ಮೈಸೂರು ದಸರಾ 2024: ಖಾಸಗಿ ದರ್ಬಾರ್‌ಗೆ ಭೀಮಾ, ಕಂಜನ್ ಆನೆಗಳ ಮೆರಗು..!
ಮೈಸೂರು, ಸೆಪ್ಟೆಂಬರ್ 23: ಐತಿಹಾಸಿಕ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ದಸರಾಕ್ಕೆ ಬೇಕಾದ ಸಿದ್ಧತೆಗಳು ಶುರುವಾಗಿದೆ. ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಈಗಾಗಲೇ ತಾಲೀಮು ನಡೆಯುತ್ತಿದ್ದರೆ ಮತ್ತೊಂದೆಡೆ ಅರಮನೆಯಲ್ಲಿ ನಡೆಯಲಿರುವ ಖಾಸಗಿ ದರ್ಬಾರ್‌ಗೆ ಆನೆಗಳಿಗೆ ಜವಾಬ್ದಾರಿಗಳನ್ನು ಹಂಚುವ ಕೆಲಸವನ್ನು ಮಾಡಲಾಗಿದ್ದು, ಆ ಮೂಲಕ ಸಾಂಪ್ರದಾಯಿಕ ಕೈಂಕರ್ಯಗಳಿಗೆ ಸಜ್ಜುಗೊಳಿಸುವ ಕೆಲಸ ಚುರುಕುಗೊಂಡಿದೆ.
ಗಜಪಡೆಯ ಕ್ಯಾಪ್ಟನ್ ಆಗಿರುವ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದು, ಜಂಬೂ ಸವಾರಿಯ ಪ್ರಮುಖ ಜವಬ್ದಾರಿ ಈತನದ್ದಾಗಿದೆ. ಉಳಿದ 13 ಆನೆಗಳಿಗೂ ತನ್ನದೇ ಆದ ಜವಬ್ದಾರಿಯಿದ್ದು ಅದನ್ನು ಅವುಗಳು ಯಶಸ್ವಿಯಾಗಿ ನಿರ್ವಹಿಸಿದಾಗ ಮಾತ್ರ ಜಂಬೂಸವಾರಿ ಯಶಸ್ವಿಯಾಗಿ ನೆರವೇರಲು ಸಾಧ್ಯವಾಗಲಿದೆ. ಜಂಬೂಸವಾರಿಯನ್ನು ಮುನ್ನಡೆಸುವುದು ಆನೆಯನ್ನು ನಿಶಾನೆ ಆನೆ ಎಂದು ಕರೆಯಲಾಗುತ್ತದೆ. ಹಾಗೆಯೇ ಅರಮನೆಯ ಖಾಸಗಿ ದರ್ಬಾರ್ ಗೂ ನಿಶಾನೆ ಆನೆ ಮತ್ತು ಪಟ್ಟದ ಆನೆಯನ್ನು ಬಳಸಿಕೊಳ್ಳಲಾಗುತ್ತಿದೆ.

ಇನ್ನು ಅಂಬಾರಿ ಹೊರುವ ಅಭಿಮನ್ಯುವಿನ ಅಕ್ಕಪಕ್ಕದಲ್ಲಿ ಸಾಗುವ ಹೆಣ್ಣು ಆನೆಗಳನ್ನು ಕುಮ್ಕಿ ಆನೆಗಳೆಂದು ಕರೆಯಲಾಗುತ್ತದೆ. ಉಳಿದಂತೆ ಸಂಗೀತ ಗಾಡಿಯನ್ನು ಎಳೆಯುವ ಜವಬ್ದಾರಿಯನ್ನು ಬಲಶಾಲಿ ಆನೆಗೆ ನೀಡಲಾಗುತ್ತದೆ. ಈ ಬಾರಿ ಅಂಬಾರಿ ಹೊರುವ ಅಭಿಮನ್ಯುಗೆ ಕುಮ್ಕಿ ಆನೆಗಳಾಗಿ ಹಿರಣ್ಯಾ ಮತ್ತು ಲಕ್ಷ್ಮಿ ಹೆಜ್ಜೆ ಹಾಕಿದರೆ, ಇಡೀ ಜಂಬೂ ಸವಾರಿಯನ್ನು ಮುನ್ನಡೆಸುವ ಜವಬ್ದಾರಿಯ ನಿಶಾನೆ ಆನೆಯ ಆಯ್ಕೆ ಇನ್ನಷ್ಟೇ ಆಗಬೇಕಿದೆ.
ಪ್ರಮೋದಾ ದೇವಿ ಒಡೆಯರಿಂದ ಆಯ್ಕೆ
ಈ ನಡುವೆ ದಸರಾ ಆರಂಭವಾಗುತ್ತಿದ್ದಂತೆಯೇ ಅಂದರೆ ನವರಾತ್ರಿಯ ಆರಂಭದಿಂದ ಒಂಬತ್ತು ದಿನಗಳ ಕಾಲ ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದ್ದು, ಈ ದರ್ಬಾರ್ ನಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಈ ವೇಳೆ ಪಟ್ಟದ ಆನೆಗೆ ಮಹತ್ವದ ಸ್ಥಾನವಿದೆ. ಹೀಗಾಗಿ ದರ್ಬಾರ್ ನ ಪಟ್ಟದ ಆನೆಯಾಗಿ ಕಂಜನ್ ಆನೆಯನ್ನು ಹಾಗೆಯೇ ನಿಶಾನೆ ಆನೆಯಾಗಿ ಭೀಮನನ್ನು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಆಯ್ಕೆ ಮಾಡಿದ್ದಾರೆ.

ಜಂಬೂಸವಾರಿಗೆ ನಿಶಾನೆ ಆನೆ ಮತ್ತು ಶ್ರೀರಂಗಪಟ್ಟಣದ ದಸರಾ ಆನೆಯ ಆಯ್ಕೆ ಮುಂದಿನ ದಿನಗಳಲ್ಲಿ ಮಾಡಲಿದ್ದಾರೆ. ಖಾಸಗಿ ದರ್ಬಾರ್ ವೇಳೆ ಪಟ್ಟದ ಆನೆ, ಕುದುರೆ, ಹಸು ಹೀಗೆ ಎಲ್ಲದಕ್ಕೂ ಪೂಜಾ ಕೈಂಕರ್ಯಗಳು ನಡೆಯಲಿವೆ. ಗಜಪಡೆ ಕೇವಲ ಜಂಬೂಸವಾರಿಯ ಜವಬ್ದಾರಿಯಷ್ಟೆ ಅಲ್ಲದೆ ಬೇರೆ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳಲಿವೆ. ಇದೀಗ ತಾಲೀಮು ಕಠಿಣವಾಗುತ್ತಾ ಹೋಗುತ್ತದೆ. ಇಷ್ಟರಲ್ಲಿಯೇ ಒಣ ತಾಲೀಮು, ಭಾರದ ತಾಲೀಮು ಮುಗಿಸಿರುವ ಗಜಪಡೆ ಮರದ ಅಂಬಾರಿಯ ತಾಲೀಮು ನಡೆಸುತ್ತಿವೆ.
ಕುಶಾಲತೋಪು ಸಿಡಿಸಿ ಗೌರವ ಸಲ್ಲಿಕೆ
ಇಲ್ಲಿವರೆಗೆ ನಡೆಯುತ್ತಿರುವ ತಾಲೀಮು ಅವುಗಳ ಶಕ್ತಿ ಸಾಮರ್ಥ್ಯದ್ದಾಗಿದ್ದರೆ ಇದರಾಚೆಗೆ ಅವು ಶಬ್ದಕ್ಕೆ ಹೆದರದಂತೆ ಸಿದ್ಧಗೊಳಿಸುವ ಸಲುವಾಗಿ ಕುಶಾಲತೋಪಿನ ತಾಲೀಮು ನಡೆಸಬೇಕಾಗಿದೆ. ಇದು ಗಜಪಡೆಯ ಮೂರನೇ ಹಂತದ ತಾಲೀಮು ಆಗಿದೆ. ಈ ತಾಲೀಮು ಈ ವಾರದಲ್ಲಿಯೇ ನಡೆಯಲಿದ್ದು, ಅದಕ್ಕಾಗಿ ಅರಮನೆ ಸಮೀಪದ ವಸ್ತುಪ್ರದರ್ಶನ ಆವರಣದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಜಂಬೂಸವಾರಿ ದಿನದಂದು ಕುಶಾಲತೋಪು ನಡೆಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಅಂದು ಅರಮನೆ ಬಳಿ ಪೊಲೀಸರು ಇಪ್ಪತ್ತೊಂದು ಬಾರಿ ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸುತ್ತಾರೆ ಹೀಗಾಗಿ ಅದರ ಸದ್ದಿಗೆ ಗಜಪಡೆಯಾಗಲೀ, ಕುದುರೆಗಳಾಗಲೀ ಬೆದರದಂತೆ ಅವುಗಳಿಗೆ ಅಭ್ಯಾಸ ಮಾಡಿಸುವುದೇ ಸಿಡಿಮದ್ದಿನ ತಾಲೀಮಾಗಿದೆ.
ವಸ್ತುಪ್ರದರ್ಶನ ಆವರಣದಲ್ಲಿ ಏಳು ಫಿರಂಗಿಗಳಿಂದ ತಲಾ ಮೂರು ಸುತ್ತಿನಂತೆ ಒಟ್ಟು ಇಪ್ಪತ್ತೊಂದು ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ.. ಈ ಸದ್ದಿಗೆ ಆನೆ, ಕುದುರೆ ಬೆದರದೆ, ವಿಚಲಿತಗೊಳ್ಳದೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಸಿಡಿಮದ್ದು ಸಿಡಿಸಿ ಅವುಗಳಿಗೆ ಅಭ್ಯಾಸ ಮಾಡಿಸುವುದು ನಡೆಯುತ್ತಾ ಬರುತ್ತಿದೆ. ಈ ತಾಲೀಮು ಮುಗಿದರೆ ಗಜಪಡೆ ಜಂಬೂಸವಾರಿಗೆ ಸರ್ವ ಸಿದ್ಧವಾದಂತೆಯೇ. ದಿನಕಳೆಯುತ್ತಿದೆ ದಸರಾ ಜಂಬೂಸವಾರಿಯ ದಿನಗಳು ಹತ್ತಿರವಾಗುತ್ತಿವೆ. ಹಾಗಾಗಿ ಲಕ್ಷಾಂತರ ಜನ ಆ ದಿನದ ಸುಂದರ ಐತಿಹಾಸಿಕ ಕ್ಷಣಗಳಿಗಾಗಿ ಕಾಯುತ್ತಿರುವುದಂತು ನಿಜವಾಗಿದೆ.












Click it and Unblock the Notifications