ಮೈಸೂರು ಜಿಲ್ಲಾಧಿಕಾರಿಯಾಗಿ ಡಾ.ಕೆ.ವಿ. ರಾಜೇಂದ್ರ ನೇಮಕ
ಮೈಸೂರು, ಅಕ್ಟೋಬರ್, 21: ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಡಾ.ಬಗಾದಿ ಗೌತಮ್ ಅವರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದೀಗ ಡಾ.ಕೆ.ವಿ. ರಾಜೇಂದ್ರ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ಒಂದೂವರೆ ವರ್ಷದಿಂದ ಡಾ.ಬಗಾದಿ ಗೌತಮ್ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ನೆರವೇರುವಂತೆ ನೋಡಿಕೊಂಡಿದ್ದರು. 2020ರ ಜುಲೈ 30ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಕೆ.ವಿ. ರಾಜೇಂದ್ರ ಅವರು ಸುಮಾರು ಎರಡು ವರ್ಷ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಕೋವಿಡ್ ನಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸಿದ್ದರು.
ಮಂಡ್ಯಕ್ಕೆ ನೂತನ ಜಿಲ್ಲಾಧಿಕಾರಿ ನೇಮಕ
ಇನ್ನು ಮಂಡ್ಯ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಡಾ. ಎಚ್.ಎನ್. ಗೋಪಾಲಕೃಷ್ಣ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಮೊದಲು ಜಿಲ್ಲಾಧಿಕಾರಿಯಾಗಿದ್ದ ಎಸ್. ಅಶ್ವತಿ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರ, ಅವರ ಸ್ಥಾನಕ್ಕೆ ಗೋಪಾಲಕೃಷ್ಣನನ್ನು ನೇಮಕ ಮಾಡಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾಗಿದ್ದ ಡಾ. ಗೋಪಾಲಕೃಷ್ಣ ಅವರನ್ನು ಮಂಡ್ಯ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಎಸ್. ಅಶ್ವತಿ ಅವರನ್ನು ಪಶು ಸಂಗೋಪಾನಾ ಇಲಾಖೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ ಎಂದು ಸರ್ಕಾರದ ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಜೇಮ್ಸ್ ತರಕನ್ ಆದೇಶ ಹೊರಡಿಸಿದ್ದಾರೆ.
ಒಂದೇ ವರ್ಷದಲ್ಲಿ ಡಿಸಿ ವರ್ಗಾವಣೆ
ಇಂದು ಸರ್ಕಾರ ಹಲವಾರು ಜಿಲ್ಲೆಗಳಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಚಾಮರಾಜನಗರ ಜಿಲ್ಲಾಧಿಕಾರಿ ಆಗಿದ್ದ ಚಾರುಲತಾ ಸೋಮಲ್ ಅವರನ್ನು ಒಂದು ವರ್ಷದೊಳಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಚಾರುಲತಾ ಸೋಮಲ್ ಸ್ಥಾನಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ಡಿ.ಎಸ್. ರಮೇಶ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇವರು 2010 ಬ್ಯಾಚ್‌ನ ಐಎಎಸ್ ಅಧಿಕಾರಿ ಆಗಿದ್ದಾರೆ. ಚಾರುಲತಾ ಸೋಮಲ್ ಅವರು 2021ರ ನವೆಂಬರ್ 16ರಿಂದ ಚಾಮರಾಜನಗರದ ಜಿಲ್ಲಾಧಿಕಾರಿಯಾಗಿ ಸೇವೆಯನ್ನು ಆರಂಭಿಸಿದ್ದರು. ಇದೀಗ ಅವರನ್ನು ಒಂದು ವರ್ಷದೊಳಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.












Click it and Unblock the Notifications