Mysuru dasara 2023: ಸಂಘರ್ಷವಾದರೂ ಮಹಿಷಾ ದಸರಾ ನಡೆಸಲು ಬಿಡುವುದಿಲ್ಲ: ಸಂಸದ ಪ್ರತಾಪ್ ಸಿಂಹ ಸವಾಲು
ಮೈಸೂರು, ಸೆಪ್ಟೆಂಬರ್, 08: ಯಾವುದೇ ಕಾರಣಕ್ಕೂ ಮಹಿಷಾ ದಸರಾ ಅಚರಣೆ ಮಾಡಲು ಬೀಡುವುದಿಲ್ಲ ಎಂದು ಸಂಸದ ಪ್ರತಾಪಸಿಂಹ ಮೈಸೂರಿನಲ್ಲಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಬೇಡ. ಚಾಮುಂಡೇಶ್ವರಿ ಬೆಟ್ಟದಲ್ಲಿ ಈ ಕೆಲಸ ಮಾಡಲು ನಾವು ಬಿಡುವುದಿಲ್ಲ. ಮಹಿಷಾನ ಪೋಟೋ ಇಟ್ಟು ಮನೆಯಲ್ಲಿ ಪೊಜೆ ಮಾಡಿಕೊಳ್ಳಲಿ. ಅದರ ಜೊತೆ ಮಹಿಷಾನಂತಹ ಮಗ ಹುಟ್ಟಲಿ ಅಂತಾ ಬೇಡಿಕೊಳ್ಳಲಿ ಎಂದು ಮಹಿಷಾ ದಸರಾ ಬಗ್ಗೆ ವ್ಯಂಗ್ಯವಾಡಿದರು.

ಯಾರು ಚಾಮುಂಡಿ ಸನ್ನಿಧಿಯನ್ನು ಮಹಿಷಾ ಬೆಟ್ಟ ಅಂತಾ ಹೇಳುವುದಿಲ್ಲ. ಇದನ್ನು ಚಾಮುಂಡಿಬೆಟ್ಟ ಅಂತಾನೇ ಕರೆಯುವುದು. ನಾವು ದೇವರ ಮೇಲೆ ನಂಬಿಕೆ ಭಕ್ತಿ ಇರುವರು. ಈ ವಿಚಾರದಲ್ಲಿ ಯಾವುದೇ ಸಂಘರ್ಷಕ್ಕೆ ನಾನು ಸಿದ್ದ. ನಾನೇ ಮಹಿಷಾ ದಸರಾ ಅಚರಣೆ ದಿನ ಬೆಟ್ಟದಲ್ಲಿ ಇರುತ್ತೇನೆ. ಯಾವ ರೀತಿ ಅಚರಣೆ ಮಾಡುತ್ತಾರೆ ನೋಡುತ್ತೇವೆ ಎಂದು ಸವಾಲು ಹಾಕಿದರು.
ಸೂರ್ಯನ ಸುತ್ತ ಭೂಮಿ ಸುತ್ತುತ್ತಿದೆ ಎಂದು ಹೇಳಿದ ಏಕೈಕ ಧರ್ಮ ಹಿಂದೂ ಧರ್ಮ ಮಾತ್ರ. ಈ ಖಗೋಳ ವಿಜ್ಞಾನಕ್ಕೆ ನಮ್ಮ ಋಷಿಮುನಿಗಳು ಹಿಂದಿನ ಕಾಲದಲ್ಲಿ ಕೊಡುಗೆ ನೀಡಿದ್ದಾರೆ. ಆದರೆ ಬೇರೆ ಧರ್ಮಗಳಿಗೆ ಖಗೋಳ ವಿಜ್ಞಾನದ ಬಗ್ಗೆ ಅರಿವೇ ಇಲ್ಲ. ಭೂಮಿ ಸುತ್ತ ಸೂರ್ಯ ಸುತ್ತುತ್ತಾನೆ ಅಂತಾ ಅವರು ಹೇಳುತ್ತಾರೆ. ಹಿಂದೂ ಧರ್ಮದ ಬಗ್ಗೆ ಅರಿವೇ ಇಲ್ಲದೆ, ಜ್ಞಾನ ಇಲ್ಲದೆ ಅಸಂಬಂಧ ಮಾತುಗಳನ್ನು ಆಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
700 ವರ್ಷಗಳ ಮುಸಲ್ಮಾನರ ದಾಳಿಯನ್ನು, ಇನ್ನೂರು ವರ್ಷಗಳ ಕ್ರೈಸ್ತರ ದಾಳಿಯನ್ನು ಸಹಿಸಿಕೊಂಡು ಇವತ್ತಿಗೂ ಶೇಕಡಾ 80ರಷ್ಟು ಹಿಂದೂಗಳು ಈ ದೇಶದಲ್ಲಿ ಇದಾರೆ. ಹಿಂದೂ ಧರ್ಮಕ್ಕೆ ಈ ಸೊಳ್ಳೆ, ನೊಣಗಳನ್ನೆಲ್ಲ ನುಂಗಿ ಜೀರ್ಣಸಿಕೊಳ್ಳುವ ಶಕ್ತಿ ಇದೆ ಎಂದು ತಿಳಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ನಮ್ಮ ಪಕ್ಷದ ಪ್ರಶ್ನಾತೀತ ನಾಯಕರು. ಅವರು ಏಕಾಂಗಿಯಾಗಿ ರಾಜ್ಯ ಸುತ್ತಿ ಪಕ್ಷ ಕಟ್ಟಿದ್ದಾರೆ. ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಯಡಿಯೂರಪ್ಪ ಕಾರಣರು. ಅವರೇ ಈ ಹೇಳಿಕೆ ನೀಡಿದ್ದಾರೆ ಎಂದರೆ ಅದಕ್ಕೆ ನಮ್ಮ ಸಹಮತವಿದೆ. ರಾಜ್ಯದಲ್ಲಿ ಎರಡು ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಕೇಂದ್ರ ನಾಯಕರ ಜೊತೆ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬಂದಿರುತ್ತಾರೆ. ಅವರು ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ ಎಂದರು.
ಯಡಿಯೂರಪ್ಪ ಸಾಹೇಬ್ರು ಏನೇ ನಿರ್ಧಾರ ತೆಗೆದುಕೊಂಡಿದ್ದರೂ ಪಕ್ಷದ ಹಿತದೃಷ್ಟಿಯಿಂದ ಯೋಚಿಸಿಯೇ ತೀರ್ಮಾನ ಕೈಗೊಂಡಿರುತ್ತಾರೆ. ರಾಜ್ಯದ ಜನ ಪ್ರಜ್ಞಾವಂತರು ಕೆಲವೊಮ್ಮೆ ಯಾಮಾರುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ಗ್ಯಾರೆಂಟಿ ಯೋಜನೆಗೆ ಜನ ಯಾಮಾರಿದರು. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ರಾಜ್ಯದ ಜನಕ್ಕೆ ಈಗ ತಪ್ಪಿನ ಅರಿವಾಗಿದೆ. ಲೋಕಸಭಾ ಚನಾವಣೆಯಲ್ಲಿ ಬಿಜೆಪಿಗೆ ಮತ ನೀಡುತ್ತಾರೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂದರು.
ಮಾಜಿ ಮೇಯರ್ ಪುರುಷೋತ್ತಮ್ ಹೇಳಿದ್ದೇನು?
ಈ ಬಾರಿ ಮೈಸೂರು ದಸರಾವನ್ನು ಅದ್ಧೂರಿಯಾಗಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಹಾಗೆಯೆ ಕೆಲ ದಿನಗಳಿಂದ ಮಹಿಷಾ ದಸರಾ ಆಚರಣೆ ಮಾಡಬೇಕೋ ಬೋಡವೋ ಎನ್ನುವ ಚರ್ಚೆಗಳು ಕೂಡ ನಡೆಯುತ್ತಿದ್ದವು. ಆದರೆ ಇದೀಗ ಅಕ್ಟೋಬರ್ 13 ರಂದು ಮಹಿಷಾ ದಸರಾ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿದ್ದ ಮಾಜಿ ಮೇಯರ್ ಪುರುಷೋತ್ತಮ್ ಅವರು, ಕೆಲವರು ಮಹಿಷಾನ ಇತಿಹಾಸ ಗೊತ್ತಿಲ್ಲದವರು ಮಹಿಷಾ ದಸರಾಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದರು. ಇನ್ನು ಇವರಿಗೆ ಉತ್ತರ ಕೊಡಲು ಮುಂದಿನ ಭಾನುವಾರ ಸೆಪ್ಟಂಬರ್ 10ರಂದು ರಾಜ್ಯಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಈ ಬಾರಿ ಮಹಿಷಾ ದಸರಾ ಆಚರಣೆಗೆ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ನಿಮ್ಮ ಧಾರ್ಮಿಕ ಆಚರಣೆಗೆ ಯಾರ ಅನುಮತಿಯ ಅವಶ್ಯಕತೆಯಿಲ್ಲ. ನಿಮ್ಮ ಪಾಡಿಗೆ ನೀವು ಮುಂದುವರೆಸಿ ಅಂತಾ ಹೇಳಿದ್ದಾರೆ ಎಂದರು.
ಧಾರ್ಮಿಕ ಸ್ವಾತಂತ್ರ್ಯ ಸಂವಿಧಾನ ಬದ್ಧವಾದ ಹಕ್ಕು. ಯಾರು ಯಾವ ಆಚರಣೆ ಬೇಕಾದರೂ ಮಾಡಬಹುದು. ಯಾವ ಆಚರಣೆ ಮಾಡಬೇಕು, ಯಾವುದನ್ನು ಮಾಡಬಾರದು ಎಂದು ಸರ್ಕಾರ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಮಹಿಷ ದಸರಾಕ್ಕೆ ಅವಕಾಶ ನೀಡುವುದಾಗಿ ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸುಳಿವು ನೀಡಿದ್ದರು.












Click it and Unblock the Notifications