ನ.1 ರಿಂದ ವರ್ಷವಿಡೀ ಆಕಾಶವಾಣಿಯಲ್ಲಿ 'ಪದ ಸಂಸ್ಕೃತಿ' ಸರಣಿ ಆರಂಭ
ಮೈಸೂರು, ಅಕ್ಟೋಬರ್.30: ಕನ್ನಡ ರಾಜ್ಯೋತ್ಸವದ ಅಂಗವಾಗಿ ಇದೇ ನವೆಂಬರ್ 1ರಿಂದ ವರ್ಷವಿಡೀ ಕನ್ನಡ ಪದಗಳು ಬಳಕೆಯಾಗುವ ನಿಟ್ಟಿನಲ್ಲಿ ಪದ ಸಂಸ್ಕೃತಿ ಸರಣಿ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ ಎಂದು ಮೈಸೂರು ಆಕಾಶವಾಣಿ ಉಪ ನಿರ್ದೇಶಕ ಎಚ್. ಶ್ರೀನಿವಾಸ್ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಜ್ಯದ ಎಲ್ಲಾ 13 ಆಕಾಶವಾಣಿ ಕೇಂದ್ರಗಳಿಂದ ಏಕಕಾಲದಲ್ಲಿ ಪದ ಸಂಸ್ಕೃತಿ ಸರಣಿ ಪ್ರಸಾರವಾಗಲಿದೆ. ಪ್ರತಿದಿನ ಬೆಳಗ್ಗೆ 6:45 ರಿಂದ 6:55 ರ ವರಗೆ 10ನಿಮಿಷಗಳ ಕಾಲ ಪ್ರಸಾರವಿರಲಿದೆ.
ಪ್ರಸ್ತುತ ದಿನಗಳಲ್ಲಿ ಕನ್ನಡ ಪದಗಳ ಬಳಕೆ ಕಡಿಮೆಯಾಗುತ್ತಿರುವ ಹಿನ್ನೆಲೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಸಾಕಷ್ಟು ಪದಗಳನ್ನು ಬಳಸದೇ ಇರುವುದರಿಂದ ಮರೆಯಾಗುತ್ತಿರುವ ಪದಗಳನ್ನು ಆಕಾಶವಾಣಿಯಲ್ಲಿ ಈ ಸರಣಿ ಕಾರ್ಯಕ್ರಮದಲ್ಲಿ ಮರುಕಳಿಸುವಂತೆ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಜಾನಪದ, ಭಾವಗೀತೆ, ದಾಸರ ಕೀರ್ತನೆಗಳು, ವಚನಗಳು, ಇವುಗಳ ಸರಸತ್ವ ಹಾಗೂ ಕವಿಯ ರಚನೆಯ ಅರ್ಥವನ್ನು ತಿಳಿಸಿಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದ ಹಲವಾರು ಭಾಷಾ ತಜ್ಞರನ್ನು ಸಂಪರ್ಕ ಮಾಡಿ ಅವರಿಂದ ಕಾರ್ಯಕ್ರಮ ನಡೆಸುವ ಚಿಂತನೆ ಆಕಾಶವಾಣಿ ಮಾಡುತ್ತಿದೆ ಎಂದು ಎಚ್. ಶ್ರೀನಿವಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಸುನೀಲ್ ಭಾಟಿಯಾ ಹಾಜರಿದ್ದರು.












Click it and Unblock the Notifications