Mysuru Dasara 2024: ನಾಲ್ಕು ಶತಮಾನ ಕಂಡ ಮೈಸೂರು ದಸರಾ: ಇತಿಹಾಸ ಹೇಳುವುದೇನು?

ಮೈಸೂರು, ಸೆಪ್ಟೆಂಬರ್‌ 24: ದೇಶ ವಿದೇಶಗಳ ಗಮನಸೆಳೆದಿರುವ ಐತಿಹಾಸಿಕ ಮೈಸೂರು ದಸರಾದಲ್ಲಿ ಏನಿದೆ ಏನಿಲ್ಲ ಎಂಬುದನ್ನು ಹೇಳುವುದೇ ಕಷ್ಟವಾಗುತ್ತದೆ. ಏಕೆಂದರೆ ಈ ಮಹೋತ್ಸವಕ್ಕೆ ನಾಲ್ಕು ಶತಮಾನಗಳ ಇತಿಹಾಸದ ಹಿರಿಮೆ, ಸಾಂಸ್ಕೃತಿಕ ರಂಗುರಂಗಿನ ಗರಿಮೆ. ಬೆಡಗು ಭಿನ್ನಾಣವಿದೆ. ಇದು ಒಂಭತ್ತು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಸುಗ್ಗಿಯೊಂದಿಗೆ ಹಳ್ಳಿಗಳಿಂದ ಆರಂಭವಾಗಿ ಜಾಗತಿಕ ಜಗುಲಿಯ ಎತ್ತರಕ್ಕೆ ದಸರಾ ಬೆಳೆದು ನಿಂತಿರುವ ಜನಮನದ ಜನತಾ ದಸರಾ ಎಂದರೆ ತಪ್ಪಾಗಲಾರದು.

ಸಾಮಾನ್ಯವಾಗಿ ದಸರಾ ಎಲ್ಲೆಡೆ ನಡೆದರೂ ಮೈಸೂರು ದಸರಾಕ್ಕೊಂದು ಐತಿಹಾಸಿಕ ಮೆರುಗಿದೆ ಹೀಗಾಗಿಯೇ ಅದು ವಿಶ್ವವಿಖ್ಯಾತಿಯಾಗಿದೆ. ದಸರಾ ಅಂದರೆ ನಮ್ಮ ಕಣ್ಣಿಗೆ ಕಾಣಿಸುವ ಜಗಮಗಿಸುವ ವಿದ್ಯುದ್ದೀಪದ ಅಲಂಕಾರ, ಜಂಬೂಸವಾರಿ ಮಾತ್ರವಲ್ಲದೆ ಅದರಾಚೆಗೆ ಕರ್ನಾಟಕದ ಸಂಸ್ಕೃತಿಯೇ ತೆರೆದುಕೊಳ್ಳುತ್ತಾ ಮನೋರಂಜನೆಯ ಸವಿ, ಕಲೆ, ಕ್ರೀಡೆಯ ಪ್ರೋತ್ಸಾಹ, ಸಡಗರ ಸಂಭ್ರಮ ಹೀಗೆ ಒಂದೇ ಎರಡೇ ನೂರಾರು ವಿಶೇಷತೆಗಳು ಇಲ್ಲಿ ಕಾಣಿಸುತ್ತವೆ. ಅಷ್ಟೇ ಅಲ್ಲದೆ ಲಕ್ಷಾಂತರ ಜನರ ಹೊಟ್ಟೆಪಾಡು ಕೂಡ ಹೌದು.

Mysuru Dasara 2024 What Is The History Of Mysore Dasara That Has Seen Four Centuries

ನಮಗೆ ನಿಮಗೆ ಎಲ್ಲರಿಗೂ ಮೈಸೂರು ದಸರಾವನ್ನು ಹೊಗಳಲು ಪದಗಳಿಲ್ಲ. ಆದರೂ ದಸರಾ ಬಗ್ಗೆ ಹೇಳುವುದಾದರೆ ಚಾಮುಂಡೇಶ್ವರಿಯ ಒಂಭತ್ತು ಅವತಾರಗಳ ಪೂಜೆಯ ನಂತರ ಹತ್ತನೇ ದಿನದ ವಿಜಯದಶಮಿ ನಾಡ ಹಬ್ಬಕ್ಕೆ ಕಿರೀಟವಿಟ್ಟಂತೆ ನಡೆಯುತ್ತದೆ. ವಿಶ್ವದ ಎಲ್ಲೆಡೆಯಿಂದ ಜನ ಬರುತ್ತಾರೆ. ಹಳ್ಳಿಹಳ್ಳಿಗಳಲ್ಲಿ ದಸರಾ ಸಂಭ್ರಮ ಮುಗಿಲು ಮುಟ್ಟುತ್ತದೆ. ನಾಡಹಬ್ಬಕ್ಕಾಗಿ ಅರಮನೆ, ಚಿನ್ನದ ಸಿಂಹಾಸನ, ಚಿನ್ನಬೆಳ್ಳಿಯ ಅಂಬಾರಿಗಳು, ದೇವರುಗಳು ಸಿದ್ಧಗೊಂಡರೆ, ಮೈಸೂರಿನ ಗಲ್ಲಿಗಲ್ಲಿಗಳಲ್ಲೂ ಜನ ಹಿತ್ತಾಳೆ, ಕಂಚಿನ ದೇವರುಗಳ ವಿಗ್ರಹ ತೊಳೆದು ಆಯುಧ ಪೂಜೆಗೆ ಸಜ್ಜಾಗುತ್ತಾರೆ.

ಹದಿನಾಡಿನಿಂದ ಯದುವಂಶ ಆರಂಭ

ಮೈಸೂರಿನಲ್ಲಿ ದಸರಾ ಆರಂಭವಾಗುವುದೇ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದರೊಂದಿಗೆ. ದಸರಾದ ಅಂದರೆ ನವರಾತ್ರಿಯ ಆ ಒಂಭತ್ತು ರಾತ್ರಿಹಗಲು ಮಿಂಚಿನಂತೆ ಮೆರೆಯುತ್ತದೆ. ಇತಿಹಾಸದ ಕಾಲಘಟ್ಟಗಳಿಗೆ ಹೊಸತು ಕೊಂಡಿಯನ್ನು ಸೇರಿಸಿ, ಮಕ್ಕಳಿಂದ ಮುದುಕರವರೆಗೂ, ಸಿರಿವಂತರಿಂದ ಬಡವರವರೆಗೂ ಎಲ್ಲರಿಗೂ ಸಂಭ್ರಮವನ್ನು ಉಣಬಡಿಸುತ್ತದೆ. ಐತಿಹಾಸಿಕ ಪುರಾಣ ಕಥೆ ಜೊತೆಗೆ 1399ರಲ್ಲಿ ಮೈಸೂರು ಅರಸರ ಮೂಲ ಪುರುಷರು ಈ ಇತಿಹಾಸವನ್ನು ಮುಂದುವರೆಸಿದವರಾಗಿ ಕಾಣುತ್ತಾರೆ.

Mysuru Dasara 2024 What Is The History Of Mysore Dasara That Has Seen Four Centuries

ರಾಜವಂಶದ ಯದುರಾಯ, ಕೃಷ್ಣರಾಯರು ಸ್ಥಳೀಯನಾಗಿದ್ದ, ಹದಿನಾಡಿನ ಪಾಳೆಯಗಾರನಾಗಿದ್ದ ಮಹಾಶೂರ ಕಾರುಗಳ್ಳಿ ಮಾರನಾಯಕನನ್ನು ಕೊಂದು ಹದಿನಾಡಿನ ಅರಸರಾಗುತ್ತಾರೆ. ದಳಪತಿ ಮಾರನಾಯಕ ಕೆಳ ಜಾತಿಯಾಗಿದ್ದು, ಹದಿನಾಡಿನ ಅರಸರ ಮಗಳನ್ನು ಕೇಳಿದನೆಂಬ ವಿಚಾರ ಹೊಸತೊಂದು ಸಾಮ್ರಾಜ್ಯಕ್ಕೆ ಕಾರಣವಾಗುತ್ತದೆ. ಇಂತಹ ಗೆಲುವು ವಿಜಯದಶಮಿಯ ಕಾರಣಕ್ಕೂ ಸೇರುತ್ತದೆ. ದಸರಾದ ಆರಂಭದ ಬಗ್ಗೆ ಹೇಳುವ ಮುನ್ನ ನಾವು ಮೈಸೂರು ಮಹಾರಾಜರ ವಂಶದ ಕಡೆಗೆ ಹೋಗಬೇಕಾಗುತ್ತದೆ. ಅದನ್ನು ನೋಡುವುದೇ ಆದರೆ ಹದಿನಾಡಿನಿಂದ ಯದುವಂಶ ಆರಂಭವಾಗುತ್ತದೆ.

26 ರಾಜರು ಆಳಿದ ಮೈಸೂರು ಸಂಸ್ಥಾನ

'ಗಂಡಭೇರುಂಡ' ಪಕ್ಷಿ ಲಾಂಛನವಾಗುತ್ತದೆ. 26ಕ್ಕೂ ಹೆಚ್ಚು ಒಡೆಯರ್ 1399ರಿಂದ 1970ರವರೆಗೆ ಮೈಸೂರು ಸಾಮ್ರಾಜ್ಯ ಕಟ್ಟಿ ಆಳುತ್ತಾರೆ. ಹಳೆ ಮೈಸೂರು ಪ್ರಾಂತ್ಯವು ಸ್ವಾತಂತ್ರ್ಯಾ ನಂತರ ದೇಶದ ಗಣರಾಜ್ಯದಲ್ಲಿ ವಿಲೀನವಾಗುತ್ತದೆ. ಆ ನಂತರ ಕರ್ನಾಟಕದ ಉದಯವೂ ಆಗುತ್ತದೆ. ಇವೆಲ್ಲಾ ಇತಿಹಾಸದ ಕಾಲಚಕ್ರದೊಳಗೆ ಸಾಗಿದಂತೆ 'ಮೈಸೂರು ದಸರಾ' ಮಾತ್ರ ಜನರ ನಡೆ ನುಡಿಯ ಬದುಕಾಗಿ ಇತಿಹಾಸದ ನಾಲ್ಕು ಶತಮಾನದ ಕಾಲಘಟ್ಟದಲ್ಲಿ ಮಗ್ಗಲು ಬದಲಿಸುತ್ತಾ ಸಾಗುತ್ತಿರುವುದು ವಿಶೇಷವಾಗಿದೆ.

ಅರಸರು, ದಿವಾನರ ಸುಧೀರ್ಘವಾದ ಆಳ್ವಿಕೆಯಿಂದ ಮೈಸೂರು ಒಂದು ಮಹಾ ಸಂಸ್ಥಾನವಾದದ್ದೂ ಹೆಚ್ಚುಗಾರಿಕೆ. ಬ್ರಿಟೀಷರ ಕಾಲದಲ್ಲಿ ಮೈಸೂರು ಒಂಭತ್ತು ಜಿಲ್ಲೆಗಳಿಂದ ಕೂಡಿತ್ತು. ಕರ್ನಾಟಕ ಏಕೀಕರಣದ ನಂತರ 1ನೇ ನವೆಂಬರ್ 1956ರಲ್ಲಿ ಮೈಸೂರು ರಾಜ್ಯವಾಯಿತು. ದೇವರಾಜ ಅರಸರು ಮುಖ್ಯಮಂತ್ರಿಯಾದ ಕಾಲಕ್ಕೆ 1-11-1973ರಲ್ಲಿ ಕರ್ನಾಟಕ ರಾಜ್ಯ ಉದಯವಾಯಿತು. ಇದರೊಟ್ಟಿಗೆ ಮೈಸೂರು ಮಾತ್ರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿಯೇ ಉಳಿಯಿತು.

ಸರಿ ಸಾಟಿಯಿಲ್ಲದ ಮೈಸೂರು ದಸರಾ

ಸರಿ ಸುಮಾರು 413 ದಸರಾಗಳು ಕಳೆದು ಹೋಗಿವೆ. ಈ ಬಾರಿ 414ನೇ ಆಚರಣೆ ನಡೆಯುತ್ತದೆ. ಆದರೆ ಕಳೆದ ದಸರಾದ ಗುಂಗಿನೊಂದಿಗೆ ನಾಳಿನ ದಸರೆಗೆ ಜನ ಮುನ್ನಡಿಯಿಡುವುದು ಮಾಮೂಲಿ. ಸಿರಿವಂತರು ಬೊಂಬೆ ಪ್ರದರ್ಶನ, ತೋಟಗಳ ಹಬ್ಬ ಮಾಡುತ್ತಾರೆ. ಕೇರಿಕೇರಿಯ ಬಡಜನರು ಪೂರ್ವಿಕರನ್ನು ಸ್ಮರಿಸಿ ಹಬ್ಬ (ಪಿತೃಪಕ್ಷ) ಮಾಡುತ್ತಾರೆ. ಬಾಳೆ ಎಲೆಯ ಮೇಲೆ ತಾಮ್ರ, ಹಿತ್ತಾಳೆ, ಅಥವಾ ಮರದಿಂದ ಮಾಡಿದ ದೇವರುಗಳ ಹಾಗೂ ಫೋಟೋ ಇಟ್ಟು ಪೂಜಿಸಿ ಕೃತಾರ್ಥರಾಗುತ್ತಾರೆ. ಒಕ್ಕಲು ಮನೆತನದ ಜನ, ವ್ಯಾಪಾರಸ್ಥರು, ಉದ್ದಿಮೆದಾರರು ಆಯುಧ ಪೂಜೆಯೊಂದಿಗೆ ಇಡೀ ದಸರಾದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸುತ್ತಾರೆ.

ನವರಾತ್ರಿಯ ಒಂಭತ್ತು ದಿನವೂ ನಗರದ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆಯುತ್ತವೆ. ಜೊತೆಗೆ ಅರಮನೆ ಸೇರಿದಂತೆ ವಿವಿಧೆಡೆ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಅದರಾಚೆಗೆ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿ, ಆಹಾರಮೇಳ, ಚಲನಚಿತ್ರೋತ್ಸವ ಹೀಗೆ ಒಂದೇ ಎರಡೇ ಹತ್ತಾರು ಕಾರ್ಯಕ್ರಮಗಳು ನಡೆಯುತ್ತವೆ. ದಸರಾ ರಾತ್ರಿಯಲ್ಲಿ ಮನೆಗಳು, ಕಟ್ಟಡಗಳು, ವೃತ್ತಗಳು ರಸ್ತೆಗಳು ವಿದ್ಯುದ್ದೀಪಗಳಿಂದ ಮಿಂಚುವುದನ್ನು ನೋಡುವುದು ಮತ್ತು ಅದರ ನಡುವೆ ತೆರಳುವುದು ಒಂದು ಸುಂದರ ಅನುಭವ ನೀಡುತ್ತದೆ. ಒಟ್ಟಾರೆ ಮೈಸೂರು ದಸರಾಕ್ಕೆ ಮೈಸೂರು ದಸರಾವೆ ಸಾಟಿ ಎನ್ನುವುದರಲ್ಲಿ ಎರಡು ಮಾತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+