ಭಾರೀ ಮಳೆಯಿಂದ 100 ವರ್ಷಗಳ ಹಳೆಯ ದೇವಾಲಯದ ಸ್ನಾನಘಟ್ಟ ಮೆಟ್ಟಿಲು ಮುಳುಗಡೆ
ನಂಜನಗೂಡು, ಜುಲೈ, 17: ರಾಜ್ಯದ ಹಲವೆಡೆ ಮಳೆರಾಯನ ಆರ್ಭಟಕ್ಕೆ ಅವಾಂತರಗಳೇ ಸೃಷ್ಟಿಯಾಗಿವೆ. ಹಾಗೆಯೇ ಇದೀಗ ಕೇರಳದ ವೈನಾಡಿನಲ್ಲಿ ಸತತ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಕಬಿನಿ ಭರ್ತಿಯಾಗಿದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ನೀರನ್ನು ಕಪಿಲಾ ನದಿಗೆ ಬಿಡಲಾಗುತ್ತಿದೆ. ಇದರಿಂದ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯ ಸ್ನಾನಘಟ್ಟ ಮೆಟ್ಟಿಲು ಮುಳುಗಡೆಯಾಗಿದೆ.
ಬುಧವಾರ (ಜುಲೈ 17) ಕಬಿನಿ ಜಲಾಶಯದಿಂದ 36,000 ಕ್ಯೂಸೆಕ್ ಹಾಗೂ ನುಗು ಅಣೆಕಟ್ಟೆಯಿಂದ 2,000 ಕ್ಯೂಸೆಕ್ ನೀರು ಬಿಡಲಾಗಿದ್ದು, ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯ ಸ್ನಾನಘಟ್ಟ ಮೆಟ್ಟಿಲು ಮುಳುಗಡೆಯಾಗಿದೆ. ಹೀಗಾಗಿ ನದಿ ಪ್ರವೇಶದ ದ್ವಾರವನ್ನು ಬ್ಯಾರಿಕೇಡ್ ಗಳಿಂದ ಬಂದ್ ಮಾಡಿ ದೇವಾಲಯಕ್ಕೆ ಆಗಮಿಸುವ ಭಕ್ತರು ಪುಣ್ಯಸ್ನಾನಕ್ಕೆ ನದಿಗೆ ಇಳಿಯದಂತೆ ಸೂಚನೆ ನೀಡಿದ್ದಾರೆ.

ಮೈಸೂರು ನಂಜನಗೂಡು ಮುಖ್ಯ ರಸ್ತೆಯ 100 ವರ್ಷಗಳ ಹಳೆಯ ದೇವರಾಜ ಅರಸು ಸೇತುವೆ ತುತ್ತ ತುದಿಯಲ್ಲಿ ಭಾರಿ ಪ್ರಮಾಣದ ಪ್ರವಾದ ನೀರು ಹರಿಯ ತೊಡಗಿದೆ. ದೇವಾಲಯದ ಹಿಂಬದಿಯಲ್ಲಿರುವ ತಗ್ಗು ಪ್ರದೇಶಗಳಾದ ತೋಪಿನ ಬೀದಿ, ಒಕ್ಕಲಗೇರಿ ಹಳ್ಳದ ಕೇರಿ, ರಾಯರ ಮಠ ಸೇರಿದಂತೆ ಸಾಕಷ್ಟು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗುವ ಆತಂಕ ಎದುರಾಗಿದೆ.
"ಯಾವುದೇ ಜೀವ ಹಾನಿ ಸಂಭವಿಸದ ಹಾಗೆ ಸಂರಕ್ಷಿಸುವ ಸಲುವಾಗಿ ಗಂಜಿ ಕೇಂದ್ರ ತೆರೆಯಲಾಗುವುದು. ಸಂಕಷ್ಟದಲ್ಲಿರುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ತಾಲೂಕು ಆಡಳಿತ ಸಿದ್ಧವಾಗಿದೆ" ಎಂದು ತಹಸಿಲ್ದಾರ್ ಶಿವಕುಮಾರ್ ಕಾಸ್ನೂರ್ ತಿಳಿಸಿದರು.
ದೇವಾಲಯ ವತಿಯಿಂದ ಬೆಳಗ್ಗೆಯಿಂದ ಸಂಜೆವರೆಗೂ ಧ್ವನಿ ವರ್ಧಕದಿಂದ ಯಾರು ಕೂಡ ಕಪಿಲಾ ನದಿಯಲ್ಲಿ ಸ್ಥಾನ ಮಾಡದಂತೆ ಹಾಗೂ ಕಪಿಲಾ ನದಿಯ ಹತ್ತಿರ ಯಾರು ತೆರಳದಂತೆ ಮಾಹಿತಿ ನೀಡಲಾಗುತ್ತಿದೆ.
ಕೇರಳದ ಮೂಲೆಹೊಳೆ, ಮುತ್ತಿಗೆಹುಂಡಿ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸರಗೂರು ತಾಲೂಕಿನ ನುಗು ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದ ಗರಿಷ್ಟ ಮಟ್ಟ 110 ಅಡಿ ಇದ್ದು, 3,100 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯದ ರಕ್ಷಣೆ ದೃಷ್ಟಿಯಿಂದ 108 ಅಡಿ ನೀರನ್ನು ಮಾತ್ರ ಇರಿಸಿಕೊಳ್ಳಲಾಗಿದೆ.











Click it and Unblock the Notifications