ನಾಗರಹೊಳೆ: ಸಫಾರಿಯಲ್ಲಿ ಅಪರೂಪದ ಬಿಳಿ ಬಣ್ಣದ ಜಿಂಕೆ ಪ್ರತ್ಯಕ್ಷ: ವಿಡಿಯೋ ವೈರಲ್
ಮೈಸೂರು, ಜೂನ್, 10: ಎಚ್.ಡಿ. ಕೋಟೆ ತಾಲೂಕಿನ ಅಂತರಸಂತೆ ವಲಯದ ತಾರಕ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಬಿಳಿ ಬಣ್ಣದ ಜಿಂಕೆಯೊಂದು ಕಾಣಿಸಿಕೊಂಡಿದ್ದು, ಈ ದೃಶ್ಯವನ್ನು ಸಫಾರಿಗೆ ಹೋಗಿದ್ದ ಪ್ರಯಾಣಿಕರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಇದೇ ಫೋಟೋ ಇದೀಗ ಸಾಮಾಜಿ ಜಾಲತಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ .
ಸಾರಿ ವೇಳೆ ಕಾಣಿಸಿಕೊಂಡ ಬಿಳಿ ಬಣ್ಣದ ಜಿಂಕೆಯ ವಿಡಿಯೋ ಮತ್ತು ಛಾಯಾಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವನ್ಯಪ್ರಾಣಿಗಳ ರಕ್ತದಲ್ಲಿನ ಮೆಲನಿನ್ ಎಂಬ ಅಂಶದಲ್ಲಿನ ಏರಿಳಿತದಿಂದ ಪ್ರಾಣಿಗಳ ವರ್ಣದಲ್ಲಿ ವ್ಯತ್ಯಾಸ ಆಗುತ್ತದೆ. ಆದರೆ ಹೀಗೆ ಬೇರೆ ಬಣ್ಣದಲ್ಲಿ ಜನಿಸುವುದು ಕೆಲವು ಪ್ರಾಣಿಗಳಿಗೆ ವರದಾನವಾದರೆ, ಜಿಂಕೆಯಂತಹ ಪ್ರಾಣಿಗಳಿಗೆ ಕಂಟಕ ಆಗುತ್ತದೆ. ಏಕೆಂದರೆ ಬಿಳಿ ವರ್ಣದ ಜಿಂಕೆ ಬೇಗ ಭೇಟೆಗೆ ಗುರಿ ಆಗುತ್ತವೆ ಎಂದು ವಲಯ ಅರಣ್ಯಾಧಿಕಾರಿ ಸಿದ್ದರಾಜು ಮಾಹಿತಿ ನೀಡಿದರು.

ಜೀವ ವೈವಿಧ್ಯತೆಯಿಂದ ಕೂಡಿರುವ ಬಹುದೊಡ್ಡ ತಾಣವೇ ಆಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಿಸಿಕೊಂಡಿರುವ ಬಿಳಿ ಬಣ್ಣದ ಜಿಂಕೆ ವನ್ಯಜೀವಿ ಆಸಕ್ತರ ಕುತೂಹಲಕ್ಕೆ ಕಾರಣವಾಗಿದೆ. ಸುಮಾರು 642 ಚದರ ಕಿ.ಮೀ.ನಷ್ಟು ವ್ಯಾಪ್ತಿ ಹೊಂದಿರುವ ನಾಗರಹೊಳೆಯಲ್ಲಿ ಜಿಂಕೆಗಳು ಸಾಮಾನ್ಯವಾಗಿ ಕಂಡುಬರುತ್ತವೆ.
ಇನ್ನು ಅರಣ್ಯದ ಹಾದಿಯಲ್ಲಿ ಹಿಂಡು ಹಿಂಡಾದ ಈ ವನ್ಯಜೀವಿಗಳನ್ನು ಹೆಜ್ಜೆ ಹೆಜ್ಜೆಗೂ ನೋಡಬಹುದು. ಹೀಗೆ ಇದೀಗ ಜಿಂಕೆಗಳ ಹಿಂಡಿನ ನಡುವೆ ಬಿಳಿ ಜಿಂಕೆ ಪ್ರತ್ಯಕ್ಷ ಆಗಿದೆ. ಈ ಹಿಂದೆ ಬಂಡಿಪುರ ಅರಣ್ಯ ಪ್ರದೇಶದಲ್ಲಿಯೂ ಬಿಳಿ ಜಿಂಕೆ ಕಾಣಿಸಿಕೊಂಡಿತ್ತು ಎನ್ನುವ ಮಾಹಿತಿಯನ್ನಯ ನೀಡಿದರು.
ಹುಲಿ ಮರಿಗಳ ಪ್ರತ್ಯಕ್ಷ
ಇನ್ನು ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ಬಿಳಿಗಿರಿರಂಗನ ಬೆಟ್ಟ ಬಿಳಿಗಿರಿರಂಗನಾಥಸ್ವಾಮಿಯ ಮಹಿಮೆಯಿಂದ ಖ್ಯಾತಿಪಡೆದಿರುವುದರಲ್ಲದೆ, ಸುಂದರ ನಿಸರ್ಗ ರಮಣೀಯತೆಯನ್ನು ಹೊಂದಿ ಗಮನಸೆಳೆಯುವುದರೊಂದಿಗೆ ಇತ್ತೀಚೆಗಿನ ದಿನಗಳಲ್ಲಿ ಇಲ್ಲಿ ಹುಲಿ, ಕರಡಿಗಳು ಕಾಣಿಸಿಕೊಳ್ಳುತ್ತಿದ್ದು ವನ್ಯಪ್ರಾಣಿ ಪ್ರಿಯರು ಇತ್ತ ಧಾವಿಸುವಂತೆ ಮಾಡಿದೆ.
ಬಿಳಿಗಿರಿರಂಗನಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿ ವ್ಯಾಪ್ತಿಯಲ್ಲಿ ಆಗಾಗ್ಗೆ ಹುಲಿಗಳು ಕಾಣಿಸಿದರೂ ತಾಯಿ ಮತ್ತು ಮರಿಗಳು ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ಆದರೆ ಇತ್ತೀಚೆಗಷ್ಟೇ ಸಫಾರಿಗೆ ಹೋದವರಿಗೆ ತಾಯಿ ತನ್ನ ಎರಡು ಹುಲಿ ಮರಿಗಳೊಂದಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.
ತಾಯಿಯೊಂದಿಗೆ ಗಂಭೀರ ನಡಿಗೆಯಲ್ಲಿ ಬಂದ ಹುಲಿ ಮರಿಗಳೆರಡು ರಸ್ತೆಯಲ್ಲಿ ಅತ್ತ ಇತ್ತ ನೋಡುತ್ತಾ ಮಂಡಿಯೂರಿ ಕೂತಿದ್ದವು. ಮತ್ತೆ ಸ್ವಲ್ಪ ಹೊತ್ತು ಮಲಗಿದ್ದವು. ಅದೇ ವೇಳೆಗೆ ತಾಯಿ ಹುಲಿ ರಸ್ತೆಯಿಂದ ಎದ್ದು ಅರಣ್ಯದತ್ತ ತೆರಳಿದ್ದು ಅದನ್ನು ಮರಿಗಳೆರಡು ಹಿಂಬಾಲಿಸಿದ್ದವು. ಈ ವೇಳೆ ಮುದ್ದು ಮುದ್ದಾದ ಹುಲಿ ಮರಿಗಳು ನೋಡುಗರ ಗಮನಸೆಳೆದಿದ್ದವು.
ಇಂತಹ ದೃಶ್ಯಗಳು ಸಿಗುವುದು ಅಪರೂಪ ಆಗಿದ್ದು, ಸಫಾರಿಗೆ ತೆರಳಿದ ವೇಳೆ ಕಂಡು ಬಂದ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕ ರವಿಶಂಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಬಿಳಿಗಿರಿರಂಗನಬೆಟ್ಟದ ಬಗ್ಗೆ ಹೇಳ ಬೇಕೆಂದರೆ ಈ ತಾಣವು ಪ್ರಾಣಿ, ಪಕ್ಷಿ ಮತ್ತು ಸಸ್ಯ ಸಂಕುಲ, ಬೆಟ್ಟಗುಡ್ಡಗಳಿಂದ ಆವೃತವಾದ ನಿಸರ್ಗ ಸುಂದರವನ್ನು ಹೊಂದಿರುವ ಅರಣ್ಯಪ್ರದೇಶವಾಗಿದೆ. ಇಲ್ಲಿ ಶ್ರೀಗಂಧ, ಹೊನ್ನೆ, ಮತ್ತಿ, ಬೂರುಗ, ಬೀಟೆ, ಬನ್ನಿ, ಮೊದಲಾದ ಅಮೂಲ್ಯ ಮರಗಳಲ್ಲದೆ ಐತಿಹಾಸಿಕ ದೊಡ್ಡ ಮತ್ತು ಚಿಕ್ಕ ಸಂಪಿಗೆ ಇಲ್ಲಿನ ಪ್ರಮುಖ ಆಕರ್ಷಣೆ ಆಗಿದೆ. ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಗೆ ಸೇರುವ ಬೇಡಗುಳಿ, ಹೊನ್ನಮೇಟಿ, ಅತ್ತಿಖಾನಿ ಮೊದಲಾದ ಅರಣ್ಯ ಪ್ರದೇಶಗಳು ಸೇರುತ್ತವೆ.












Click it and Unblock the Notifications