ಮೈಸೂರು ಕರಗ ಆರಂಭವಾಗಿದ್ದೇಗೆ? ಇಲ್ಲಿದೆ ರೋಚಕವಾದ ಐತಿಹಾಸಿಕ ಕಥೆ
ಮೈಸೂರು, ಏಪ್ರಿಲ್ 28: ಮಿನಿ ದಸರಾ ಎಂದೇ ಖ್ಯಾತಿ ಗಳಿಸಿರುವ ನಜರ್ಬಾದ್‌ನ ಇಟ್ಟಿಗೆ ಗೂಡಿನಲ್ಲಿರುವ ಶ್ರೀ ಮಾರಮ್ಮನವರ ದೇವಸ್ಥಾನ(ಕರಗ ದೇವಸ್ಥಾನ)ದ ಕರಗ ಮಹೋತ್ಸವ ಈ ಬಾರಿ ಏಪ್ರಿಲ್ 29ರಿಂದ ಮೇ 4ರವರೆಗೆ ನಡೆಯಲಿದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇನ್ನು ಮೈಸೂರು ಕರಗಕ್ಕೆ ಶತಮಾನದ ಇತಿಹಾಸವಿದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಶತಮಾನಗಳ ಹಿಂದೆ ಊರನ್ನು ಸಾಂಕ್ರಾಮಿಕ ರೋಗ ಆವರಿಸಿ ನಿತ್ಯ ಹತ್ತಾರು ಮಂದಿ ಸಾವನ್ನಪ್ಪಲು ಪ್ರಾರಂಭಿಸಿದರು. ಒಂದೆಡೆ ಮನೆ ಮಂದಿ ರೋಗದಿಂದ ನರಳುತ್ತಿದ್ದರೆ ಮತ್ತೊಂದೆಡೆ ಮಳೆ ಇಲ್ಲದೆ ಕ್ಷಾಮ ಆವರಿಸಿತ್ತು. ಇವೆಲ್ಲದರ ಜತೆಗೆ ರೋಗದಿಂದ ನಿತ್ಯ ಮೃತ ಪಡುವವರ ಅಂತ್ಯಸಂಸ್ಕಾರ ನಡೆಸುವುದೇ ಊರ ಜನರ ನಿತ್ಯ ಕಾಯಕವಾಗಿ ಬಿಟ್ಟಿತ್ತು. ಹಾಗಾಗಿ ಊರಿನ ಜನರೆಲ್ಲರೂ ಸೇರಿ ನಾಡದೇವತೆಯ ಮೊರೆ ಹೋಗಲು ನಿರ್ಧರಿಸಿದರು. ಆಗ ಪ್ರಾರಂಭವಾದುದೇ ಮೈಸೂರು ಕರಗ ಮಹೋತ್ಸವ.

ಮೈಸೂರು ಕರಗ ಮಹೋತ್ಸವಕ್ಕೆ ತಿಂಗಳಿರುವಂತೆ ಯುಗಾದಿಯ ಅಮಾವಾಸ್ಯೆ ನಂತರದ ಶ್ರೀ ಮಾರಿಯಮ್ಮ ದೇವಿಗೆ ಊರಿನ ಸಕಲರೂ ಅರಿಶಿನ ನೀರಿನ ಅಭಿಷೇಕ ನೆರವೇರಿಸಿ, ದೇವಿಗೆ ತಂಪೆರದು ಸಂಜೆ ದೇವಿಯ ತವರು ಮನೆಯಾದ ಮಡಿವಾಳರ ಮನೆಯಲ್ಲಿ ಸಾಂಪ್ರದಾಯಿಕ ವಿಭೂತಿ ಪೂಜೆ ನೆರವೇರಿಸಿ ಎಲ್ಲರಿಗೂ ವಿಭೂತಿ ಪ್ರಸಾದ ವಿನಿಯೋಗದೊಂದಿಗೆ ಕರಗ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯುತ್ತದೆ.
ಕರಗವು ಇಟ್ಟಿಗೆಗೂಡಿನ ಎಲ್ಲ ಬೀದಿಗಳಲ್ಲೂ ಸಂಚರಿಸಿ ಪೂಜೆ ಸ್ವೀಕರಿಸಲು ಬಂದಾಗ ಸಾರ್ವಜನಿಕರು ತಮ್ಮ ಮನೆಯಲ್ಲಿ ಕೂರಿಸಿ ದೇವಿಗೆ ಹಾಲು, ಮಜ್ಜಿಗೆ, ಪಾನಕ, ಕೋಸಂಬರಿ ಹೀಗೆ ನಾನಾ ವಿಧದ ಪ್ರಸಾದಗಳನ್ನು ನೈವೇದ್ಯ ಮಾಡಿ ಪೂಜಿಸುತ್ತಾರೆ. ಹರಕೆ ಇರುವ ಎಲ್ಲರ ಮನೆಯಲ್ಲೂ ಕರಗ ಇಳಿಸಲಾಗುತ್ತದೆ.

ಈ ಬಾರಿ ಮೇ 3ರಂದು ಕರಗ ಮೆರವಣಿಗೆ ಆಯೋಜಿಸಲಾಗಿದೆ. ಅಂದು ರಾತ್ರಿ 8ಕ್ಕೆ ದೇವಸ್ಥಾನದಿಂದ ಹೊರಡುವ ಕರಗ ನಗರದ ಪ್ಯಾಲೇಸ್ ಆಫೀಸ್ ರಸ್ತೆ, ನೂರಡಿ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ನಲ್ಲಪ್ಪ ಠಾಣಾ ರಸ್ತೆ, ಶಿವರಾಂಪೇಟೆ, ಸಯ್ಯಾಜಿರಾವ್ ರಸ್ತೆ, ಮಿಷನ್ ಆಸ್ಪತ್ರೆ ರಸ್ತೆ, ಕಬೀರ್ ರಸ್ತೆ, ಕಾಳಮ್ಮ ಗುಡಿ ರಸ್ತೆ, ಇರ್ವಿನ್ ರಸ್ತೆ, ಕುರುಬಗೇರಿ, ಕುಂಬಾರಗೇರಿ, ಅಶೋಕ ರಸ್ತೆ, ನಜರ್ಬಾದ್, ಮೃಗಾಲಯ ರಸ್ತೆಯ ಮಾರ್ಗವಾಗಿ ಸಾಗಿ ಮೇ 4ರಂದು ಬೆಳಗ್ಗೆ 9ಕ್ಕೆ ದೇವಸ್ಥಾನಕ್ಕೆ ಹಿಂತಿರುಗುತ್ತದೆ. ಮೆರವಣಿಗೆಗೆ ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್ ಚಾಲನೆ ನೀಡಲಿದ್ದಾರೆ.
ಮೆರವಣಿಗೆಯಲ್ಲಿ ನಾದಸ್ವರ, ಬ್ಯಾಂಡ್ ಸೆಟ್, ವೀರಗಾಸೆ, ದೇವರಕುಣಿತ, ಕಂಸಾಳೆ, ಕೊಂಬು, ಕಹಳೆ, ಗಾರುಡಿಗೊಂಬೆ, ಚನ್ನಪಟ್ಟಣದ ತಮಟೆ ಸೇರಿದಂತೆ ಹಲವು ತಂಡಗಳು ಭಾಗವಹಿಸಲಿವೆ. ಬೆಂಗಳೂರಿನ ಶ್ರೀ ಅಂಗಾಳ ಪರಮೇಶ್ವರಿ ಮತ್ತು ಕಾಳಿಕಾದೇವಿ ದೇವಸ್ಥಾನ ತಂಡದಿಂದ ನವೀನ ಪಂಬೈ, ಸಿಲುಂಬು, ಸಂಗೀತ ನಾಟ್ಯ ನಡೆಯಲಿದೆ. ಕರಗ ಮಹೋತ್ಸವದ ಅಂಗವಾಗಿ ಏಪ್ರಿಲ್ 29ರಿಂದ ಮೇ 5ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮೇ 4ರಂದು ಮಧ್ಯಾಹ್ನ 12ಕ್ಕೆ ಅಂಬಲಿ ಪೂಜೆ, ನಂತರ ಅರಿಶಿನ ಓಕುಳಿ ಆಡಲು ಕರಗವು ದೇವ ಸ್ಥಾನದಿಂದ ಹೊರಡಲಿದೆ. ಸಂಜೆ 4ಕ್ಕೆ ಸಾರ್ವಜನಿಕರಿಂದ ತಂಬಿಟ್ಟಿನ ಆರತಿ ನೆರವೇರಲಿದೆ. ರಾತ್ರಿ 7ಕ್ಕೆ ಕರಗ ವು ದೇವಸ್ಥಾನದಿಂದ ಹೊರಟು ಇಟ್ಟಿಗೆಗೂಡಿನ ಎಲ್ಲ ಬೀದಿಗಳಲ್ಲಿ ಆರತಿ ಪೂಜೆ ಸ್ವೀಕರಿಸಿ ದೇವಸ್ಥಾನ ತಲುಪಲಿದೆ. ರಾತ್ರಿ 12ಕ್ಕೆ ಮಹಾ ನೈವೇದ್ಯದೊಂದಿಗೆ ಮಹಾಮಂಗಳಾರತಿ ನೆರವೇರಲಿದೆ. ಮೇ 5ರಂದು ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ ಕರಗವನ್ನು ಪಶ್ಚಿಮ ವಾಹಿನಿಯಲ್ಲಿ ವಿಸರ್ಜಿಸಲಾಗುವುದು.












Click it and Unblock the Notifications