ಜಂಬೂಸವಾರಿ ಯಶಸ್ವಿ: ಮಾವುತರು ಹಾಗೂ ಕಾವಾಡಿಗಳಿಗೆ ಗೌರವಧನ ವಿತರಣೆ
ಮೈಸೂರು, ಅಕ್ಟೋಬರ್ 27: ನಾಡಹಬ್ಬ ಮೈಸೂರು ದಸರಾದ ಜಂಬೂಸವಾರಿಯನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದ ಗಜಪಡೆಯ ಮಾವುತರು ಹಾಗೂ ಕಾವಾಡಿಗಳಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಅವರು ಗೌರವಧನ ವಿತರಿಸಿದರು.
ಮಂಗಳವಾರ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಅಭಿಮನ್ಯು ನೇತೃತ್ವದ ವಿಕ್ರಮ, ಗೋಪಿ, ವಿಜಯ, ಕಾವೇರಿ ಆನೆಗಳಿಗೆ ಪೂಜಾ ಕಾರ್ಯ ನೆರವೇರಿಸಿ, ಕಬ್ಬು, ಹಣ್ಣು, ಬೆಲ್ಲವನ್ನು ಸಚಿವರು ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್, ಮೊದಲ ಬಾರಿಗೆ ಅಭಿಮನ್ಯು ಆನೆಯು ಚಿನ್ನದ ಅಂಬಾರಿ ಹೊತ್ತು ಸಾಗಿ ಯಶಸ್ವಿಗೊಳಿಸಿದೆ. ಸಂಪ್ರದಾಯದಂತೆ ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಭಾಗವಹಿಸಿದ ಗಜಪಡೆಗೆ ಪೂಜೆ ಸಲ್ಲಿಸಿ, ಮಾವುತರು ಹಾಗೂ ಕಾವಾಡಿಗರಿಗೆ ಗೌರವಧನ ವಿತರಿಸಲಾಯಿತು ಎಂದರು.

ಮಾವುತರು ಹಾಗೂ ಕಾವಾಡಿಗರಿಗೆ ಗೌರವಧನವಾಗಿ 10 ಸಾವಿರ ರುಪಾಯಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸೌಲಭ್ಯ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ ರಾಜೀವ್, ಡಿಸಿಎಫ್ ಅಲೆಕ್ಸಾಂಡರ್, ಗಜಪಡೆಯ ವೈದ್ಯ ಡಾ.ನಾಗರಾಜ್ ಇತರರು ಉಪಸ್ಥಿತರಿದ್ದರು












Click it and Unblock the Notifications