ಅಭಿಷೇಕ್ ಹತ್ಯೆಗೆ ಟ್ವಿಸ್ಟ್; ಹೋಟೆಲ್ ಗ್ರಾಹಕನೇ ಹಣೆಗೆ ಗುಂಡಿಕ್ಕಿದ್ದ
ಮೈಸೂರು, ನವೆಂಬರ್ 30: ಅಮೆರಿಕಾದಲ್ಲಿ ಎಂ.ಎಸ್ ವ್ಯಾಸಂಗ ಮಾಡುತ್ತಿದ್ದ ಮೈಸೂರು ಯುವಕನೊಬ್ಬ ನಿನ್ನೆ ಅಪರಿಚಿತ ವ್ಯಕ್ತಿಯ ಗುಂಡಿನ ದಾಳಿಗೆ ಬಲಿಯಾಗಿದ್ದ ಘಟನೆ ನಡೆದಿದ್ದು, ಈ ಪ್ರಕರಣಕ್ಕೀಗ ತಿರುವು ದೊರೆತಿದೆ.
ಮೈಸೂರಿನ ಕುವೆಂಪುನಗರದ ಪಿ ಅಂಡ್ ಎಫ್ ಬ್ಲಾಕ್ ನಿವಾಸಿ ಸುರೇಶ್ ಚಂದ್ ಅವರ ಪುತ್ರ ಅಭಿಷೇಕ್ (25) ನಿನ್ನೆ ಅಮೆರಿಕದ ಹೋಟೆಲೊಂದರ ಬಳಿ ಅಪರಿಚಿತ ವ್ಯಕ್ತಿಯ ಗುಂಡಿನ ದಾಳಿಯಿಂದ ಮೃತಪಟ್ಟಿದ್ದರು.
ಅಭಿಷೇಕ್ ಅಮೆರಿಕಾದಲ್ಲಿ ವ್ಯಾಸಂಗಕ್ಕೆ ತೆರಳಿದ್ದು, ಬಿಡುವಿನ ವೇಳೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಆ ಹೋಟೆಲ್ ನ ಗ್ರಾಹಕನೇ ಅಭಿಷೇಕ್ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.

ಹೋಟೆಲ್ ನಲ್ಲಿ ಪಾರ್ಟ್ ಟೈಂನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಗೂ ಹೋಟೆಲ್ ನ ಗ್ರಾಹಕರೊಬ್ಬರಿಗೂ ರೂಂ ವಿಷಯವಾಗಿ ಮಾತಿನ ಚಕಮಕಿ ನಡೆದಿತ್ತು. ಕೆಲಸ ಮುಗಿಸಿದ ಬಳಿಕ ಅಭಿಷೇಕ್ ಹೊರಬರುವಾಗ ಅದೇ ಗ್ರಾಹಕ ಹಣೆಗೆ ರಿವಾಲ್ವರ್ ನಿಂದ ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಈ ದೃಶ್ಯ ಹೊಟೇಲ್ ನ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಆ ಫೂಟೇಜ್ ಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿರುವುದಾಗಿ ತಿಳಿದುಬಂದಿದೆ.












Click it and Unblock the Notifications