ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಪಂಚ ಮಹಾರಥೋತ್ಸವದ ವೈಭವ, ಕಾರ್ಯಕ್ರಮಗಳ ವಿವರ ಇಲ್ಲಿದೆ
ಮೈಸೂರು, ಏಪ್ರಿಲ್, 02: ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆಯಲಿರುವ ಪಂಚಮಹಾರಥೋತ್ಸವವನ್ನು ಕಣ್ತುಂಬಿಸಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.
ಮಾರ್ಚ್ 30ರಂದು ನವರತ್ನ ಪರಿಷ್ಕೃತ ಶ್ರೀಕಂಠಮುಡಿ ಕಿರೀಟಧಾರಣಾ ಪೂರ್ವಕ ಪುಷ್ಪ ಮಂಟಪರೋಹಣ ಉತ್ಸವದೊಂದಿಗೆ ಆರಂಭವಾಗಿರುವ ಜಾತ್ರೆಯಲ್ಲಿ ಪ್ರಮುಖವಾದ ಪಂಚ ಮಹಾರಥೋತ್ಸವ ಭಾನುವಾರ (ಏಪ್ರಿಲ್ 02) ಸಡಗರ ಸಂಭ್ರಮ, ಸಂಪ್ರದಾಯದೊಂದಿಗೆ ಅದ‍್ಧೂರಿಯಾಗಿ ನಡೆಯಲಿದೆ. ಈ ಐತಿಹಾಸಿಕ ರಥೋತ್ಸವದ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಲು ಭಕ್ತರ ದಂಡು ನಂಜನಗೂಡಿಗೆ ಆಗಮಿಸಿದೆ.

ಭಾನುವಾರ (ಏಪ್ರಿಲ್ 2) ಬೆಳಗ್ಗೆ 6 ಗಂಟೆಯಿಂದ 6:40ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಪಂಚಮಹಾರಥೋತ್ಸವ ನಡೆದಿದೆ. ಈ ವೇಳೆ ಪ್ರಧಾನ ಅರ್ಚಕರ ಸೇರಿದಂತೆ ಸ್ಥಳ ಪುರೋಹಿತರು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸುವ ಮೂಲಕ ಗೌತಮ ರಥಕ್ಕೆ ಚಾಲನೆ ನೀಡಿದ್ದಾರೆ.
ಮುಗಿಲು ಮುಟ್ಟಿದ "ಉಘೇ ಶ್ರೀಕಂಠ" ಉದ್ಘೋಷ
ನಂತರ ಗಣಪತಿ, ಶ್ರೀಕಂಠೇಶ್ವರ, ಸುಬ್ರಹ್ಮಣ್ಯ, ಚಂಡಿಕೇಶ್ವರ, ಹಾಗೂ ಅಮ್ಮನವರ ರಥಗಳು ಸೇರಿದಂತೆ ಪಂಚರಥೋತ್ಸವವು ನಗರದ ರಾಜಬೀದಿಯಲ್ಲಿ ಸಾಗಿದೆ. ಈ ಸಂದರ್ಭದಲ್ಲಿ ಭಕ್ತರು ರಥವನ್ನು ಎಳೆದರೆ, ಎರಡು ಬದಿಯಲ್ಲಿ ನೆರೆದ ಭಕ್ತರು, ನವವಧುವರರು ಉಘೇ ಶ್ರೀಕಂಠ ಉದ್ಘೋಷದೊಂದಿಗೆ ಜೈಕಾರ ಮೊಳಗಿಸಿದ್ದಾರೆ.
ರಥವು ರಾಜಬೀದಿಯಲ್ಲಿ ಸಾಗಿದ್ದು, ಈ ವೇಳೆ ಭಕ್ತರು ಭಕ್ತಿಯಿಂದ ಹೂವು, ಹಣ್ಣು ಎಸೆದು ಹರಕೆ ತೀರಿಸಿಕೊಂಡಿದ್ದಾರೆ. ರಾಜಬೀದಿಯಲ್ಲಿ ಸಾಗುವ ರಥಗಳು ಬಳಿಕ ಸ್ವಸ್ಥಾನ ಸೇರಲಿವೆ. ರಥೋತ್ಸವದ ಹಿಂದಿನ ದಿನವೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿದ ಭಕ್ತರು ರಥೋತ್ಸವದ ದಿನದಂದು ಮುಂಜಾನೆ ಕಪಿಲ ನದಿಯಲ್ಲಿ ಸ್ನಾನ ಮಾಡಿ, ದೇವಸ್ಥಾನದ ಆವರಣದಲ್ಲಿ ಉರುಳು ಸೇವೆ ಮಾಡುವ ಮೂಲಕ ಹರಕೆ ತೀರಿಸಿದರೆ, ಇನ್ನು ಕೆಲವು ಭಕ್ತರು ಮುಡಿ ಅರ್ಪಿಸಿದ್ದಾರೆ.

ಪಂಚರಥೋತ್ಸವದಲ್ಲಿ ಗೌತಮ ರಥ ಆಕರ್ಷಣೆ
ರಥೋತ್ಸವದ ಅಂಗವಾಗಿ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ರಾತ್ರಿಯಿಡಿ ದೇವಾಲಯದ ಮುಂಭಾಗದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಮುಂಜಾನೆ ಪಂಚ ರಥೋತ್ಸವ ನಡೆದಿದೆ.
ಪಂಚರಥೋತ್ಸವದಲ್ಲಿ ಗಣಪತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಹಾಗೂ ಗೌತಮ ರಥಗಳಿದ್ದು, ಈ ಐದು ರಥಗಳ ಪೈಕಿ ಗೌತಮ ರಥ ಮುಖ್ಯವಾಗಿದೆ. ಇದು ಪಂಚ ರಥೋತ್ಸವದ ಪ್ರಮುಖ ಆಕರ್ಷಣೆ ಆಗಿದೆ. ಈ ರಥವು ಸುಮಾರು 110 ಟನ್ ತೂಕ, 89 ಅಡಿ ಎತ್ತರ ಇದೆ. ವಿವಿಧ ಬಣ್ಣದ ಬಟ್ಟೆಗಳನ್ನು ಸುತ್ತಿ, ಹೂವಿನಿಂದ ಅಲಂಕರಿಸಲಾಗುವ ರಥದ ತುದಿಯಲ್ಲಿ ಧ್ವಜವನ್ನು ಕಟ್ಟಲಾಗಿದೆ.
ಮಹಾಮಂಗಳಾರತಿಯೊಂದಿಗೆ ರಥಕ್ಕೆ ಚಾಲನೆ
ನವರತ್ನ ಹಾಗೂ ಹೂವಿನಿಂದ ಕಂಗೊಳಿಸುವ ಶ್ರೀಕಂಠಸ್ವಾಮಿಯ ವಿಗ್ರಹವನ್ನು ರಥದಲ್ಲಿ ಪ್ರತಿಷ್ಠಾಪಿಸಿ ಮುಂಜಾನೆ ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ವಿಧಿವಿಧಾನದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿದೆ. ನಂತರ ರಥಕ್ಕೆ ಮಹಾಮಂಗಳಾರತಿಯನ್ನು ಮಾಡುವ ಮೂಲಕ ರಥಕ್ಕೆ ಚಾಲನೆ ನೀಡಲಾಗಿದೆ.
ರಥವು ಜನಸಾಗರದೊಂದಿಗೆ ಚಲಿಸಿ ರಾಜಗೋಪುರಕ್ಕೆ ನೇರವಾಗಿ ಬಂದು ನಿಂತಾಗ ಕಂಡುಬರುವ ದೃಶ್ಯ ಮನಮೋಹಕವಾಗಿತ್ತು. ನೂತನವಾಗಿ ವಿವಾಹವಾದ ನವದಂಪತಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಹೂ ಹಣ್ಣು ಎಸೆಯುವ ಮೂಲಕ ತಮ್ಮ ಹರಕೆಯನ್ನು ಒಪ್ಪಿಸುವುದು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯವಾಗಿದೆ.
ಏಪ್ರಿಲ್ 4ರಂದು ಕಪಿಲ ನದಿಯಲ್ಲಿ ತೆಪ್ಪೋತ್ಸವ
ಇನ್ನು ರಥೋತ್ಸವದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಲಾಗಿದೆ. ಮತ್ತೊಂದೆಡೆ ಸಂಘ, ಸಂಸ್ಥೆಗಳು ಅಲ್ಲಲ್ಲಿ ಭಕ್ತರಿಗೆ ನೀರು, ಮಜ್ಜಿಗೆ, ಮೊಸರು, ಸಿಹಿ ಪೊಂಗಲ್, ಪುಳಿಯೋಗರೆ ಹೀಗೆ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಿದ್ದಾರೆ. ರಥೋತ್ಸವದ ಅಂಗವಾಗಿ ಏಪ್ರಿಲ್ 4ರಂದು ಮಂಗಳವಾರ ಸಂಜೆ 7ಗಂಟೆಗೆ ಕಪಿಲಾ ನದಿಯಲ್ಲಿ ಅಲಂಕೃತ ಉತ್ಸವ ಮೂರ್ತಿಯ ತೆಪ್ಪೋತ್ಸವ ನಡೆಯಲಿದೆ. ಅಲ್ಲದೆ ಏಪ್ರಿಲ್ 6ರಂದು ನಂದಿ ವಾಹನೋತ್ಸವದೊಂದಿಗೆ ನಂಜನಗೂಡಿನ ದೊಡ್ಡ ಜಾತ್ರೆಗೆ ತೆರೆಬೀಳಲಿದೆ.
ಪಂಚಮಹಾರಥೋತ್ಸವ ನಡೆಯುವ ನಂಜನಗೂಡು ಮೈಸೂರಿನಿಂದ ಸುಮಾರು 25ಕಿಲೋ ಮೀಟರ್ ದೂರದಲ್ಲಿದೆ. ಇದು ಪುರಾಣ ಪ್ರಸಿದ್ಧ ಕ್ಷೇತ್ರವಾಗಿದ್ದು, ಇಲ್ಲಿರುವ ಶ್ರೀಕಂಠೇಶ್ವರ ದೇಗುಲ ಇತಿಹಾಸ ಪ್ರಸಿದ್ಧವಾಗಿದೆ. ವರ್ಷಂಪ್ರತಿ ಮೀನ ಮಾಸದಲ್ಲಿ ಉತ್ತರ ನಕ್ಷತ್ರದ ದಿನದಂದು ಶುಭ ಲಗ್ನದಲ್ಲಿ ಪಂಚಮಹಾರಥೋತ್ಸವ ನಡೆಯುತ್ತದೆ.












Click it and Unblock the Notifications