ಮೈಸೂರು ದಸರಾ 2022: ಮೊದಲ ಬಾರಿಗೆ ವಿಶೇಷ ಡ್ರೋನ್ ಲೈಟ್ ಶೋ
ಮೈಸೂರು, ಅಕ್ಟೋಬರ್, 05: ಜಂಬೂ ಸವಾರಿ ಮುಗಿಯುತ್ತಿದ್ದಂತೆ ಇತ್ತ ಬನ್ನಿಮಂಟಪದ ಮೈದಾನದಲ್ಲಿ ನಡೆದ ಪಂಜಿನ ಕವಾಯತು ನೋಡುಗರನ್ನು ಆಕರ್ಷಿಸಿತು. ಪ್ರತಿ ವರ್ಷದಂತೆ ಅಶ್ವಾರೋಹಿ ಪಡೆಯಿಂದ ನಡೆದ ಪೊಲೀಸರ ಟೆಂಟ್ ಪೆಗ್ಗಿಂಗ್ ನೆರೆದಿದ್ದವರ ಎದೆ ಝಲ್ ಎನಿಸುವಂತೆ ಮಾಡಿದೆ. ಇದೇ ಮೊದಲ ಬಾರಿಗೆ ಪ್ರದರ್ಶನಗೊಂಡ ಡ್ರೋನ್ ಲೈಟ್ ಶೋ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.
ಜನರು ಸತತ 15 ನಿಮಿಷಗಳ ಕಾಲ ಡ್ರೋನ್ ಸೃಷ್ಟಿಸಿದ ಕಲಾಕೃತಿಗಳನ್ನು ವೀಕ್ಷಿಸಿ ಖುಷಿಪಟ್ಟರು. ದಸರೆಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಡ್ರೋನ್ ಲೈಟ್ ಶೋ ಪಂಜಿನ ಕವಾಯತಿಗೆ ಮತ್ತಷ್ಟು ಮೆರುಗು ಹೆಚ್ಚಿಸಿತು. ಹೊಸ ಬೆಳಕಿನ ಲೋಕವೇ ಇಡೀ ಮೈದಾನದಲ್ಲಿ ತುಂಬಿಕೊಂಡಿತ್ತು. ಮೌಂಟೆಡ್ ಪೊಲೀಸರು 15 ನಿಮಿಷ ಪ್ರಸ್ತುತಪಡಿಸಿದ ಟೆಂಟ್ ಪೆಗ್ಗಿಂಗ್ ರೋಚಕ ಅನುಭವ ನೀಡಿತು. ಆರು ಅಡಿ ಕುದುರೆಗಳ ಮೇಲೆ ಕುಳಿತು ಕೆಳಗೆ ನೆಟ್ಟಿದ್ದ ಉರಿಯುವ ಪಂಜುಗಳನ್ನು ಈಟಿಯಲ್ಲಿ ಕಿತ್ತುಕೊಂಡ ಚಾಕಚಕ್ಯತೆಯನ್ನು ನೋಡಿದ ಪ್ರೇಕ್ಷಕರು ರೋಮಾಂಚನಗೊಂಡರು.
ಮೈಸೂರು ದಸರಾ: ರೋಮಾಂಚನಕಾರಿ ಜಟ್ಟಿ ಕಾಳಗದಲ್ಲಿ ಗೆಲುವು ಯಾರಿಗೆ?
ಬೆಂಗಳೂರಿನ ಥಣಿಸಂದ್ರ ಪೊಲೀಸ್ ತರಬೇತಿ ಕೇಂದ್ರದ 300 ಪೊಲೀಸರು, 600 ಪಂಜುಗಳನ್ನು ಹಿಡಿದು ಗಮನ ಸೆಳೆದಿದ್ದು, ನಂತರ ಅಕ್ಷರಾಕೃತಿಗಳನ್ನು ರಚಿಸಿದರು. ವಾದ್ಯ ಕಲಾವಿದರ ಚಂಡೆ ಹಾಗೂ ವಾದ್ಯಗಳ ನರ್ತನ ಕಾರ್ಯಕ್ರಮ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತು. 60ಕ್ಕೂ ಹೆಚ್ಚು ಕಲಾವಿದರು ತಾಳ, ಮದ್ದಳೆ, ಚಂಡೆ ಸೇರಿದಂತೆ ಅನೇಕ ವಾದ್ಯಗಳನ್ನು ಏಕಕಾಲದಲ್ಲಿ ಮೊಳಗಿಸುವ ಮೂಲಕ ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ದದರು.

ಕಲಾತಂಡಗಳ ಪ್ರದರ್ಶನಕ್ಕೆ ಜನರ ಮೆಚ್ಚುಗೆ
ಮೈಸೂರು ದಸರಾ ಜಂಬೂಸವಾರಿಗೆ ಕಲಾತಂಡಗಳ ವಿಶೇಷ ಮೆರುಗು ನೀಡಿದವು. ಕಲಾತಂಡಗಳ ಪ್ರದರ್ಶನವನ್ನು ನೋಡಿದ ಜನರು ಮೆಚ್ಚುಗೆ ಸೂಚಿಸಿದರು. ನಂದಿಧ್ವಜಕ್ಕೆ ಪೂಜೆ ಆಗುತ್ತಿದ್ದಂತೆ ಇತ್ತ ಜಾನಪದ ಕಲಾ ತಂಡಗಳಾದ ವೀರಗಾಸೆ, ಪುರಂವತಿಕೆ, ಕೊಂಬು ಕಹಳೆ, ಕಂಸಾಳೆ, ಪಟ ಕುಣಿತ, ಕೀಲು ಕುದುರೆ, ಚಿಟ್ ಮೇಳ, ಪೂಜಾ ಕುಣಿತ, ಲಂಬಾಣಿ ನೃತ್ಯ, ಹಗಲು ವೇಷ, ದಟ್ಟಿ ಕುಣಿತ, ಕುಡುಬಿ ನೃತ್ಯ, ಗೊಂಡರ ಡಕ್ಕೆ, ಚಿಲಿಪಿಲಿ ಗೊಂಬೆ, ಸಿಂಗಾರಿ ಮೇಳ, ಸುಗ್ಗಿ ಕುಣಿತ, ಗಾರುಡಿ ಗೊಂಬೆ ಸೇರಿದಂತೆ ನಾನಾ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು. ವೈವಿಧ್ಯಮಯ ನೃತ್ಯಗಳು ಜನರನ್ನು ಆಕರ್ಷಿಸಿದವು. ಒಂದೊಂದು ಕಲಾ ತಂಡವೂ ತಮ್ಮದೇ ಆದ ಪ್ರಾದೇಶಿಕ ಅಸ್ಮಿತೆ, ಸಂಸ್ಕೃತಿಯನ್ನು ಪ್ರಸ್ತತಪಡಿಸಿದವು.

ಕೆಂಗಣ್ಣುಗಳೊಂದಿಗೆ ಭಿನ್ನ ವೇಷಭೂಷಣ
ಮೊದಲಿಗೆ ನಂಜನಗೂಡಿನ ಅಂಬಳೆ ಶಿವಣ್ಣ ತಂಡದವರು ವೀರಗಾಸೆ ಪ್ರದರ್ಶನ ನೀಡಿ ಗಮನ ಸೆಳೆದರು. ನಾಲಿಗೆ ಚಾಚುತ್ತ ಕೆಂಗಣ್ಣುಗಳೊಂದಿಗೆ ಭಿನ್ನ ವೇಷಭೂಷಣದಿಂದ ಅದ್ಭುತ ಎನಿಸುವ ನೃತ್ಯ ಪ್ರದರ್ಶನವನ್ನು ನೀಡಿದರು. ಪೊಲೀಸ್ ಇಲಾಖೆಯ ವಾದ್ಯ ವೃಂದವೂ ಗಮನ ಸೆಳೆಯಿತು. ಆಕಾಶದತ್ತ ನೋಡಿ ತಮ್ಮದೇ ಆದ ಶಬ್ದ ಹೊರಡಿಸುತ್ತಾ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕೋರೇಗಾಲ ಸಿ.ಎಚ್.ಶಿವಕುಮಾರ್ ತಂಡ ಕೊಂಬು ಕಹಳೆ ಮೂಲಕ ಸಾಗಿದ್ದು, ಗ್ರಾಮೀಣ ಸೊಗಡನ್ನು ಪ್ರಸ್ತುತಪಡಿಸಿತು. ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಿ ತಲೆಗೆ ಪೇಟ ಸುತ್ತಿ ಕೊಂಬು ಕಹಳೆ ಊದುತ್ತಿದ್ದ ಪರಿಯೇ ಅಮೋಘವಾಗಿತ್ತು.

ಕಂಸಾಳೆ ನೋಡಲು ನೆರೆದಿದ್ದ ಜನಸಾಗರ
ಪ್ರತಿವರ್ಷ ಕಂಸಾಳೆ ನೃತ್ಯ ದಸರಾ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದರೂ ಜನರಿಗೆ ಅದರ ಮೇಲಿನ ಆಸಕ್ತಿ, ಪ್ರೀತಿ ಕಿಂಚಿತ್ತೂ ಕಡಿಮೆ ಆಗಿಲ್ಲ. ಮೈಸೂರು ಜಿಲ್ಲೆ ವರುಣಾ ಹೋಬಳಿಯ ಬಡಗಲಹುಂಡಿ ಮಲೆಮಹದೇಶ್ವರ ಕಂಸಾಳೆ ಕಲಾವಿದರ ಸಂಘದ ಕಂಸಾಳೆ ಗಮನ ಸೆಳೆಯಿತು. ಕಲಾವಿದರು ಕಂಸಾಳೆ ಬೀಸುತ್ತಾ ಪಿರಮಿಡ್ ರಚಿಸಿ, ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಿದ್ದಂತೆ ಅಲ್ಲಿ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಪೋತ್ಸಾಹಿಸಿದರು.

ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಕಲಾವಿದರು
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಶಂಕರ, ಕವಟಗಿ, ಜೈಗಣೇಶ ತಂಡ ಕುಚ್ಚಿನ ಜಾಲರಿಗಳನ್ನು ಹಿಡಿದುಕೊಂಡು ಸಮವಸ ತೊಟ್ಟು "ಝಾಂಜ್ ಪಥಕ್" ನೃತ್ಯ ಮಾಡಿದರು. ಲಯಕ್ಕೆ ತಕ್ಕಂತೆ ಕಲಾವಿದರು ಹೆಜ್ಜೆ ಹಾಕಿದರು. ಅಲ್ಲದೆ, ಧಾರವಾಡ ಜಿಲ್ಲೆಯ ಸುಗ್ಗಿ ಕುಣಿತ, ಸಕಲೇಶಪುರದ ಮಲೆನಾಡ ಸುಗ್ಗಿ ಕುಣಿತ, ಹಾವೇರಿಯ ತಮಟೆ ವಾದ, ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲುಕು ಯಡಹಳ್ಳಿ ಗ್ರಾಮದ ವೈ.ಬಿ.ಪ್ರಕಾಶ್ ತಂಡದ ಪೂಜಾ ಕುಣಿತ, ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ಶಾಂತಾಬಾಯಿ ಯವರೊಂದಿಗಿನ ಕಲಾವಿದರ ಲಂಬಾಣಿ ನೃತ್ಯ, ಬಳ್ಳಾರಿ ಜಿಲ್ಲೆ ಬುಡ್ಗಜಂಗಮ್ ನಗರದ ಅಶ್ವರಾಮಣ್ಣ ಅವರ ಹಗಲು ವೇಷ, ಚಿಕ್ಕಬಳ್ಳಾಪುರದ ಪಿಂಡ ಪಾಪನಹಳ್ಳಿಯ ತಮಟೆ ವಾದನವೂ ಗಮನ ಸೆಳೆಯಿತು.