Mysuru Dasara Jamboo Savari 2024: ಜಂಬೂಸವಾರಿಗೆ ಗಜಪಡೆ ಸಜ್ಜು.. ಅರ್ಜುನನ ಸ್ಥಾನ ತುಂಬಲಿದೆ ಈ ಆನೆ
Mysuru Dsara Jamboo Savari 2024: ಈಗಾಗಲೇ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಇನ್ನು ಐತಿಹಾಸಿಕ ಮೈಸೂರು ದಸರಾದ ಪ್ರಮುಖ ಘಟ್ಟವಾಗಿರುವ ಮತ್ತು ಬಹುಮುಖ್ಯ ಆಕರ್ಷಣೆಯಾಗಿರುವ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು, ಜಂಬೂಸವಾರಿಯನ್ನು ಯಶಸ್ವಿಗೊಳಿಸಲು ಅಂಬಾರಿ ಹೊರಲು ಅಭಿಮನ್ಯು ಸೇರಿದಂತೆ ಎಲ್ಲ ಗಜಪಡೆಗಳು ಸರ್ವ ರೀತಿಯಲ್ಲಿ ತಯಾರಾಗುತ್ತಿವೆ.
ಈಗಾಗಲೇ ಎಲ್ಲ ರೀತಿಯ ಕಠಿಣ ತಾಲೀಮನ್ನು ಮುಗಿಸಿದ್ದು, ಇನ್ನೇನಿದ್ದರೂ ಜಂಬೂ ಸವಾರಿಯ ದಿನ ಚಿನ್ನದ ಅಂಬಾರಿ ಹೊತ್ತು ಸಾಗುವುದಷ್ಟೇ ಬಾಕಿಯಿದೆ. ಜಂಬೂಸವಾರಿಯಂದು ಅಭಿಮನ್ಯು ಹೊರತು ಪಡಿಸಿ ಉಳಿದ ಗಜಪಡೆಗಳ ಪೈಕಿ ಕೆಲವು ಆನೆಗಳಿಗೆ ಮುಖ್ಯವಾದ ಜವಬ್ದಾರಿಯನ್ನು ವಹಿಸಲಾಗುತ್ತಿದೆ.

ಕಳೆದ ಒಂದೂವರೆ ತಿಂಗಳಿಗೂ ಹೆಚ್ಚಿನ ಕಾಲ ಅರಮನೆ ಆವರಣದಲ್ಲಿ ಬೀಡು ಬಿಟ್ಟು ತಾಲೀಮು ನಡೆಸಿರುವ ಗಜಪಡೆ ಎಲ್ಲಾ ರೀತಿಯಲ್ಲಿಯೂ ಸಮರ್ಥವಾಗಿವೆ. ಜೊತೆಗೆ ಇಲ್ಲಿನ ಪೌಷ್ಠಿಕ ಆಹಾರಗಳನ್ನು ಸೇವಿಸಿ ಆರೋಗ್ಯವಾಗಿವೆ. ನಗರ ಜೀವನಕ್ಕೆ ಒಗ್ಗಿಕೊಂಡಿರುವ ಗಜಪಡೆ ಜನಸಾಗರದ ನಡುವೆ ಯಾವುದೇ ಗೊಂದಲಕ್ಕೊಳಗಾಗದೆ ಹೆಜ್ಜೆ ಹಾಕುವ ಸಾಮರ್ಥ್ಯ ಬೆಳೆಸಿಕೊಂಡಿದೆ. ಜಂಬೂಸವಾರಿಗೆ ಹತ್ತಿರವಿರುವಾಗಲೇ ಆನೆಗಳ ತೂಕ ಪರೀಕ್ಷೆ ಮಾಡಲಾಗಿದ್ದು, ಎಲ್ಲಾ ಆನೆಗಳ ತೂಕ ಈ ಮೊದಲಿಗಿಂತ ಹೆಚ್ಚಾಗಿರುವುದು ಕಂಡು ಬಂದಿದೆ.
ಎರಡನೇ ತೂಕ ಪರೀಕ್ಷೆಯಲ್ಲಿ ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಎಲ್ಲವೂ ತೂಕ ಹೆಚ್ಚಿಸಿಕೊಂಡು ಸಿದ್ಧಗೊಂಡಿದ್ದು, ಕ್ಯಾಪ್ಟನ್ ಅಭಿಮನ್ಯು ಅತಿ ಹೆಚ್ಚು ತೂಕ ತೂಗಿದರೆ, ಭೀಮ ಕಳೆದ ಬಾರಿಗಿಂತ ಬರೋಬ್ಬರಿ 435 ಕೆ.ಜಿ. ತೂಕ ಹೆಚ್ಚಿಸಿಕೊಂಡಿರುವುದು ವಿಶೇಷವಾಗಿದೆ.
ಮೊದಲ ತೂಕ ಪರೀಕ್ಷೆಯಲ್ಲಿ 5,560 ಕೆ.ಜಿ. ತೂಕವಿದ್ದ ಅಭಿಮನ್ಯು ಎರಡನೇ ಪರೀಕ್ಷೆಯಲ್ಲಿ 5,820, ಕಿರಿಯ ಆನೆಗಳಲ್ಲಿ ಒಂದಾದ ಮತ್ತಿಗೋಡು ಆನೆ ಶಿಬಿರದ ಭೀಮ ಒಂದೂವರೆ ತಿಂಗಳಲ್ಲಿ ಬರೋಬ್ಬರಿ 435 ಕೆ.ಜಿ. ತೂಕ ಹೆಚ್ಚಿಸಿಕೊಂಡಿದೆ. ಈ ಹಿಂದೆ ಅಂದರೆ, ಮೊದಲ ತೂಕ ಪರೀಕ್ಷೆಯಲ್ಲಿ 4,945 ಕೆ.ಜಿ. ಇದ್ದನಾದರೂ ಈಗ 5,380 ಕೆ.ಜಿ ಹೆಚ್ಚಾಗಿದ್ದಾನೆ
ಉತ್ತಮ ಆರೈಕೆಯಲ್ಲಿ ಗಜಪಡೆ: ಇನ್ನು ಏಕಲವ್ಯನ ತೂಕ 4,730ರಿಂದ 5,095ಕ್ಕೆ ಹೆಚ್ಚಾಗಿದ್ದು, 365 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಾನೆ. ಪ್ರಶಾಂತ್ 4,875ರಿಂದ 5,240 ಕೆ.ಜಿ. ಹೆಚ್ಚಾಗಿ 365 ಕೆಜಿ ಹೆಚ್ಚಾದರೆ, ಸುಗ್ರೀವನ ತೂಕ 5,190 ಕೆಜಿಯಿಂದ 5,545 ಹೆಚ್ಚಾಗಿ, 355 ತೂಕ ಹೆಚ್ಚಿಸಿಕೊಂಡಿದ್ದಾನೆ.
ಗೋಪಿ 310, ರೋಹಿತ್ 305, ಕಂಜನ್ 210, ಮಹೇಂದ್ರ 240, ಹಿರಣ್ಯ 230, ಧನಂಜಯ 100 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಗಜಪಡೆಯ ಹಿರಿಯ ಸದಸ್ಯೆ ವರಲಕ್ಷ್ಮಿ ತೂಕದಲ್ಲಿಯೂ ಸ್ವಲ್ಪ ಮಟ್ಟಿಗೆ ಅಂದರೆ 60 ಕೆ.ಜಿ. ಹೆಚ್ಚಾಗಿದೆ. ಇದೆಲ್ಲವನ್ನು ಗಮನಿಸಿದರೆ ಗಜಪಡೆಯ ಆರೈಕೆ ಸುಸೂತ್ರವಾಗಿ ನಡೆದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಮುಂದೆ ಮೂರ್ನಾಲ್ಕು ದಿನಗಳಷ್ಟೇ ಜಂಬೂಸವಾರಿಗೆ ಬಾಕಿಯಿದೆ. ಆದ್ದರಿಂದ ಮುಂದಿನ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಅಲ್ಲದೆ, ಮೇಲ್ನೋಟಕ್ಕೆ ನಮಗೆ ಅಂಬಾರಿ ಹೊತ್ತು ಸಾಗುವ ಅಭಿಮನ್ಯು ಮಾತ್ರ ಕಾಣಿಸಿದರೂ ಅದರಾಚೆಗೆ ಇತರ ಗಜಪಡೆಗಳು ಕೂಡ ಹಲವು ರೀತಿಯ ಜವಬ್ದಾರಿಗಳನ್ನು ನೀಡಲಾಗುತ್ತಿದ್ದು, ಅದನ್ನು ಅವುಗಳು ನಿಭಾಯಿಸಿದಾಗ ಮಾತ್ರ ಜಂಬೂಸವಾರಿ ಯಶಸ್ವಿಯಾಗಿ ನಡೆಯಲು ಸಾಧ್ಯವಾಗುತ್ತದೆ.
ಗಜಪಡೆಗಳಿಗೆ ವಿವಿಧ ಜವಬ್ದಾರಿ ಹಂಚಿಕೆ: ಇನ್ನು ಜಂಬೂಸವಾರಿಯನ್ನು ಮುನ್ನಡೆಸುವ ಜವಬ್ದಾರಿ ನಿಶಾನೆ ಆನೆಯದ್ದಾಗಿರುತ್ತದೆ. ಈ ಹಿಂದೆ ಅರ್ಜುನ ಅದನ್ನು ವಹಿಸಿಕೊಂಡಿದ್ದನು. ಈ ಬಾರಿ ಆ ಸ್ಥಾನವನ್ನು ಧನಂಜಯ ಆನೆ ತುಂಬಲಿದೆ. ನಂತರ ನೌಫತ್ ಆನೆಯಾಗಿ ಗೋಪಿ ಸಾಗಲಿದ್ದಾನೆ. ಅಂಬಾರಿ ಹೊತ್ತು ಸಾಗುವ ಅಭಿಮನ್ಯುಗೆ ಅಭಿಮನ್ಯುಗೆ ಹಿರಣ್ಯ ಹಾಗೂ ಲಕ್ಷ್ಮಿ ಆನೆಗಳು ಕುಮ್ಕಿ ಆನೆಗಳಾಗಿ ಸಾಥ್ ನೀಡಲಿವೆ.
ಈ ಬಾರಿಯ ದಸರಾ ಮಹೋತ್ಸವಕ್ಕೆ 14 ಆನೆಗಳು ಬಂದಿವೆ. ಆದರೂ ಈ ಪೈಕಿ ಎಲ್ಲಾ ಆನೆಗಳು ಜಂಬೂಸವಾರಿಯಲ್ಲಿ ಭಾಗವಹಿಸದೆ, 9 ಆನೆಗಳು ಭಾಗವಹಿಸಲಿವೆ ಎಂದು ಹೇಳಲಾಗುತ್ತಿದೆ. ಉಳಿದ ಆನೆಗಳು ಭಾಗಿ ಆಗುತ್ತವೆಯಾ ಎಂಬುದು ಮುಂದೆ ಗೊತ್ತಾಗಲಿದೆ.
ಅದೇನೇ ಇರಲಿ ಒಂದೆರಡು ದಿನಗಳಲ್ಲಿ ಜಂಬೂಸವಾರಿಯ ರೂಪುರೇಷೆಗಳು ಗೊತ್ತಾಗಲಿವೆ. ಅರಣ್ಯಾಧಿಕಾರಿಗಳು, ಮಾವುತರು, ಕಾವಾಡಿಗಳು ಗಜಪಡೆಗಳನ್ನು ಆರೈಕೆ ಮಾಡಿ, ತಾಲೀಮು ನಡೆಸಿ ಅವುಗಳನ್ನು ಸಜ್ಜುಗೊಳಿಸಲು ಶ್ರಮವಹಿಸಿದ್ದಾರೆ. ಜೊತೆಗೆ ಮುಂದಿನ ದಿನಗಳು ತುಂಬಾ ಜವಬ್ದಾರಿಯ ದಿನಗಳಾಗಿದ್ದು, ಎಲ್ಲ ರೀತಿಯ ಕ್ರಮಗಳ ಜೊತೆಗೆ ಜಂಬೂಸವಾರಿಯನ್ನು ಯಶಸ್ವಿಗೊಳಿಸುವತ್ತಾ ಗಮನಹರಿಸಿರುವುದು ಕಂಡುಬರುತ್ತಿದೆ.












Click it and Unblock the Notifications