಏಕಾತ್ಮ ಮಾನವತೆ ಎನ್ನುವುದು. ನಮ್ಮೆಲ್ಲರ ಆತ್ಮ ಒಂದೇ ನಾವು ಬೇರೆ ಬೇರೆ ಜಾತಿ, ಧರ್ಮದಿಂದ ಗುರುತಿಸಿಕೊಂಡಿದ್ದೇವೆ. ಆದರೆ. ನಮ್ಮೆಲ್ಲರೂ ಇರುವ ಆ ಪರಮಾತ್ಮ ಒಬ್ಬನೇ ಇದುವೇ ಏಕಾತ್ಮ ಮಾನವತಾ ವಾದ. ಕೃಷ್ಣರಾಜ ಕ್ಷೇತ್ರದಲ್ಲಿ ನಾವು ಸೆಪ್ಟೆಂಬರ್ 25 ರಂದು ದೀನದಯಾಳ್ ಉಪಾಧ್ಯಯರ ಜನ್ಮದಿನದ ಪ್ರಯುಕ್ತ ನಾವು ಕಾರ್ಯಕ್ರಮಗಳನ್ನು ಮಾಡಿ ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ"ಎಂದು ರಾಮದಾಸ್ ಹೇಳಿದರು.

"ಇಂದು ನಮ್ಮನ್ನು ನಾವು ಸಮಾಜಕ್ಕೆ ಸಮರ್ಪಣೆ ಮಾಡುವ ದೃಷ್ಟಿಯಿಂದ ಮೂರು ಮಹತ್ವದ ನಿರ್ಧಾರಗಳನ್ನು ಇಂದು ಕೈಗೊಂಡಿದ್ದೇವೆ.
1. ದೀನ ದಯಾಳರ ತತ್ವಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ದೀನ ದಯಾಳ್ ಅಂತ್ಯೋದಯ ನಗರ ದಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಪಾರ್ಕ್ ನಿರ್ಮಾಣ ಹಾಗೂ ಬಹು ಉಪಯೋಗಿ ಭವನ ನಿರ್ಮಾಣಕ್ಕೆ 4 ಎಕ್ಕರೆ ಜಾಗವನ್ನು ತೆಗೆದಿಟ್ಟಿದ್ದೇವೆ.
2. ಅಂತ್ಯೋದಯ ಸೇವಾ ತಂಡ ರಚನೆ : ಸಮಾಜ ಸೇವೆ ಮಾಡಲು ಹಲವರಿಗೆ ಇಚ್ಛೆ ಇರುತ್ತದೆ ಕೆಲವರಿಗೆ ಹೇಗೆ ಸೇವೆ ಮಾಡುವುದು ಹಾಗೂ ಯಾವ ಸಂಘ ಸಂಸ್ಥೆಗಳನ್ನು ಸೇರಿಕೊಳ್ಳಬೇಕು ಎಂಬ ಗೊಂದಲವಿರುತ್ತದೆ ಹಾಗಾಗಿ ಸೇವೆ ಮಾಡಲು ಇಚ್ಛೆ ಇರುವವರಿಗಾಗಿಯೇ ಅಂತ್ಯೋದಯ ಸೇವಾ ತಂಡವನ್ನು ರಚಿಸಿ ಪ್ರತೀ ತಿಂಗಳ 11 ನೇ ತಾರೀಖು ಸೇವಾ ಚಟುವಟಿಕೆಗಳನ್ನು ನಡೆಸಲು ಪ್ರಾರಂಭಿಸುವವರಿದ್ದೇವೆ.
3. ದೀನ್ ದಯಾಳ್ ಪ್ರಾಮಾಣಿಕ ಕಾರ್ಯಕಾರ್ಯರ ಕಲ್ಯಾಣ ನಿಧಿ ಸ್ಥಾಪನೆ: ತಮ್ಮನ್ನು ತಾವು ಸಮಾಜಕ್ಕಾಗಿ, ಪಕ್ಷಕ್ಕಾಗಿ ಸಮರ್ಪಿಸಿಕೊಂಡಿರುವ ಲಕ್ಷಾಂತರ ಮಂದಿ ಕಾರ್ಯಕರ್ತರು ನಮ್ಮ ನಿಮ್ಮ ಮಧ್ಯದಲ್ಲಿದ್ದಾರೆ ಅವರ ಕಷ್ಟ ಸುಖದಲ್ಲಿ ಭಾಗವಹಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಈ ದೃಷ್ಟಿಯಿಂದಲೇ ದೀನ್ ದಯಾಳ್ ಅಂತ್ಯೋದಯ ನಿಧಿಯನ್ನು ಸ್ಥಾಪನೆ ಮಾಡಿ ಕಷ್ಟದಲ್ಲಿರುವ ಕಾರ್ಯಕರ್ತರಿಗೆ ಸಹಾಯ ಮಾಡಲು ಈ ನಿರ್ಧಾರವನ್ನು ಕೈಗೊಂಡಿದ್ದೇವೆ" ಎಂದು ಶಾಸಕರಾದ ರಾಮದಾಸ್ ಹೇಳಿದರು.
"ಒಟ್ಟಾರೆಯಾಗಿ ಈ ಮೂರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡಾ ಸರ್ಕಾರದ ಸೇವೆಗಳು ತಲುಪಿಸುವ ಮೂಲಕ ಅಂತ್ಯೋದಯವನ್ನು ಸಾಕಾರಗೊಳಿಸುವತ್ತ ಹೆಜ್ಜೆ ಇಟ್ಟಿದ್ದೇವೆ. ನಾವೆಲ್ಲರೂ ಏಕಾತ್ಮ ಮಾನವತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ" ಎಂದು ಎಸ್.ಎ.ರಾಮದಾಸ್ ಈ ಸಂದರ್ಭದಲ್ಲಿ ಹೇಳಿದರು.












Click it and Unblock the Notifications