ಅಂಬಾರಿ ಆನೆಗಳ ನಡುವೆ ಮರೆಯಲಾಗದ ಬಲರಾಮ: ಅಂದು ಆಗಿದ್ದೇನು? ಬಲರಾಮ ಅಗಲಿದ್ದೇಗೆ?
ಮೈಸೂರು, ಸೆಪ್ಟೆಂಬರ್ 16 : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ಸಾಗುವ ಜಂಬೂಸವಾರಿ ಪ್ರಮುಖವಾಗಿದ್ದು, ಇಲ್ಲಿ ತನಕ ಹತ್ತಾರು ಆನೆಗಳು ಅಂಬಾರಿ ಹೊತ್ತು ನೆನಪಾಗಿ ಉಳಿದಿವೆ. ಈ ಅಂಬಾರಿ ಹೊತ್ತ ಆನೆಗಳು ಕೂಡ ಒಂದಕ್ಕಿಂತ ಒಂದು ತನ್ನದೇ ರೀತಿಯಲ್ಲಿ ಗಮನಸೆಳೆದಿವೆ. ಕೆಲವು ಶಕ್ತಿಶಾಲಿಯಾಗಿದ್ದರೆ, ಮತ್ತೆ ಕೆಲವು ಬುದ್ದಿಶಾಲಿಗಳಾಗಿವೆ. ಹೀಗಾಗಿ ಅವುಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಬಹುಮುಖ್ಯವಾಗಿದೆ.
ಅಂಬಾರಿ ಆನೆಗಳ ಬಗ್ಗೆ ಹೇಳುವಾಗಲೆಲ್ಲ ಸುಮಾರು 13 ಬಾರಿ ಚಿನ್ನದ ಅಂಬಾರಿ ಹೊತ್ತು ಜನಮನ್ನಣೆ ಪಡೆದಿದ್ದ ಬಲರಾಮ ನೆನಪಾಗುತ್ತಾನೆ. ಏಕೆಂದರೆ ದಸರಾ ವೇಳೆ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಸಾಗುತ್ತಿದ್ದ ಬಲರಾಮ ಸಾಧು ಸ್ವಭಾವದ ಆನೆಯಾಗಿತ್ತು. ಅಂಬಾರಿ ಹೊರುವ ಜವಬ್ದಾರಿಯನ್ನು ಅರ್ಜುನನಿಗೆ ನೀಡಿದ ಬಳಿಕ ವಿಶ್ರಾಂತಿಯಲ್ಲಿದ್ದ ಬಲರಾಮನಿಗೆ ಒಂದೇ ಕಣ್ಣು ಕಾಣಿಸುತ್ತಿತ್ತಲ್ಲದೆ, ಕೆಲವು ಸಮಯಗಳ ಕಾಲ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಹಾಗೆಯೇ ಗುಂಡಿನ ದಾಳಿಗೂ ಒಳಗಾಗಿದ್ದನ.

ತನ್ನ ಜೀವತಾವಧಿಯ ಕೊನೆಯಲ್ಲಿ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಬಲರಾಮ ತನ್ನ 67ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದನು. ದಸರಾ ಬಂದಾಗಲೆಲ್ಲ ನಾವೆಲ್ಲರೂ ಅಂಬಾರಿ ಹೊತ್ತ ಆನೆಗಳನ್ನು ನೆನಪಿಸಿಕೊಳ್ಳಲೇ ಕೊಳ್ಳಬೇಕಾಗುತ್ತದೆ. ಏಕೆಂದರೆ ಅಂಬಾರಿ ಹೊತ್ತ ಪ್ರತಿ ಆನೆಗಳಿಗೂ ಒಂದೊಂದು ರೀತಿಯ ಇತಿಹಾಸವಿದೆ. ಹೀಗೆ ಇತಿಹಾಸ ಬರೆದ ಗಜಪಡೆಗಳ ಪಟ್ಟಿಯಲ್ಲಿ ಬಲರಾಮನೂ ಸೇರಿ ಹೋಗಿದ್ದಾನೆ. 1978ರಲ್ಲಿ ಸೆರೆ ಸಿಕ್ಕಿ ಅರಣ್ಯ ಇಲಾಖೆಯ ಸುಪರ್ದಿಗೆ ಬಂದಲ್ಲಿಂದ ಆತ ಸಾಯುವವರೆಗೆ ಹೇಗೆ ಬದುಕಿದ್ದ ಎಂಬುದು ಈಗ ನೆನಪಷ್ಟೆ.
1978ರಲ್ಲಿ ಕೊಡಗಿನಲ್ಲಿ ಸೆರೆಸಿಕ್ಕಿದ್ದ ಆನೆ
1978ಕ್ಕೂ ಮುನ್ನ ಬಲರಾಮನೂ ಕೂಡ ಎಲ್ಲ ಕಾಡಾನೆಗಳಂತೆ ಪುಂಡನಾಗಿದ್ದನು, ರೈತರ ಹೊಲಗದ್ದೆ, ಕಾಫಿ ತೋಟಗಳಿಗೆ ನುಗ್ಗಿ ಪುಂಡಾಟ ನಡೆಸುತ್ತಿದ್ದನು. ಹೀಗಾಗಿ ಈತನನ್ನು 1978ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯದಲ್ಲಿ ಸೆರೆಹಿಡಿದು ತಿತಿಮತಿ ಬಳಿಯ ಮತ್ತಿಗೋಡು ಆನೆಶಿಬಿರದಲ್ಲಿ ಪಳಗಿಸಲಾಗಿತ್ತು. ಮೊದಲಿಗೆ ಪುಂಡನಾಗಿದ್ದ ಬಲರಾಮ ಆ ನಂತರ ಸಾಧು ಸ್ವಭಾವದವನಾಗಿ ಹೊರ ಹೊಮ್ಮಿದ್ದನು.
ಬಲಶಾಲಿಯಾಗಿದ್ದ ಈತ 2.70ಮೀಟರ್ ಎತ್ತರ, 3.77ಮೀ. ಉದ್ದ ಹೊಂದಿದ್ದನು. ಈತನ ನಡವಳಿಕೆ ಕಾರ್ಯಕ್ಷಮತೆಯನ್ನು ಗಮನಿಸಿ ಮೈಸೂರು ದಸರಾ ಜಂಬೂಸವಾರಿಗೆ ಆಯ್ಕೆ ಮಾಡಲಾಗಿತ್ತು. ಇತರೆ ದಿನಗಳಲ್ಲಿ ಆನೆ ಶಿಬಿರದಲ್ಲಿ ಇತರೆ ಪುಂಡಾನೆಗಳನ್ನು ಸೆರೆಹಿಡಿಯಲು ಮತ್ತು ಪಳಗಿಸಲು ಬಳಸಿಕೊಳ್ಳಲಾಗುತ್ತಿತ್ತು.

1999ರಲ್ಲಿ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊರುವ ಜವಬ್ದಾರಿ ಹೊತ್ತ ಬಲರಾಮ ಅಲ್ಲಿಂದ 2011ರವರೆಗೆ ನಿರಂತರವಾಗಿ ಅಂಬಾರಿ ಹೊರುತ್ತಾ ಬಂದಿದ್ದನು. 2012ರಲ್ಲಿ ಅಂಬಾರಿ ಹೊರುವ ಜವಬ್ದಾರಿಯಿಂದ ನಿವೃತ್ತಿಗೊಳಿಸಲಾಯಿತು. ಆದರೆ ಸುಮಾರು 13 ವರ್ಷಗಳ ಕಾಲ ಅಂಬಾರಿ ಹೊತ್ತ ಬಲರಾಮ ಬಳಿಕ ದಸರಾದಲ್ಲಿ ನಿಶಾನೆ ಆನೆಯಾಗಿ, ಪಟ್ಟದ ಆನೆಯಾಗಿ ಹೀಗೆ ಸುಮಾರು ಎರಡೂವರೆ ದಶಕಗಳ ಕಾಲ ದಸರಾದಲ್ಲಿ ಪಾಲ್ಗೊಂಡಿದ್ದನು. ಆದರೆ ವಯಸ್ಸಾದ ಹಿನ್ನಲೆಯಲ್ಲಿ 2020ರಿಂದ ದಸರಾದಲ್ಲಿ ಭಾಗವಹಿಸಿರಲಿಲ್ಲ.
ಒಂದೇ ಕಣ್ಣಿನಲ್ಲಿ ಜೀವನ ಸಾಗಿಸಿತ್ತು
ಬಲರಾಮನ ಬಗೆಗಿನ ಮತ್ತೊಂದು ಆಸಕ್ತಿದಾಯಕ ವಿಚಾರ ಏನೆಂದರೆ ಇದಕ್ಕೆ ಕಾಣಿಸುತ್ತಿದ್ದದ್ದು ಒಂದೇ ಕಣ್ಣು. ಒಂದೇ ಕಣ್ಣಿನಲ್ಲಿಯೇ ಇದು ಬದುಕನ್ನು ಸಾಗಿಸಿತ್ತು. 1978ರ ಮುನ್ನ ಅಂದರೆ ಇದನ್ನು ಸೆರೆ ಹಿಡಿಯುವ ಮುನ್ನವೇ ಇದು ಇತರೆ ಪುಂಡಾನೆಗಳೊಂದಿಗೆ ಕಾದಾಡಿದ್ದು, ಈ ವೇಳೆ ಆನೆಯೊಂದು ಕೋರೆಯಿಂದ ಚುಚ್ಚಿದ ಪರಿಣಾಮ ಕಣ್ಣನ್ನು ಕಳೆದುಕೊಂಡಿತ್ತು. ಅಲ್ಲಿಂದ ಸಾಯುವವರೆಗೂ ಒಂದೇ ಕಣ್ಣಿನಲ್ಲಿ ಬದುಕು ಸಾಗಿಸಿತ್ತು ಎನ್ನುವುದೇ ವಿಶೇಷ. ಇದೆಲ್ಲದರ ನಡುವೆ ವಯೋಸಹಜ ಕಾಯಿಲೆಯ ಹಿನ್ನಲೆಯಲ್ಲಿ ಹುಣಸೂರು ತಾಲೂಕಿಗೆ ಒಳಪಡುವ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಾಲನೆ ಮಾಡಲಾಗುತ್ತಿತ್ತು.
ಈ ಹಿಂದೆ ಕಳೆದ 2022ರ ಡಿಸೆಂಬರ್ 14ರಂದು ಮೇಯಲು ಬಿಟ್ಟಿದ್ದ ವೇಳೆ ಆನೆ ಶಿಬಿರ ಬಳಿಯ ಹೊಲದ ಕಡೆಗೆ ಹೋಗಿತ್ತು. ಈ ವೇಳೆ ಅಟ್ಟಳಿಗೆ ಮೇಲೆ ಕಾವಲು ಕಾಯುತ್ತಿದ್ದ ಹೊಲದ ಮಾಲೀಕ ಕಾಡಾನೆಯೆಂದು ಭಾವಿಸಿ ಅದರ ಮೇಲೆ ಗುಂಡು ಹಾರಿಸಿದ್ದನು. ಪರಿಣಾಮ ಸುಮಾರು 45 ಚೆರ್ರಿ(ಚಿಲ್ಲು)ಗಳು ಮೈಗೆ ತಾಗಿದ್ದವು. ಹೀಗಾಗಿ ಅದು ಅಸ್ವಸ್ಥಗೊಂಡಿತ್ತು. ಆ ನಂತರ ಅದನ್ನು ಆನೆ ಶಿಬಿರಕ್ಕೆ ಕರೆತಂದು ಅದಕ್ಕೆ ಚಿಕಿತ್ಸೆ ನೀಡಲಾಗಿತ್ತು. ವೈದ್ಯರಾದ ಡಾ.ರಮೇಶ್ ಅವರು ಮೆಟಲ್ ಡಿಟೆಕ್ಟರ್ ಬಳಸಿ ದೇಹದಿಂದ ಚೆರ್ರಿಯನ್ನು ತೆಗೆದು, ಗಾಯ ನಂಜಾಗದಂತೆ ಚಿಕಿತ್ಸೆ ನೀಡಿದ್ದರು.

2023ರಲ್ಲಿ ಇಹಲೋಕ ತ್ಯಜಿಸಿದ ಬಲರಾಮ
ಈ ಘಟನೆಯ ನಂತರ ಬಲರಾಮ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದನು. ಆದರೆ ಮತ್ತೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಕರಳು ಬೇನೆಯಿಂದ ತೊಂದರೆ ಅನುಭವಿಸುತ್ತಿದ್ದ ಬಲರಾಮ ಕುಡಿದ ನೀರನ್ನೆಲ್ಲ ವಾಂತಿ ಮಾಡುತ್ತಿತ್ತು. ಈ ವೇಳೆ ಪರೀಕ್ಷೆ ಮಾಡಿದಾಗ ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡಿರುವುದು ಕಾಣಿಸಿತ್ತು. ಬಳಿಕ ತಪಾಸಣೆ ಮಾಡಿದಾಗ ಅದು ಹೊಟ್ಟೆ ಸೇರಿತ್ತು. ಬಳಿಕ ಗುದದ್ವಾರದಲ್ಲಿದ್ದ ಮರದ ತುಂಡನ್ನು ಹೊರ ತೆಗೆಯಲಾಗಿತ್ತು. ಆದರೆ ಮರದ ತುಂಡು ಗಂಟಲ್ಲಿ ಸಿಲುಕಿ ಹೊಟ್ಟೆಗೆ ಜಾರುವಾಗ ಕರುಳಿಗೆ ಗಾಯವಾಗಿತ್ತು. ಹೀಗಾಗಿ ರಕ್ತಸ್ರಾವವಾಗಿ ಅದು ನಿತ್ರಾಣಗೊಂಡಿತ್ತು. ಆದರೂ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡುವಲ್ಲಿ ಶ್ರಮವಹಿಸಲಾಗಿತ್ತು.
2023ರ ಏ.27 ರಂದು ಬಲರಾಮ ತಾನು ಸೇವಿಸಿದ ಆಹಾರವನ್ನು ವಾಂತಿ ಮಾಡುತ್ತಿರುವುದು ಕಂಡು ಬಂದಾಗ ತಜ್ಞ ಪಶುವೈದ್ಯಾಧಿಕಾರಿಗಳಾದ ಡಾ.ಚಿಟ್ಟಿಯಪ್ಪ, ಡಾ.ರಮೇಶ್, ಡಾ.ಮಧನ್, ಡಾ.ಯಶಸ್ ಮತ್ತು ಡಾ.ಅಬ್ದುಲ್ ರವರ ತಂಡ ಎಂಡೋಸ್ಕೋಪಿ ಮಾಡಿ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿದಾಗ ಕ್ಷಯ ರೋಗವಿರುವುದು ಪತ್ತೆಯಾಗಿತ್ತು. ಆದರೆ ಮೇ.1 ರಿಂದ ಯಾವುದೇ ಆಹಾರ ನೀರು ಸೇವಿಸದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಮೇ.7 ರ ಸಂಜೆ 5.15 ರ ಸಮಯದಲ್ಲಿ ಮೃತಪಟ್ಟಿತು.
ಅಂಬಾರಿ ಆನೆಗಳ ನಡುವಿನ ನಕ್ಷತ್ರ
ಆ ನಂತರ ಸಾಂಪ್ರದಾಯಿಕವಾಗಿ ವಿಧಿ ವಿಧಾನದೊಂದಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಹುಣಸೂರು ವನ್ಯಜೀವಿ ವಲಯದ ಕಾರೆಕಟ್ಟೆ ಅರಣ್ಯ ಪ್ರದೇಶದಲ್ಲಿ ಮೇ.8 ರಂದು ಬೆಳಿಗ್ಗೆ ಪಶುವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೈಸೂರಿನ ಅರಮನೆ ಪುರೋಹಿತರಿಂದ ಅಂತಿಮ ವಿಧಿ ವಿಧಾನ ಪೂಜೆ ನಡೆಸಿ, ಕುಶಲತೋಪು ಸಿಡಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು. ಈಗ ಬಲರಾಮ ನೆನಪಾಗಿ ಉಳಿದು ಹೋಗಿದ್ದಾನೆ, ಅಂಬಾರಿ ಹೊತ್ತ ಆನೆಗಳ ವಿಚಾರ ಬಂದಾಗಲೆಲ್ಲ ಬಲರಾಮನ ಬಗ್ಗೆ ಮಾತನಾಡುತ್ತಾರೆ. ಅಷ್ಟೇ ಅಲ್ಲದೆ ದಸರಾ ಇತಿಹಾಸದಲ್ಲಿ ಬಲರಾಮ ನಕ್ಷತ್ರವಾಗಿ ಉಳಿದಿರುವುದಂತು ಸತ್ಯ.












Click it and Unblock the Notifications