ಮೈಸೂರಿನಲ್ಲಿ ಅಣು ವಿಜ್ಞಾನಿ ನಿಗೂಢವಾಗಿ ನಾಪತ್ತೆ
ಮೈಸೂರು, ಅಕ್ಟೋಬರ್ 10: ಇಲ್ಲಿನ ಭಾಭಾ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ ಅಪರೂಪದ ವಸ್ತುಗಳ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ವಿಜ್ಞಾನಿಯೊಬ್ಬರು ಕಳೆದ ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಂಸ್ಥೆಯಲ್ಲಿ ಸಹಾಯಕ ವೈಜ್ಞಾನಿಕಾಧಿಕಾರಿ ಆಗಿದ್ದ ಅಭಿಷೇಕ್ ರೆಡ್ಡಿ ಗುಲ್ಲಾ ಅವರೇ ನಾಪತ್ತೆ ಆದವರು. ಮೈಸೂರಿನ ಇಲವಾಲದಲ್ಲಿರುವ ಕಾವೇರಿ ಲೇಔಟ್ನಲ್ಲಿ ಅವರು ವಾಸವಾಗಿದ್ದರು.

ಭಾಭಾ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ ಕಳೆದ ಒಂದು ವರ್ಷದಿಂದ ಇವರು ಕೆಲಸ ಮಾಡುತಿದ್ದರು ಎನ್ನಲಾಗಿದೆ. ಅಲ್ಲದೆ ಅವರು ಖಿನ್ನತೆ ಮತ್ತು ಮೈಗ್ರೇನ್‌ನಿಂದ ಬಳಲುತ್ತಿದ್ದರು ಎಂದೂ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ. ಅಭಿಷೇಕ್ ರೆಡ್ಡಿ ಯಾರಿಗೂ ತಿಳಿಸದೆ ಹೊರಟು ಹೋಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎರಡು ತಿಂಗಳ ಹಿಂದೆ ಹೆತ್ತವರ ಮರಣದ ನಂತರ ರೆಡ್ಡಿ ಒಬ್ಬಂಟಿಯಾಗಿದ್ದರು ಎಂದು ಇಲವಾಲ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಎನ್. ಎಚ್. ಯೋಗಾನಂದ ತಿಳಿಸಿದ್ದಾರೆ. ಅಕ್ಟೋಬರ್ 6ರ ಮಧ್ಯಾಹ್ನ ರೆಡ್ಡಿ, ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಯಿಂದ ಹೊರಹೋಗುವುದನ್ನು ಅವರ ನೆರೆಹೊರೆಯವರು ಕೊನೆಯದಾಗಿ ನೋಡಿದ್ದರು. ಈ ಬಳಿಕ ಅವರು ಮತ್ತೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications