ನಾಗರಹೊಳೆಯಲ್ಲಿ ಪ್ರವಾಸಿಗರ ಅನುಕೂಲಕ್ಕೆ ನೇಚರ್ ಗೈಡ್ಸ್!
ಮೈಸೂರು, ಅಕ್ಟೋಬರ್ 7: ಮೊದಲೆಲ್ಲ ನಾಗರಹೊಳೆಗೆ ಪ್ರವಾಸಕ್ಕೆ ತೆರಳಿದವರು ಅಲ್ಲಿನ ಹಸಿರು ಸುಂದರ ಪರಿಸರದೊಳಗೆ ಕಾಡು ಪ್ರಾಣಿಗಳನ್ನು ನೋಡುತ್ತಾ ಸಫಾರಿ ನಡೆಸಿ ಹಿಂತಿರುಗುತ್ತಿದ್ದರಾದರೂ ಅವರಿಗೆ ಅಲ್ಲಿನ ಬಗ್ಗೆ ಹೆಚ್ಚಿನ ಮಾಹಿತಿಯೇ ಸಿಗುತ್ತಿರಲಿಲ್ಲ. ಆದರೆ ಇನ್ಮುಂದೆ ಹಾಗಿಲ್ಲ. ಸಮಗ್ರ ಮಾಹಿತಿ ನೀಡಲೆಂದೇ ನೇಚರ್ ಗೈಡ್‌ಗಳು ಬರಲಿದ್ದಾರೆ.
ಇಕೋ ಟೂರಿಸಂನ ಸಹಕಾರದಿಂದ ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಉದ್ಯಾನವನದ ವೈಶಿಷ್ಟ್ಯತೆಯನ್ನು ತಿಳಿಸಲು ನೇಚರ್ ಗೈಡ್‌ಗಳನ್ನು ನೇಮಿಸಲಿದ್ದು, ಇದಕ್ಕಾಗಿ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ.

ನೇಚರ್ ಗೈಡ್‌ಗಳಿಗೆ ಸಮಗ್ರ ಮಾಹಿತಿ
ಈ ಕಾರ್ಯಾಗಾರದಲ್ಲಿ ಗೈಡ್ ಆಗಿ ಕಾರ್ಯ ನಿರ್ವಹಿಸಲಿರುವ ಅಭ್ಯರ್ಥಿಗಳಿಗೆ ಕಾಡಿನ ವೈವಿಧ್ಯ ಪರಿಸರ, ವನ್ಯಜೀವಿ ಸಂಕುಲಗಳು ಹೀಗೆ ಅರಣ್ಯಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ತಿಳಿಸಲಾಗುತ್ತಿದ್ದು, ಪ್ರವಾಸಿಗರು ಕೇಳುವ ಪ್ರಶ್ನೆಗಳಿಗೆ ಸಮಗ್ರ ಮಾಹಿತಿ ನೀಡುವಂತೆ ತಯಾರಿ ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ, ಆ ಮೂಲಕ ಪ್ರವಾಸಿಗರಲ್ಲಿ ಅರಣ್ಯ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡಲು ಅನುಕೂಲವಾಗುವಂತೆ ಗೈಡ್‌ಗಳಿಗೆ ತರಬೇತಿ ನೀಡಲಾಗುತ್ತದೆ.

ತರಬೇತಿಗೆ ಇಪ್ಪತ್ತು ಮಂದಿ ಆಯ್ಕೆ
ಸದ್ಯ ಅರ್ಹ ಮತ್ತು ಆಸಕ್ತ ಯುವಕ- ಯುವತಿಯರ ಇಪ್ಪತ್ತು ಮಂದಿಯ ಯುವ ತಂಡವನ್ನು ತಯಾರು ಮಾಡಲಾಗಿದ್ದು, ಅವರಿಗೆ ಅರಣ್ಯ ಇಲಾಖೆಯು ನಾಗರಹೊಳೆ ವಲಯ ಕೇಂದ್ರದಲ್ಲಿ ತರಬೇತಿ ನೀಡುತ್ತಿದೆ. ನೇಚರ್ ಗೈಡ್‌ಗಳಾಗಿ ಸೇವೆ ಸಲ್ಲಿಸಲು ಆಸಕ್ತ ಯುವ ಸಮೂಹದಿಂದ ಅರ್ಜಿಗಳನ್ನು ಆಹ್ವಾನಿಸಿದಾಗ ಸುಮಾರು ಮೂವತೈದಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಪಿಯುಸಿ ವಿದ್ಯಾರ್ಹತೆ ಹೊಂದಿದ ಮತ್ತು ನಾಗರಹೊಳೆ ಗಡಿಭಾಗದ ನಿವಾಸಿಗಳಾದ ಇಪ್ಪತ್ತು ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ.

ಹನ್ನೆರಡು ಮಂದಿ ತಜ್ಞರಿಂದ ತರಬೇತಿ
ಇವರಿಗೆ ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ(ಇಕೋ ಟೂರಿಸಂ) ಇಲಾಖೆಯ ಹನ್ನೆರಡು ಮಂದಿ ತಜ್ಞ ಸಂಪನ್ಮೂಲ ವ್ಯಕ್ತಿಗಳು ಐದು ದಿನಗಳ ಕಾಲ ತರಬೇತಿ ನೀಡುತ್ತಿದ್ದಾರೆ. ತರಬೇತಿ ವೇಳೆ ಕಾಡಿನ ವಿಶೇಷತೆಗಳ ಜೊತೆಗೆ ವಾಕ್ಚಾತುರ್ಯ, ಬಾಡಿ ಲಾಂಗ್ವೇಜ್, ಭಾವಾಭಿನಯ, ಪ್ರವಾಸಿಗರೊಂದಿಗೆ ಸಂವಹನ ಮಾಡುವ ಕಲೆ, ಅವರ ಭಾಷೆಗೆ ತಕ್ಕಂತೆ ವಿಷಯವನ್ನು ಅರ್ಥೈಸುವ ಕಲೆ ಕುರಿತಾಗಿ ತರಬೇತಿ ನೀಡಲಾಗುತ್ತಿದೆ. ಹನ್ನೆರಡು ಮಂದಿ ಸಂಪನ್ಮೂಲ ವ್ಯಕ್ತಿಗಳು ವಿಷಯ ತಜ್ಞರಾಗಿ ಪ್ರತಿಯೊಂದು ವಿಷಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಜತೆಗೆ ಕ್ಷೇತ್ರ ತರಬೇತಿ ಕೂಡ ನಡೆಯಲಿದೆ.

ಸಂಪನ್ಮೂಲ ವ್ಯಕ್ತಿ, ಪಕ್ಷಿ ತಜ್ಞ ರಾಜೀವ್ ಹೇಳುವುದೇನು?
ಈ ಕುರಿತಂತೆ ಮಾಹಿತಿ ನೀಡಿರುವ ಸಂಪನ್ಮೂಲ ವ್ಯಕ್ತಿ, ಇಕೋ ಟೂರಿಸಂನ ಪಕ್ಷಿ ತಜ್ಞ ರಾಜೀವ್, ರಕ್ಷಿತಾರಣ್ಯಗಳು, ಉದ್ಯಾನವನಗಳು ಎಂದರೆ ಕೇವಲ ವನ್ಯಜೀವಿಗಳನ್ನು ವೀಕ್ಷಿಸಿ ತೆರಳುವ ಕಾರ್ಯ ಎನ್ನುವಂತಾಗಿದೆ. ಆದರೆ ಅರಣ್ಯದಲ್ಲಿ ತಿಳಿದುಕೊಳ್ಳುವ ನೂರಾರು ವಿಷಯಗಳಿವೆ. ಆ ಮೂಲಕ ಪ್ರವಾಸಿಗರಲ್ಲಿ ಪರಿಸರ ಕಾಳಜಿ ಮೂಡಿಸುವುದು ಕಾರ್ಯಕ್ರಮದ ಮೂಲ ಉದ್ದೇಶ. ಇಲ್ಲಿ ತರಬೇತಿ ಪಡೆದವರು ಭವಿಷ್ಯದಲ್ಲಿ ಬೇರ ಉದ್ಯೋಗಕ್ಕಾಗಿ ಅರಸುವ ವೇಳೆ ಇಲ್ಲಿನ ತರಬೇತಿ ಅವರಿಗೆ ಸಹಾಯಕವಾಗಲಿದೆ ಎಂದಿದ್ದಾರೆ. ತರಬೇತಿ ಪಡೆದ ಗೈಡ್‌ಗಳು ಇನ್ಮುಂದೆ ನಾಗರಹೊಳೆ ಉದ್ಯಾನವನಕ್ಕೆ ಬರುವ ಪ್ರವಾಸಿಗರಿಗೆ ಕಾಡಿನ ಮಾಹಿತಿ ಮಾತ್ರವಲ್ಲದೆ, ಇಲ್ಲಿರುವ ಪ್ರಾಣಿ, ಪಕ್ಷಿಗಳ ಕುರಿತಂತೆ ಮಾಹಿತಿ ನೀಡಲಿದ್ದಾರೆ.

ಹಲವು ವೈವಿಧ್ಯದ ಅರಣ್ಯ ನಾಗರಹೊಳೆ
ನಾಗರಹೊಳೆ ಉದ್ಯಾನದ ಬಗ್ಗೆ ಹೇಳಬೇಕೆಂದರೆ ಇಲ್ಲಿ ನೂರಕ್ಕೂ ಹೆಚ್ಚು ಚಿರತೆ, ಒಂದು ನೂರಾ ಮೂವತೈದಕ್ಕೂ ಹೆಚ್ಚು ಹುಲಿಗಳು, ಸಾವಿರದೈನೂರಕ್ಕೂ ಹೆಚ್ಚು ಆನೆಗಳಿವೆ. ಇದರ ಜತೆಗೆ ಅರಣ್ಯವು ಬಣ್ಣಬಣ್ಣದ ಪಾತರಗಿತ್ತಿಗಳ ಆವಾಸ ಸ್ಥಾನವೂ ಹೌದು. ಕಾಡಿನ ರಣಹದ್ದುಗಳು, ಹಾವುಗಳು, ಸಸ್ತನಿಗಳು, ಸರೀಸೃಪಗಳು, ನೂರಾರು ವರ್ಷದ ಮರಗಳು, ನೀರು, ಮಣ್ಣಿನ ವೈವಿಧ್ಯತೆ ಹೀಗೆ ನೂರಾರು ವಿಶೇಷಗಳನ್ನು ಹೊಂದಿದೆ.
ದೇಶದಲ್ಲೇ ಅತಿಹೆಚ್ಚು ಸಂಖ್ಯೆಯ ಪಕ್ಷಿ ವೀಕ್ಷಣೆ ಆಗಿರುವ ಜಾಗ ನಾಗರಹೊಳೆ ಎನ್ನುವುದು ಮತ್ತೊಂದು ವಿಶೇಷ. ಆದರೆ ನಾಗರಹೊಳೆ ನೋಡಲು ಬರುವ ಪ್ರವಾಸಿಗರಿಗೆ ಇದ್ಯಾವುದು ಗೊತ್ತೇ ಆಗುವುದಿಲ್ಲ. ಆದರೆ ಇನ್ಮುಂದೆ ಹಾಗಿಲ್ಲ. ತರಬೇತಿ ಪಡೆದ ಗೈಡ್‌ಗಳು ಸಮಗ್ರ ಮಾಹಿತಿಯನ್ನು ಪ್ರವಾಸಿಗರ ಮುಂದೆ ತೆರೆದಿಡಲಿದ್ದಾರೆ.












Click it and Unblock the Notifications