ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂರಾಬಟ್ಟೆಯಾದ ವಿಭೂತಿ ತಯಾರಕ ಹಿರೇಮಠ ಜನಾಂಗದ ಬದುಕು!

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಜೂನ್ 21: ಯಾಂತ್ರಿಕ ಯುಗದ ಭರಾಟೆಯಲ್ಲಿ ಕುಲಕಸುಬುಗಳು ಸದ್ದಿಲ್ಲದೆ ನೇಪಥ್ಯಕ್ಕೆ ಸರಿಯುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿದೆ. ಆದರೂ ಅಲ್ಲಿ ಇಲ್ಲಿ ಎನ್ನುವಂತೆ ಕೆಲವರು ತಮ್ಮ ತಾತ ಮುತ್ತಾತಂದಿರು ಮಾಡುತ್ತಿದ್ದುದನ್ನು ಮುಂದುವರೆಸುತ್ತಿದ್ದಾರೆ. ಆದರೆ ಇವತ್ತಿನ ದಿನಗಳಲ್ಲಿ ಕುಲಕಸುಬು ಮಾಡುತ್ತಿರುವವರ ಬದುಕು ಮಾತ್ರ ಮೂರಾಬಟ್ಟೆಯಾಗಿದೆ.

ಇದಕ್ಕೆ ಮೈಸೂರಿನಲ್ಲಿ ವಿಭೂತಿ ತಯಾರಿಕೆಯ ಕುಲಕಸುಬು ಮಾಡುತ್ತಿರುವ ಹಿರೇಮಠ ಜನಾಂಗವೇ ಸಾಕ್ಷಿಯಾಗಿದೆ. ಶಿವನ ಪೂಜೆ ಸೇರಿದಂತೆ ಹಲವು ಶುಭ ಸಮಾರಂಭಗಳಲ್ಲಿ ವಿಭೂತಿ ಬೇಕೇ ಬೇಕು. ಅದರಲ್ಲೂ ಶಿವನ ಆರಾಧಕರು ವಿಭೂತಿಯನ್ನು ಹೆಚ್ಚಾಗಿ ಬಳಸುತ್ತಾರೆ. ಸಾಮಾನ್ಯವಾಗಿ ಎಲ್ಲ ದೇವಾಲಯಗಳಲ್ಲೂ ವಿಭೂತಿ ಇದ್ದೇ ಇರುತ್ತದೆ.

 Mysuru: Demand drops for ‘Traditional Vibhuti’ put off people from good living

ವಿಭೂತಿ ದೈವಿಕ ಕಾರ್ಯಕ್ಕೆ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಇದನ್ನು ಹಿರೇಮಠ ಜನಾಂಗದ ಕೆಲವೇ ಕೆಲವರು ಮಾತ್ರ ತಯಾರಿಸುತ್ತಾರೆ. ಇದು ಅವರ ಕುಲಕಸುಬಾಗಿದ್ದು, ಇವತ್ತಿನ ಪರಿಸ್ಥಿತಿಯಲ್ಲಿ ವಿಭೂತಿ ತಯಾರಿಸಿ ಅದನ್ನು ಮಾರಿ ಬಂದ ಹಣದಿಂದ ಜೀವನ ಸಾಗಿಸುವುದು ಕಷ್ಟ ಎನ್ನುವುದು ಅವರನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ತಿಳಿಯುತ್ತದೆ.

ಮೈಸೂರು ಅರಸರ ಕಾಲದಲ್ಲಿ ಪಾರಂಪರಿಕ ನಗರಿ ಮೈಸೂರಿನಲ್ಲಿ ವಿಭೂತಿ ತಯಾರಿಸುವ ಜನಾಂಗಕ್ಕೆ ಹೆಚ್ಚಿನ ಮನ್ನಣೆ ನೀಡಲಾಗಿತ್ತು. ಅವರು ತಯಾರಿಸಿದ ವಿಭೂತಿ ಅರಮನೆಯ ಸಕಲ ಕಾರ್ಯಕ್ಕೆ ಬಳಕೆಯಾಗುತ್ತಿತ್ತು. ತದ ನಂತರದ ಕಾಲಗಳಲ್ಲಿ ವಿಭೂತಿ ಬಳಕೆ ಒಂದಷ್ಟು ಇಳಿಮುಖವಾಯಿತು. ಜತೆಗೆ ಯಂತ್ರಗಳಿಂದ ತಯಾರಾಗಿ ದೂರದಿಂದ ಬರತೊಡಗಿದವು. ಇದರಿಂದ ಕೈಯ್ಯಿಂದ ಕಷ್ಟಪಟ್ಟು ತಯಾರಿಸಿದ ವಿಭೂತಿಗಳಿಗೆ ಬೇಡಿಕೆ ಒಂದಷ್ಟು ಕಡಿಮೆಯಾಯಿತು ಎಂದರೆ ತಪ್ಪಾಗಲಾರದು.

 Mysuru: Demand drops for ‘Traditional Vibhuti’ put off people from good living

ಇವತ್ತು ನಾವು ವಿಭೂತಿ ತಯಾರಿಸುವ ಕುಟುಂಬವನ್ನು ರಾಜ್ಯದ ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಾಣಬಹುದಾಗಿದೆ. ಮೈಸೂರಿನ ಹುಲ್ಲಹಳ್ಳಿ ಮತ್ತು ಗೌರಿಶಂಕರನಗರದಲ್ಲಿ ವಿಭೂತಿ ತಯಾರಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಾ ಬಂದಿರುವ ಕುಟುಂಬಗಳದ್ದು ಶೋಚನೀಯ ಬದುಕಾಗಿದೆ.

ಒಂದೆಡೆ ಕುಲಕಸುಬನ್ನು ಬಿಡುವಂತಿಲ್ಲ. ಮತ್ತೊಂದೆಡೆ ಇದನ್ನು ಮಾಡಿ ನೆಮ್ಮದಿಯಾಗಿ ಜೀವನ ಸಾಗಿಸುವಂತೆಯೂ ಇಲ್ಲ. ಆದರೂ ಅನಿವಾರ್ಯವಾಗಿ ತಮ್ಮ ಮನೆಯಲ್ಲೇ ತಯಾರಿಸಿ ಬಳಿಕ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹೀಗೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕೊಂಡೊಯ್ದು ಮಾರಾಟ ಮಾಡಿ ಜೀವನ ನಡೆಸಿಕೊಂಡು ಬರುತ್ತಿರುವುದನ್ನು ಕಾಣಬಹುದಾಗಿದೆ.

ಮೈಸೂರಿನ ಗೌರಿಶಂಕರ ನಗರದಲ್ಲಿ ತಯಾರಾಗುವ ವಿಭೂತಿಗೆ ಮೂರು ತಲೆಮಾರುಗಳ ಇತಿಹಾಸ ಇರುವುದನ್ನು ಕಾಣಬಹುದು. ಇಲ್ಲಿ ಸದಾಶಿವ ಹಿರೇಮಠ್, ರಾಚಯ್ಯ ಹಿರೇಮಠ್ ಸಹೋದರರು ಕುಲಕಸುಬಾದ ವಿಭೂತಿ ತಯಾರಿಕೆಯನ್ನು ಮಾಡುತ್ತಿದ್ದು, ಕಷ್ಟದ ನಡುವೆಯೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

 Mysuru: Demand drops for ‘Traditional Vibhuti’ put off people from good living

ವಿಭೂತಿಗೆ ಬೇಕಾದ ಕಚ್ಚಾವಸ್ತುವನ್ನು ಆಂಧ್ರದಿಂದ ತರಲಾಗುತ್ತದೆ. ಬಳಿಕ ವಿವಿಧ ನಮೂನೆಗಳಲ್ಲಿ ತಯಾರಿಸಿ ಅದನ್ನು ಕಟ್ಟುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಾರೆ. ಆದರೆ ವ್ಯಾಪಾರಸ್ಥರು ಇವರಿಂದ ಕಡಿಮೆ ಬೆಲೆಗೆ ಖರೀದಿಸಿ ತಾವು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಾರೆ ಎನ್ನುವುದು ಇವರ ಅಳಲಾಗಿದೆ. ಹಸುವಿನ ಸೆಗಣಿಯಿಂದ ತಯಾರಿಸಿದ ವಿಭೂತಿ ಶ್ರೇಷ್ಠವಾಗಿದೆ. ಆದರೆ ಅದರ ಬಗ್ಗೆ ಜನಕ್ಕೆ ಗೊತ್ತಿಲ್ಲ. ಬದಲಿಗೆ ಸುಂದರವಾಗಿ ಕಾಣುವ ವಿಭೂತಿಗೆ ಮೊರೆಹೋಗುವುದರಿಂದ ಯಂತ್ರಗಳಿಂದ ತಯಾರಿಸಿದ ವಿಭೂತಿಗೆ ಬೇಡಿಕೆ ಹೆಚ್ಚು. ಪರಿಣಾಮ ಕುಲಕಸುಬಾಗಿ ಮಾಡಿಕೊಂಡು ಬರುತ್ತಿರುವ ಕುಟುಂಬಗಳ ಜೀವನ ಕಷ್ಟವಾಗುತ್ತದೆ.

ಮುಜರಾಯಿ ಇಲಾಖೆ ನಮಗೆ ಪ್ರೋತ್ಸಾಹ ನೀಡಿದರೆ ಮುಂದಿನ ದಿನಗಳಲ್ಲೂ ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಬಹುದು ಇಲ್ಲದೆ ಇದ್ದರೆ ಹೊಟ್ಟೆಪಾಡಿಗಾಗಿ ಬೇರೆ ಉದ್ಯೋಗ ಮಾಡುವುದು ಅನಿವಾರ್ಯವಾಗುತ್ತದೆ ಎಂಬುದು ವಿಭೂತಿ ತಯಾರಕ ಸದಾಶಿವ ಹಿರೇಮಠ್ ಅವರ ಅಭಿಪ್ರಾಯವಾಗಿದೆ. ವಿಭೂತಿ ಬಳಿದು ಕಷ್ಟವನ್ನು ಪರಿಹರಿಸು ದೇವಾ ಎಂದು ಜನ ಬೇಡಿಕೊಳ್ಳುತ್ತಾರೆ. ಆದರೆ ವಿಭೂತಿ ತಯಾರಿಸಿ ಜೀವನ ಸಾಗಿಸುವವರ ಬದುಕೇ ಮೂರಾಬಟ್ಟೆಯಾಗುತ್ತಿರುವುದು ಮಾತ್ರ ನೋವಿನ ಸಂಗತಿಯಾಗಿದೆ.

English summary
As demand drops for ‘Traditional Vibhuti’ put off Hiremat Community in Mysuru from good living. They demand help from Mujirayi department to sell their Vibhutis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X