ಮೈಸೂರು: ಕಳ್ಳರ ಸಖ್ಯದಲ್ಲಿದ್ದ ಗಿರವಿ ಅಂಗಡಿ ಮಾಲೀಕ ಬಂಧನ
ಮೈಸೂರು, ಡಿಸೆಂಬರ್, 05: ಚಿನ್ನಾಭರಣ ಕದಿಯೋದು ಹೇಗೆ ಅಪರಾಧವೋ ಹಾಗೆ ಕಳ್ಳರಿಂದ ಚಿನ್ನಾಭರಣ ಖರೀದಿಸುವುದು ಕೂಡ ಅಪರಾಧವೇ.. ಇದು ಗೊತ್ತಿದ್ದರೂ ಹಣದಾಸೆಗೆ ಬೇರೆ ರಾಜ್ಯದ ದರೋಡೆಕೋರರಿಂದ ಚಿನ್ನಾಭರಣ ಖರೀದಿಸುತ್ತಿದ್ದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪುರಸಭಾ ಕಚೇರಿ ಸಮೀಪದ ಮಹಾದೇವ್ ಬ್ಯಾಂಕರ್ಸ್ ಗಿರವಿ ಅಂಗಡಿ ಮಾಲೀಕನನ್ನು ಶನಿವಾರ ಬಂಧಿಸಲಾಗಿದೆ.
ದರೋಡೆಕೋರರಿಂದ ಒಡವೆಗಳನ್ನು ಖರೀದಿಸುತ್ತಿದ್ದ ವ್ಯಕ್ತಿಯೇ ಜಯರಾಂ(50). ಈತ ಬೆಂಗಳೂರು, ಮೈಸೂರು, ಮುಂಬೈ, ಚೆನ್ನೈ, ಹೈದ್ರಾಬಾದ್ ಇನ್ನಿತರ ನಗರಗಳಲ್ಲಿ ಮನೆ, ಅಂಗಡಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ನೊಂದಿಗೆ ಸಂಪರ್ಕ ಹೊಂದಿದ್ದು, ಕಳ್ಳರೊಂದಿಗೆ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ.[ಸ್ವಂತ ಮನೆಗೆ ಕನ್ನ ಹಾಕಲು ಗೆಳೆಯನಿಗೆ ಕೀ ಕೊಟ್ಟಳು!]

ಘಟನೆ ವಿವರ:
ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಹೈಟೆಕ್ ಕಾರುಗಳಲ್ಲಿ ಸುತ್ತಾಡುತ್ತಾ ದೊಡ್ಡ ದೊಡ್ಡ ಅಂಗಡಿ ಮತ್ತು ಮನೆಗಳಿಗೆ ಕನ್ನ ಹಾಕುತ್ತಿದ್ದ ತಂಡವೊಂದು ತಾವು ದರೋಡೆ ಮಾಡುತ್ತಿದ್ದ ಚಿನ್ನಾಭರಣವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿದರೆ ಸಿಕ್ಕಿ ಬೀಳುವ ಭಯದಿಂದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಮಹಾದೇವ್ ಬ್ಯಾಂಕರ್ಸ್ ಗಿರವಿ ಅಂಗಡಿ ಮಾಲೀಕ ಜಯರಾಂಗೆ ನೀಡುತ್ತಿದ್ದರು.
ಕಳ್ಳರು ತಂದಿದ್ದ ಚಿನ್ನಾಭರಣಗಳನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದ ಜಯರಾಂ ಕಳ್ಳರಿಗೆ ಬ್ಯಾಂಕ್ ಖಾತೆ ಮೂಲಕ ಹಣ ಸಂದಾಯ ಮಾಡುತ್ತಿದ್ದನು. ಕಳೆದ ಕೆಲವು ವರ್ಷಗಳಿಂದ ಈ ವ್ಯವಹಾರ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿತ್ತು.[ತಮಿಳು ಸಿನಿಮಾ ನೋಡಿ ರಾಬರಿ ಮಾಡಿದವರು ಸಿಕ್ಕಿಬಿದ್ರು]
ಆದರೆ ಒಂದು ದಿನ ಬೆಂಗಳೂರಿನಲ್ಲಿ ಹೈಟೆಕ್ ಕಾರುಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಕಳವು ಮಾಡಿದ ಮಾಲನ್ನು ಕೆ.ಆರ್.ಪೇಟೆಯ ಜಯರಾಂ ಎಂಬುವವರಿಗೆ ಮಾರಿರುವ ಬಗ್ಗೆ ಬಾಯಿಬಿಟ್ಟಿದ್ದರು.
ಕಳ್ಳರ ಮಾಹಿತಿಯಂತೆ ಪೊಲೀಸರು ಕೆ.ಆರ್.ಪೇಟೆ ಜಯರಾಂನನ್ನು ಭೇಟಿಯಾಗಿ ಒಡವೆಗಳನ್ನು ನೀಡುವಂತೆ ಕೇಳಿದ್ದರು. ಆದರೆ ನನಗೇನು ಗೊತ್ತಿಲ್ಲ. ನನಗೆ ಯಾರ ಸಂಪರ್ಕವೂ ಇಲ್ಲ ಎಂದು ಹೇಳಿ ಪೊಲೀಸರನ್ನು ಹಿಂದಕ್ಕೆ ಕಳುಹಿಸಿದ್ದನು.[ಲಕ್ಷಾಂತರ ಮೌಲ್ಯ ಚಿನ್ನ ದೋಚಿದ್ದ ಕುಖ್ಯಾತ ಕಳ್ಳನ ಬಂಧನ]
ಬಳಿಕ ದರೋಡೆಕೋರರ ಬ್ಯಾಂಕ್ ಖಾತೆ ಪುಸ್ತಕ ಮತ್ತಿತರ ದಾಖಲೆ ವಶಕ್ಕೆ ಪಡೆದ ಪೊಲೀಸರು ಹಣ ನೀಡುತ್ತಿರುವವರ ಬಗ್ಗೆ ತನಿಖೆ ನಡೆಸಿದಾಗ ಜಯರಾಂ ಹಣವನ್ನು ಕಳ್ಳರ ಖಾತೆಗೆ ಜಮಾ ಮಾಡಿರುವುದು ತಿಳಿದಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಮೈಕೋ ಲೇಔಟ್ ಪೊಲೀಸರು ಆರೋಪಿ ಜಯರಾಂನನ್ನು ಬಂಧಿಸಿ ಆತನಿಂದ ಒಡವೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.












Click it and Unblock the Notifications